ತಾಳಿಕೋಟೆ: ಚಿಕ್ಕ ಮಕ್ಕಳಿಗೆ ಕಲಿಕೆಯ ಬುನಾದಿ ಹಾಕುವ ಅಂಗನವಾಡಿ ಕೇಂದ್ರದ ಸುತ್ತಲೂ ಸ್ವತ್ಛತೆ ಕಾಪಾಡಬೇಕಾದ ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಲ್ಲು ಮುಳ್ಳಿನ ಕಂಠಿಗಳ ಪೊದೆ ಬೆಳೆದು ನಿಂತಿವೆ. ಹಂದಿಗಳು ಹಾಗೂ ವಿಷ ಜಂತುಗಳ ವಾಸಸ್ಥಳವಾಗಿ ಮಾರ್ಪಟ್ಟಿದ್ದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಹಿಂಜರಿಯುವಂತಾಗಿದೆ.
ತಾಲೂಕಿನ ಕಲಕೇರಿ ಗ್ರಾಮದಲ್ಲಿಯ ವಾರ್ಡ್ ನಂ. 2ರ ತಾಂಡಕ್ಕೆ ತೆರಳುವ ಮುಖ್ಯ ರಸ್ತೆಯ ಮಗ್ಗಲು ಜಿಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ವತಿಯಿಂದ 2015-16 ಸಾಲಿನಲ್ಲಿ ವಿಶೇಷ ಅಭಿವೃದ್ಧಿ
ಯೋಜನೆಯಡಿ ನೂತನ ಕಟ್ಟಡವನ್ನು ನಿರ್ಮಿಸಲಾಗಿದೆ.
ಈ ಕೇಂದ್ರದಲ್ಲಿ ಸುಮಾರು ಪ್ರತಿನಿತ್ಯ 40ಕ್ಕೂ ಹೆಚ್ಚು ಮಕ್ಕಳು ಕಲಿಕೆಗಾಗಿ ಹೋಗುತ್ತಾರೆ. ಮಕ್ಕಳಿಗೆ ಪಾಠದ ಜೊತೆಗೆ ಆಟವೂ ಅಷ್ಟೇ ಮುಖ್ಯ. ಆದರೆ ಈ ಕೇಂದ್ರದ ಸುತ್ತಲಿನ ಪ್ರದೇಶದಲ್ಲಿ ಸಾಕಷ್ಟು ವಿಶಾಲ ಮೈದಾನವಿದ್ದರೂ ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಲ್ಲೆಲ್ಲವೂ ಕಲ್ಲು ಮುಳ್ಳುಗಳೆ ರಾರಾಜಿಸುತ್ತಿವೆ.
ಕೇಂದ್ರದ ಕಟ್ಟಡದ ಸೂತ್ತ ಮುಳ್ಳಿನ ಕಂಠಿಗಳ ಪೊದೆ ತುಂಬಿಕೊಂಡಿದೆ. ಇದರಿಂದ ಮಕ್ಕಳು ಆಟವಾಡುವುದು ಒತ್ತಟ್ಟಿಗಿರಲಿ ನಡೆದಾಡಿಕೊಂಡು ಮನೆಗೆ ಹೋಗುವುದೇ ದುಸ್ತರವೆಂಬಂತಾಗಿದೆ. ಈ ಮುಳ್ಳು ಕಂಠಿಗಳಿಂದ ವಿಷಪೂರಿತ ಕ್ರಿಮಿ ಕೀಟಗಳು ಈ ಕೇಂದ್ರದ ಸುತ್ತಲೂ ಕಾಣಿಸಿಕೊಳ್ಳುತ್ತಿದ್ದು ಮಕ್ಕಳಿಗೆ ಅಂಗನವಾಡಿ ಕೇಂದ್ರಕ್ಕೆ ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಅಂಗನವಾಡಿ ಕೇಂದ್ರದ ಸುತ್ತಮುತ್ತಲಿನ ಪ್ರದೇಶದ ಸ್ವತ್ಛತೆ ಮಾಡಲು ಮಕ್ಕಳ ಪಾಲಕರು ಸಾಕಷ್ಟು ಬಾರಿ ಗ್ರಾಪಂ ಅಧಿಕಾರಿಗಳಿಗೆ ಮೇಲಿಂದ ಮೇಲೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ಸ್ವತ್ಛ ಭಾರತವೆಂದು ಪೊರಕೆ ಹಿಡಿದು ನಡು ಬೀದಿಯಲ್ಲಿ ಕಸಗೂಡಿಸಿದಂತೆ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳವ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯವರು ಈ ಅಂಗನವಾಡಿ ಕೇಂದ್ರಕಡೆಗೆ ಕಣ್ತೆರೆದು ಈಗಲಾದರೂ ನೋಡುತ್ತಾರೋ ಕಾದು ನೋಡಬೇಕಿದೆ.
ಅಂಗನವಾಡಿ ಕೇಂದ್ರದ ಸುತ್ತಲಿನ ಪ್ರದೇಶ ಸ್ವತ್ಛಗೊಳಿಸಲು ಕಲಕೇರಿ ಗ್ರಾಪಂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡುತ್ತ ಬಂದಿದ್ದೇವೆ. ಆದರೂ ಇಲ್ಲಿವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಮಕ್ಕಳಿಗೆ ವಿಷ ಜಂತುಗಳಿಂದ ಏನಾದರೂ ಅನಾಹುತವಾದರೆ ಗ್ರಾಪಂ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆ.
ಪ್ರವೀಣ ಜಗಶೆಟ್ಟಿ, ಕರವೇ ವಲಯ ಅಧ್ಯಕ್ಷ್ಯ
ಕಲಕೇರಿ ಗ್ರಾಮದ 2ನೇ ವಾರ್ಡ್‌ನಲ್ಲಿ ಅಂಗನವಾಡಿ ಕೇಂದ್ರವಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸ್ವತ್ಛತೆಗೆ ಕ್ರಮ ಕೈಗೊಳ್ಳುತ್ತೇನೆ.
ಸಿದ್ದಮ್ಮ ಬೇಡರ, ಕಲಕೇರಿ ಗ್ರಾಪಂ ಅಧ್ಯಕ್ಷ್ಯ
ಜಿ.ಟಿ. ಘೋರ್ಪಡೆ