Advertisement

ಈ ವರ್ಷ ನಡೆಯಲಿದೆ ಸರಣಿ ಶಸ್ತ್ರಾಸ್ತ್ರ ಪರೀಕ್ಷೆ

10:51 AM May 08, 2022 | Team Udayavani |

ಹೊಸದಿಲ್ಲಿ: ಭಾರತೀಯ ಸೇನೆಯು ಪ್ರಸಕ್ತ ವರ್ಷ ಕ್ಷಿಪಣಿಗಳಿಂದ ಹಿಡಿದು ಗ್ಲೈಡ್ ಬಾಂಬ್‌ವರೆಗೆ ಶಸ್ತ್ರಾಸ್ತ್ರ ಪರೀಕ್ಷೆಗಳ ಸರಣಿಯನ್ನು ನಡೆಸಲು ಸಜ್ಜಾಗಿದೆ. ಈ ತಿಂಗಳಿನಲ್ಲೇ ಮೂರು ಪ್ರಮುಖ ಪರೀಕ್ಷೆಗಳು ನಡೆಯಲಿದ್ದು, ವರ್ಷಾಂತ್ಯಕ್ಕೆ ರಕ್ಷಣ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ಡಿಆರ್‌ಡಿಒ) ವತಿಯಿಂದ “ಅಸ್ತ್ರ-3’ರ ಪ್ರಯೋಗವೂ ನಡೆಯಲಿದೆ.

Advertisement

100 ಕಿ.ಮೀ. ದೂರ ಚಿಮ್ಮುವ ಸಾಮರ್ಥ್ಯ ಹೊಂದಿರುವ “ಅಸ್ತ್ರ-1′, 160 ಕಿ.ಮೀ. ದೂರದ ಗುರಿ ತಲುಪುವ ಸಾಮರ್ಥ್ಯದ “ಅಸ್ತ್ರ-2′, ಹೊಸ ತಲೆಮಾರಿನ ವಿಕಿರಣ ನಿಗ್ರಹ ಕ್ಷಿಪಣಿ (ಎನ್‌ಜಿಆರ್‌ಎಎಂ) ರುದ್ರಂ-1ರ ಪರೀಕ್ಷೆಗಳು ಇದೇ ತಿಂಗಳಲ್ಲಿ ನಡೆಯಲಿವೆ. ರುದ್ರಂ-1 ಕ್ಷಿಪಣಿ 150 ಕಿ.ಮೀ. ದೂರದ ಶತ್ರು ನೆಲೆಯನ್ನು ಧ್ವಂಸಗೊಳಿಸುವ ಛಾತಿ ಹೊಂದಿದೆ.

ಮೊದಲ ಪರೀಕ್ಷೆ
ಸುಖೋಯ್‌ ಎಂಕೆಐ 30 ಯುದ್ಧ ವಿಮಾನದ ಮೂಲಕ “ಅಸ್ತ್ರ-2’ರ ಮೊದಲ ಪರೀಕ್ಷೆ ನಡೆಯಲಿದೆ. “ಅಸ್ತ್ರ-1′ ಕ್ಷಿಪಣಿಯ ಪರೀಕ್ಷೆ ಕೂಡ ಸುಖೋಯ್‌ ಮೂಲಕವೇ ನಡೆಯಲಿದೆ. ಐಎಎಫ್ ಈಗಾಗಲೇ 250 “ಅಸ್ತ್ರ-1′ ಕ್ಷಿಪಣಿಯನ್ನು ಖರೀದಿಸುವ ನಿಟ್ಟಿನಲ್ಲಿ ಬೇಡಿಕೆ ಸಲ್ಲಿಸಿದೆ. ಧ್ವನಿಯ ವೇಗಕ್ಕಿಂತ ನಾಲ್ಕು ಪಟ್ಟು ಹೆಚ್ಚು ವೇಗವನ್ನು ಈ ಕ್ಷಿಪಣಿಗಳು ಹೊಂದಿವೆ.

