Thokkottu: ಜೀಪು ಢಿಕ್ಕಿ; ಸ್ಕೂಟರ್ ಸವಾರ ಸಾವು
Team Udayavani, Dec 16, 2024, 7:45 AM IST
ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿಯ ಸರ್ವೀಸ್ ರಸ್ತೆಯಲ್ಲಿ ಅತೀ ವೇಗದಲ್ಲಿ ಆಗಮಿಸಿದ ಜೀಪ್, ಸ್ಕೂಟರ್‌ಗೆ ಢಿಕ್ಕಿ ಹೊಡೆದು ಸವಾರ ಮೃತಪಟ್ಟಿದ್ದಾರೆ. ಸಹ ಸವಾರೆ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಳ್ಳಾಲ ತಾಲೂಕಿನ ಹರೇಕಳ ಗ್ರಾಮದ ಸಂಪಿಗೆದಡಿ ನಿವಾಸಿ ಅರುಣ್ ಕುಮಾರ್ (43) ಮೃತಪಟ್ಟವರು. ಸ್ಕೂಟರ್‌ನ ಹಿಂಬದಿಯಲ್ಲಿದ್ದ ರಾಣಿಪುರ ನಿವಾಸಿ ಹೇಮಾವತಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅರುಣ್ ಅವರು ತೊಕ್ಕೊಟ್ಟು ಕಾಪಿಕಾಡಿನ ವೈನ್ ಆ್ಯಂಡ್ ಡೈನ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ವೈಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಶನಿವಾರ ರಾತ್ರಿ ಕೆಲಸ ಮುಗಿಸಿ ತನ್ನ ಸ್ಕೂಟರ್‌ನಲ್ಲಿ ಬಾರ್‌ನ ಸ್ವಚ್ಛತಾ ಸಿಬಂದಿ ರಾಣಿಪುರ ನಿವಾಸಿ ಹೇಮಾವತಿಯವರನ್ನು ಕುಳ್ಳಿರಿಸಿಕೊಂಡು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಮನೆಗೆ ಹಿಂದಿರುಗುವಾಗ ಜೀಪ್ ಮುಖಾಮುಖೀ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಸ್ಕೂಟರ್ ಸವಾರ ಅರುಣ್ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಮಂಗಳೂರು ದಕ್ಷಿಣ ಸಂಚಾರ ಠಾಣೆ ಪೊಲೀಸರು ಜೀಪ್ ಚಾಲಕ ಉಳ್ಳಾಲಬೈಲ್ ನಿವಾಸಿ ಶಶಾಂಕ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅರುಣ್ ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮನೆಗೆ ಇವರೊಬ್ಬರೇ ಆಧಾರಸ್ಥಂಭವಾಗಿದ್ದು, ತಂದೆ, ತಾಯಿ ಅನಾರೋಗ್ಯದಲ್ಲಿದ್ದು, ಇವರೇ ಆರೈಕೆ ಮಾಡುತ್ತಿದ್ದರು.