Advertisement

ವಿಶ್ವವಿದ್ಯಾನಿಲಯಕ್ಕೆ ಕಾಲಿಡದವರು ತತ್ವ-ಆದರ್ಶ ಮಾತಾಡ್ತಾರೆ

12:27 PM Mar 16, 2018 | Team Udayavani |

ಮೈಸೂರು: ಸಂಶೋಧಕರಲ್ಲಿ ಶಿಸ್ತು, ಆಸಕ್ತಿ ಇರಬೇಕು. ಸಂಶೋಧನಾ ಪ್ರಬಂಧವನ್ನು ನೋಡಿದವರು ತಲೆದೂಗುವಂತಿರಬೇಕು ಎಂದು ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್‌ ಕಿವಿಮಾತು ಹೇಳಿದರು. ಮೈಸೂರು ವಿವಿ ಸಂಶೋಧಕರ ಸಂಘದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಶಿಸ್ತು ಇಲ್ಲದಿದ್ದಲ್ಲಿ, ವಿದ್ಯಾರ್ಥಿಗಳು ದುಂಬಿಗಳಂತೆ ಎಲ್ಲೆಲ್ಲಿ ಹಾರುತ್ತಾರೋ ಗೊತ್ತಾಗುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಮೊದಲು ಶಿಸ್ತು ಮೈಗೂಡಿಸಿಕೊಳ್ಳಬೇಕು ಎಂದರು. ಅಂಬೇಡ್ಕರ್‌ ಅವರಲ್ಲಿ ಶಿಸ್ತು ಮತ್ತು ಸಮಯಪ್ರಜ್ಞೆ ಇತ್ತು.

ಹೀಗಾಗಿಯೇ ಅವರು ಅಮೆರಿಕಾ ವಿಶ್ವವಿದ್ಯಾನಿಲಯದಲ್ಲಿ ಓದುವಾಗ, ಭಾರತದ ಸ್ವಾತಂತ್ರ್ಯಕ್ಕಾಗಿ ಅಲ್ಲಿ ಲಾಲಲಜಪತರಾಯ್‌ ಅವರು ಭೂಗತ ಚಳವಳಿಗೆ ಸೇರಿಕೊಳ್ಳುವಂತೆ ಕರೆದಾಗ ಅಂಬೇಡ್ಕರ್‌ ಮೊದಲು ಶಿಕ್ಷಣ, ಆನಂತರ ಚಳವಳಿ ಎಂದು ಶಿಕ್ಷಣಕ್ಕೆ ಆದ್ಯತೆ ನೀಡಿ, ಓದು ಮುಗಿಸಿ ಬಂದ ಮೇಲೆ ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿಕೊಂಡರು ಎಂದು ಹೇಳಿದರು.

ರಕ್ತಪಾತಕ್ಕೆ ಅಂಬೇಡ್ಕರ್‌ ಆಸ್ಪದ ನೀಡಲಿಲ್ಲ: ಪೂನಾ ಒಪ್ಪಂದದ ಸಂದರ್ಭದಲ್ಲಿ ಅಂಬೇಡ್ಕರ್‌ ಅವರು ಗಾಂಧೀಜಿ ಜತೆಗೆ ಒಪ್ಪಂದ ಮಾಡಿಕೊಳ್ಳದೆ ಸ್ವಲ್ಪ ಎಚ್ಚರ ತಪ್ಪಿದ್ದರೂ ರಕ್ತಪಾತ ಆಗುತ್ತಿತ್ತು. ಅದಕ್ಕೆ ಅಂಬೇಡ್ಕರ್‌ ಆಸ್ಪದ ನೀಡಲಿಲ್ಲ ಎಂದರು.

