ಬೆಂಗಳೂರು: ಗೋವಾದ ಕ್ಯಾಸಿನೋದಲ್ಲಿ 25 ಲಕ್ಷ ರೂ. ಗೆದ್ದಿದ್ದ ಟೀ ಮಾರಾಟಗಾರನನ್ನು ಅಪಹರಿಸಿದ್ದ ರೌಡಿಶೀಟರ್, ಇಬ್ಬರು ಕಾನೂನು ವಿದ್ಯಾರ್ಥಿಗಳು ಸೇರಿ 8 ಆರೋಪಿಗಳನ್ನು ಹನುಂತನಗರ ಠಾಣೆ ಪೊಲೀಸರು ಮಹಾರಾಷ್ಟ್ರದ ಶಿರಡಿಯಲ್ಲಿ ಪತ್ತೆಹಚ್ಚಿ ನಗರಕ್ಕೆ ಕರೆತಂದಿದ್ದಾರೆ.
ಹನುಮಂತನಗರದ ಕಾರ್ತಿಕ್, ರಾಹುಲ್, ತರುಣ್, ಮನೋಜ್‌ಕುಮಾರ್, ಈಶ್ವರ್, ರಾಮ್‌ಕುಮಾರ್ ಅಲಿಯಾಸ್ ದೀಪು, ಮೋಹನ್, ನಿಶ್ಚಲ್ ಬಂಧಿತರು. ತಿಲಕ್ ಮಣಿಕಂಠ (32) ಅಪಹರಣಕ್ಕೆ ಒಳಗಾದವ. 12 ಲಕ್ಷ ರೂ.ನಗದು, ಕೃತ್ಯಕ್ಕೆ ಬಳಸಿದ್ದ ಕಾರು, ಬೈಕ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಅಪಹರಣಕ್ಕೆ ಒಳಗಾದ ತಿಲಕ್, ಪೊಲೀಸ್ ಠಾಣೆಗೆ ದೂರು ನೀಡಿರುವುದು ಆರೋಪಿಗಳ ಗಮನಕ್ಕೆ ಬರುತ್ತಿದ್ದಂತೆ ಮೊಬೈಲ್‌ಗಳನ್ನು ಸ್ವಿಚ್‌ಆಫ್ ಮಾಡಿ ಯಶವಂತಪುರಕ್ಕೆ ಬಂದು ರೈಲಿನಲ್ಲಿ ಗೋವಾಕ್ಕೆ ತೆರಳಿದ್ದರು. ಇತ್ತ ಪೊಲೀಸರು ತಿಲಕ್ ಬ್ಯಾಂಕ್ ಖಾತೆಯಿಂದ ಆರೋಪಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆಗೊಂಡಿದ್ದ 15 ಲಕ್ಷ ರೂ. ಅನ್ನು ಫ್ರೀಜ್ ಮಾಡಿಸಿದ್ದರು.
ಶಿರಡಿಯಿಂದ ಬೇರೆ ಕಡೆ ಹೊರಟಿದ್ರು: ಪೊಲೀಸರು ಹುಡುಕಾಡುತ್ತಿರುವ ಸಂಗತಿ ಅರಿತ ಆರೋಪಿಗಳು ವಕೀಲರೊಬ್ಬರ ಮೂಲಕ ನ್ಯಾಯಾಲಯದಿಂದ ಜಾಮೀನು ಪಡೆಯಲು ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ. ಬಳಿಕ ಗೋವಾದಿಂದ ಮುಂಬೈಗೆ ಹೋಗಿ ಮುಂಬೈನಿಂದ ಶಿರಡಿಗೆ ತೆರಳಿದ್ದಾರೆ. ಇತ್ತ ಕಾರ್ಯಾಚರಣೆಗೆ ಇಳಿದ ಖಾಕಿ ತಾಂತ್ರಿಕ ಕಾರ್ಯಾಚರಣೆ ನಡೆಸಿದಾಗ ಆರೋಪಿಗಳು ಶಿರಡಿಯಲ್ಲಿರುವ ಸುಳಿವು ಸಿಕ್ಕಿತ್ತು. ಕೂಡಲೇ ಹನುಂತನಗರ ಪೊಲೀಸರ ತಂಡ ಶಿರಡಿಗೆ ತೆರಳಿ ಆರೋಪಿಗಳಿಗಾಗಿ ಎರಡು ದಿನಗಳ ಕಾಲ ಶೋಧ ನಡೆಸಿತ್ತು. ಶಿರಡಿಯಿಂದ ಬಸ್‌ನಲ್ಲಿ ಬೇರೆ ಪ್ರದೇಶಕ್ಕೆ ತೆರಳಲು ಮುಂದಾದ ವೇಳೆ ಪೊಲೀಸರು ಇವರನ್ನು ಪತ್ತೆ ಹಚ್ಚಿ ಲಾಕ್ ಮಾಡಿ ನಗರಕ್ಕೆ ಕರೆ ತಂದಿದ್ದಾರೆ.
