ಬಾಲಸೋರ್: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಒಡಿಶಾದ ಬಾಲಸೋರ್‌ನಲ್ಲಿ ರೈಲುಗಳ ಭೀಕರ ಅಪಘಾತ ಸ್ಥಳಕ್ಕೆ ಭೇಟಿ ನೀಡಿದ್ದು, ಇದಕ್ಕೆ ಕಾರಣರಾದವರಿಗೆ “ಕಠಿಣ ಶಿಕ್ಷೆ ವಿಧಿಸಲಾಗುವುದು” ಎಂದು ಹೇಳಿದ್ದಾರೆ.
ದುರಂತದಲ್ಲಿ ಕುಟುಂಬಸ್ಥರನ್ನು ಕಳೆದುಕೊಂಡವರ ಜತೆ ಸರ್ಕಾರ ನಿಂತಿದೆ.ಇದೊಂದು ನೋವಿನ ಘಟನೆ. ಗಾಯಗೊಂಡವರ ಚಿಕಿತ್ಸೆಗೆ ಸರ್ಕಾರ ಎಲ್ಲ ನೆರವನ್ನು ನೀಡಲಿದೆ. ಇದು ಗಂಭೀರ ಘಟನೆಯಾಗಿದೆ, ಪ್ರತಿ ಕೋನದಿಂದ ತನಿಖೆಗೆ ಸೂಚನೆಗಳನ್ನು ನೀಡಲಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು” ಎಂದು ಹೇಳಿದರು.
ಎರಡು ದಶಕಗಳಿಗಿಂತಲೂ ಹೆಚ್ಚು ಅವಧಿಯಲ್ಲಿ ನಡೆದ ದೇಶದ ಅತ್ಯಂತ ಭೀಕರ ರೈಲು ಅಪಘಾತದಲ್ಲಿ ಕನಿಷ್ಠ 288 ಜನರು ಸಾವನ್ನಪ್ಪಿದ್ದಾರೆ ಮತ್ತು 800 ಜನರು ಗಾಯಗೊಂಡಿದ್ದಾರೆ.
ಭುವನೇಶ್ವರದಿಂದ ಉತ್ತರಕ್ಕೆ 170 ಕಿಮೀ ದೂರದಲ್ಲಿರುವ ಬಾಲಸೋರ್ ಜಿಲ್ಲೆಯ ಬಹನಾಗ ಬಜಾರ್ ನಿಲ್ದಾಣದಲ್ಲಿ ಘಟನೆ ನಡೆದ ಸ್ಥಳದ ಬಳಿ ಪ್ರಧಾನಿ ಮೋದಿ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಬಂದಿಳಿದರು. ಅಪಘಾತದಲ್ಲಿ ಬದುಕುಳಿದವರನ್ನು ಭೇಟಿ ಮಾಡಲು ಅವರು ಬಾಲಸೋರ್ ಜಿಲ್ಲಾ ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ಭೇಟಿ ಮಾಡಿದರು. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಸ್ಥಳವನ್ನು ಪರಿಶೀಲಿಸಿದರು.
Related Articles
ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲುಗಳ ನಡುವೆ ಭೀಕರ ಅವಘಡ ಸಂಭವಿಸಿದೆ. ರೈಲ್ವೆ ಅಧಿಕಾರಿಗಳ ಪ್ರಕಾರ ಎರಡು ರೈಲುಗಳಲ್ಲಿ 3,400 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ರಾಜ್ಯಕ್ಕೆ ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸಿ ಆಸ್ಪತ್ರೆಗಳಲ್ಲಿ ಗಾಯಗೊಂಡವರನ್ನು ಭೇಟಿಯಾಗಿದ್ದಾರೆ. ಅವರ ಒಡಿಶಾ ಸಹವರ್ತಿ ನವೀನ್ ಪಟ್ನಾಯಕ್ ಅವರು ಶುಕ್ರವಾರ ಬೆಳಗ್ಗೆ ಬಾಲಸೋರ್‌ಗೆ ಭೇಟಿ ನೀಡಿದರು ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಅಪಘಾತದ ಬಳಿಕ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಮರುಸ್ಥಾಪನೆ ಕಾರ್ಯ ಪ್ರಾರಂಭವಾಗಿದೆ ಎಂದು ರೈಲ್ವೇ ವಕ್ತಾರ ಅಮಿತಾಭ್ ಶರ್ಮಾ ಘಟನೆಯ 18 ಗಂಟೆಗಳ ನಂತರ ತಿಳಿಸಿದ್ದಾರೆ.