ವಿದ್ಯಾರ್ಥಿಗಳು ಹಾಸ್ಟೆಲ್‌, ತಮ್ಮ ವಿಭಾಗಗಳಲ್ಲಿ ಶಿಸ್ತು ಕಾಪಾಡಿಕೊಂಡು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ವಿಶ್ವವಿದ್ಯಾನಿಲಯದಲ್ಲಿ ಶಿಸ್ತು ತರಲು ಬಹಳ ಪ್ರಯತ್ನ ಮಾಡಿದರೂ ನಮ್ಮಲ್ಲಿನ ಹತ್ತಾರು ಗುಂಪುಗಳಿಂದಾಗಿ ಆ ಕೆಲಸ ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಾಕಷ್ಟು ಬಾರಿ ಭೇಟಿ ನೀಡಿ, ಇಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದೇನೆ. ಆದರೆ, ಅಧಿಕಾರವೊಂದೇ ಗುರಿಯಾಗಿ ವಿಶ್ವವಿದ್ಯಾನಿಲಯಕ್ಕೆ ಕಾಲೇ ಹಾಕದಿರುವವರು ಇಂದು ಬುದ್ಧ, ಬಸವ, ಅಂಬೇಡ್ಕರ್‌ ಬಗ್ಗೆ ಬಹಳ ಮಾತನಾಡುತ್ತಾರೆ. ಲೆನಿನ್‌, ಸ್ಟಾಲಿನ್‌ ಬಗ್ಗೆಯೂ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಪ್ರಸಾದ್‌ ಕೆಲಸಕ್ಕೆ ಪ್ರಚಾರ ಸಿಗಲಿಲ್ಲ: ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಕಂದಾಯ ಸಚಿವರಾಗಿ ಶ್ರೀನಿವಾಸಪ್ರಸಾದ್‌ ಅವರು ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದ್ದಾರೆ. ಆದರೆ, ಆ ಕೆಲಸಗಳನ್ನು ಗುರುತಿಸದೆ, ಅವರ ಆರೋಗ್ಯ ಸರಿಯಿಲ್ಲ ಎಂದು ಪ್ರಚಾರ ಮಾಡಿದರು.

ಕಂದಾಯ ಇಲಾಖೆಯಲ್ಲಿ 2 ಸಾವಿರ ಭೂ ಮಾಪಕರ ನೇಮಕ, ಮನಸ್ವಿನಿ ಯೋಜನೆ ಜಾರಿ, ಮೈಸೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ಮಹಾರಾಣಿ ಕಾಲೇಜು, ಅಂಬೇಡ್ಕರ್‌ ಭವನ ನಿರ್ಮಾಣ ಅವರ ಕನಸಾಗಿತ್ತು. ಆದರೆ, ಅವರ ಕೆಲಸಗಳಿಗೆ ಪ್ರಚಾರ ಸಿಗಲಿಲ್ಲ ಎಂದರು.

ಬುದ್ಧ, ಬಸವ ಅಂಬೇಡ್ಕರ್‌ ತತ್ವ-ಆದರ್ಶಗಳನ್ನು ಪಾಲಿಸುತ್ತಿದ್ದೇನೆ ಎನ್ನುವವರು, ರಾಜ್ಯದಲ್ಲಿ ವೀರಶೈವ-ಲಿಂಗಾಯತ ಸಮಾಜ ಒಡೆಯುವ ದೊಡ್ಡ ಕೆಲಸಕ್ಕೆ ಕೈಹಾಕಿದ್ದಾರೆ. ಸಮಾಜ ಒಡೆಯುವ ಕೆಲಸದಲ್ಲಿ ದಾಖಲೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಡಾ.ಪ್ರೀತಿ ಶ್ರೀಮಂಧರಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿವಿ ಆಡಳಿತಧಿಕಾರಿ ಡಿ.ಕೆ.ಶ್ರೀನಿವಾಸ್‌, ಸಂಶೋಧನಾ ನಿರ್ದೇಶನಾಲಯದ ಸಂಯೋಜನಾಧಿಕಾರಿ ಟಿ.ಎಸ್‌.ಜಗದೀಶ್‌, ಸಂಶೋಧಕರ ಸಂಘದ ಅಧ್ಯಕ್ಷ ಮೂರ್ತಿ ಬಿ., ಪ್ರಧಾನ ಕಾರ್ಯದರ್ಶಿ ಶಿವಶಂಕರ ಮೂರ್ತಿ ಡಿ.ಆರ್‌. ಮೊದಲಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next