ಬಾಲ್ಯ ಸ್ನೇಹಿತರಿಂದಲೇ ಕೃತ್ಯ: ಆರೋಪಿಗಳಾದ ಕಾರ್ತಿಕ್, ದೀಪು ಅಪಹರಣಕ್ಕೊಳಗಾದ ತಿಲಕ್‌ಗೆ ಬಾಲ್ಯ ಸ್ನೇಹಿತರಾಗಿದ್ದರು. ಉಳಿದ ಆರೋಪಿಗಳು ಕಾರ್ತಿಕ್, ದೀಪು ಸ್ನೇಹಿತರಾಗಿದ್ದರು. ತಿಲಕ್ ಗೋವಾದಲ್ಲಿ ಕ್ಯಾಸಿನೋದಲ್ಲಿ 25 ಲಕ್ಷ ರೂ. ದುಡ್ಡು ಸಿಕ್ಕಿರುವುದು ಆರೋಪಿಗಳ ಗಮನಕ್ಕೆ ಬಂದಿತ್ತು. ಆ.5ರಂದು ತಿಲಕ್‌ನನ್ನು ತಾವಿದ್ದಲ್ಲಿಗೆ ಕರೆಸಿದ ಆರೋಪಿಗಳು ಕಾರಿನಲ್ಲಿ ನೆಲಮಂಗಲದ ಬಳಿ ಆರೋಪಿ ತರುಣ್ ಫಾರ್ಮ್ಹೌಸ್‌ಗೆ ಕರೆದು ಕೊಂಡು ಹೋಗಿದ್ದರು. ಅಲ್ಲಿನ ಕೊಠಡಿಯೊಂದರಲ್ಲಿ ತಿಲಕ್‌ನನ್ನು ಕೂಡಿ ಹಾಕಿ ಆತನ ಮೊಬೈಲ್‌ನಿಂದ ಆನ್‌ಲೈನ್ ಮೂಲಕ ಆರೋಪಿಗಳ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಜಮೆ ಮಾಡಿಸಿಕೊಂಡಿದ್ದಾರೆ. ಕಾರ್ತಿಕ್‌ನಿಗೆ ಹಲ್ಲೆ ನಡೆಸಿ ಬೆಂಗಳೂರು ನಗರಕ್ಕೆ ಕರೆ ತಂದು ಪರಾರಿಯಾಗಿದ್ದರು. ಇತ್ತ ಹನುಮಂತನಗರ ಠಾಣೆಗೆ ತಿಲಕ್ ದೂರು ನೀಡಿದ್ದ.
ಏನಿದು ಪ್ರಕರಣ? :
ನಗರದಲ್ಲಿ ಟೀ ವ್ಯಾಪಾರ ಮಾಡುತ್ತಿದ್ದ ತಿಲಕ್ ಗೋವಾಕ್ಕೆ ತೆರಳಿ ಅಲ್ಲಿ ಕ್ಯಾಸಿನೊ ಆಡುವ ಆಸೆ ಹೊಂದಿದ್ದ. ಕ್ಯಾಸಿನೊ ಜೂಜಿನ ಬಗ್ಗೆ ಮಾಹಿತಿ ಪಡೆದುಕೊಂಡು 4 ಲಕ್ಷ ರೂ. ಹೊಂದಿಸಿಕೊಂಡು ಸ್ನೇಹಿತರ ಜೊತೆಗೆ ಕಳೆದ ಜುಲೈ 30ರಂದು ಬೆಂಗಳೂರಿನಿಂದ ಪಣಜಿಗೆ ವಿಮಾನದ ಮೂಲಕ ಹೋಗಿದ್ದ. ಮೂರು-ನಾಲ್ಕು ದಿನ ಅಲ್ಲೇ ಉಳಿದು ಅಲ್ಲಿನ ಕ್ಯಾಸಿನೊವೊಂದರಲ್ಲಿ ಜೂಜಾಡಿ 25 ಲಕ್ಷ ರೂ. ಗೆದಿದ್ದ. ಜೂಜಿನಲ್ಲಿ 25 ಲಕ್ಷ ರೂ ಹಣ ಗೆದ್ದ ವಿಚಾರವನ್ನು ಕುಟುಂಬಸ್ಥರು, ಸ್ನೇಹಿತರಿಗೆ ತಿಳಿಸಿದ್ದ.
ಒಬ್ಬ ರೌಡಿ, ಇಬ್ಬರು ಕಾನೂನು ವಿದ್ಯಾರ್ಥಿಗಳು :
ಆರೋಪಿಗಳ ಪೈಕಿ ಕಾರ್ತಿಕ್ ಬನಶಂಕರಿ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿದ್ದರೆ, ಮತ್ತಿಬ್ಬರು ಆರೋಪಿಗಳು ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದರು. ಇನ್ನು ಕೆಲವರು ಡೆಲಿವರಿ ಬಾಯ್ ಸೇರಿ ಸಣ್ಣ-ಪುಟ್ಟ ಕೆಲಸ ಮಾಡುತ್ತಿದ್ದರು. ಕಾನೂನು ವಿದ್ಯಾರ್ಥಿಗಳಿಬ್ಬರಿಗೂ ಪ್ರಕರಣದ ಸಂಪೂರ್ಣ ಮಾಹಿತಿ ಇರಲಿಲ್ಲ. ಪ್ರಮುಖ ಆರೋಪಿಗಳು ದುಡ್ಡು ಕೊಡುವುದಾಗಿ ಆಮೀಷವೊಡ್ಡಿದ್ದಕೆ ಕೈ ಜೋಡಿಸಿದ್ದರು. ಇನ್ನು ಕ್ಯಾಸಿನೋದಲ್ಲಿ ತಿಲಕ್ ದುಡ್ಡು ಗಳಿಸಿದ ಹಿನ್ನೆಲೆಯಲ್ಲಿ ಅದಕ್ಕೆ ಸೂಕ್ತ ದಾಖಲೆ ಕೊಡಲು ಆಗದೇ ಪೊಲೀಸರಿಗೆ ದೂರು ನೀಡುವ ಸಾಧ್ಯತೆಗಳಿಲ್ಲ ಎಂದು ಭಾವಿಸಿ ಆರೋಪಿಗಳು ಕೃತ್ಯ ಎಸಗಲು ಸಂಚು ರೂಪಿಸಿದ್ದರು ಎಂಬುದು ಅವರ ವಿಚಾರಣೆ ವೇಳೆ ಗೊತ್ತಾಗಿದೆ.