ರಕ್ಷಣ ಅಭಿವೃದ್ಧಿ ಮತ್ತು ಸಂಶೋಧನ ಸಂಸ್ಥೆ (ಡಿಆರ್‌ಡಿಒ)ಯ “ಅಸ್ತ್ರ-3’ರ ಪರೀಕ್ಷೆ ವರ್ಷಾಂತ್ಯಕ್ಕೆ ನಡೆಯಲಿದೆ. ಅದು 350 ಕಿ.ಮೀ. ದೂರದ ಶತ್ರು ನೆಲೆಯನ್ನು ಛೇದಿಸುವ ಸಾಮರ್ಥ್ಯ ಹೊಂದಿರಲಿದೆ. ಈ ವರ್ಷವೇ “ರುದ್ರಂ’ ಸರಣಿಯ 2 ಕ್ಷಿಪಣಿಗಳ ಪರೀಕ್ಷೆ ನಡೆಯುವುದು ಬಹುತೇಕ ಖಚಿತ. ಇವು 350 ಕಿ.ಮೀ. ದೂರದ ಶತ್ರು ನೆಲೆಯನ್ನು ನಾಶಗೊಳಿಸುವ ಸಾಮರ್ಥ್ಯ ಹೊಂದಿದ್ದು, ಗಗನದಿಂದ ನೆಲದಲ್ಲಿರುವ ಶತ್ರು ನೆಲೆಯನ್ನು ಕರಾರುವಾಕ್ಕಾಗಿ ಛೇದಿಸಲು ಬಳಸಲಾಗುತ್ತದೆ.

“ಅಸ್ತ್ರ’ದ ಹೆಗ್ಗಳಿಕೆ ಏನು?
-“ಅಸ್ತ್ರ’ ಸರಣಿಯ ಕ್ಷಿಪಣಿಗಳು ಸರ್ವಋತುಗಳಲ್ಲಿಯೂ ಕೆಲಸ ಮಾಡುವ ಸಾಮರ್ಥ್ಯ ಹೊಂದಿವೆ
-ಸೂಪರ್‌ಸಾನಿಕ್‌ ವೇಗದಲ್ಲಿ ಆಗಮಿಸುವ ಶತ್ರು ದೇಶಗಳ ಕ್ಷಿಪಣಿಗಳನ್ನು ನಾಶಮಾಡಬಲ್ಲವು.
-ಈ ಪ್ರಯೋಗ ಯಶಸ್ವಿಯಾದರೆ ಇಸ್ರೇಲ್‌, ಫ್ರಾನ್ಸ್‌, ರಷ್ಯಾದಿಂದ ಖರೀದಿಸಲಾಗುವ ಹೆಚ್ಚಿನ ವೆಚ್ಚದ ಕಣ್ಣಳತೆ ವ್ಯಾಪ್ತಿ ಮೀರುವ ವೈಮಾನಿಕ ಕ್ಷಿಪಣಿ (ಬಿವಿಆರ್‌ಎಎಎಂ)ಗಳಿಗೆ ಪರ್ಯಾಯವಾಗಿ ಕಾರ್ಯನಿರ್ವಹಿಸಲಿವೆ.

Advertisement

ಸ್ಮಾರ್ಟ್‌ ಬಾಂಬ್‌ ವ್ಯವಸ್ಥೆ
ಸ್ಮಾರ್ಟ್‌ ಆ್ಯಂಟಿ-ವಾರ್‌ಫೀಲ್ಡ್‌ ವೆಪನ್‌ (ಎಸ್‌ಎಎಡಬ್ಲ್ಯು) ಎನ್ನುವ ಬಾಂಬ್‌ ದಾಳಿ ವ್ಯವಸ್ಥೆಯನ್ನು ಕೂಡ ದೇಶದಲ್ಲೇ ಅಭಿವೃದ್ಧಿಪಡಿಸಲಾಗುತ್ತಿದೆ. ಇದು 100 ಕಿ.ಮೀ. ದೂರದಲ್ಲಿರುವ ಶತ್ರುರಾಷ್ಟ್ರಗಳ ರನ್‌ವೇ, ಬಂಕರ್‌, ಏರ್‌ಕ್ರಾಫ್ಟ್ ಹ್ಯಾಂಗರ್‌ಗಳು, ರಾಡಾರ್‌ಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿರಲಿದೆ. ಸುಖೋಯ್‌ ಅಥವಾ ಜಾಗ್ವಾರ್‌ ಯುದ್ಧವಿಮಾನಗಳ ಮೂಲಕ ತಲಾ 125 ಕೆ.ಜಿ.ಯ 32 ಬಾಂಬ್‌ಗಳನ್ನು ಹೊತ್ತೂಯ್ಯಲು ಸಾಧ್ಯವಾಗುವಂತೆ ಇದನ್ನು ನಿರ್ಮಿಸಲಾಗುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next