Advertisement

ರಸ್ತೆ ಬದಿ ನೆಡುತೋಪು ನಿರ್ಮಾಣ ಈ ವರ್ಷ ಕಷ್ಟ

03:45 AM Feb 12, 2017 | |

ಹಾವೇರಿ: ರಾಜ್ಯಾದ್ಯಂತ ರಸ್ತೆ ಬದಿ ನೆಡುತೋಪು ನಿರ್ಮಾಣಕ್ಕೆ ಹಣ ಕಾಯ್ದಿರಿಸುವ ಬಗ್ಗೆ ರಾಜ್ಯ ಸರ್ಕಾರ 20 ದಿನಗಳ ಹಿಂದೆಯೇ ಆದೇಶ ಹೊರಡಿಸಿದ್ದರೂ ಆ ಆದೇಶ ಇನ್ನೂ ರಾಜ್ಯದ ಎಲ್ಲ ಅನುಷ್ಠಾನಾಧಿಕಾರಿಗಳಿಗೆ ತಲುಪಿಯೇ ಇಲ್ಲ! 

Advertisement

ಹೌದು. ಇಂದಿನ ಡಿಜಿಟಲೀಕರಣದ ಸಂದರ್ಭದಲ್ಲಿ ಇದು ಆಶ್ಚರ್ಯವೆನಿಸಿದರೂ ಸತ್ಯ. ರಾಜ್ಯ ಸರ್ಕಾರದ ವತಿಯಿಂದ ನಿರ್ಮಿಸಲಾಗುವ ರಸ್ತೆ ಕಾಮಗಾರಿಯ ಅಂದಾಜು ವೆಚ್ಚದ ಶೇ.1ರಷ್ಟು ಅನುದಾನವನ್ನು ರಸ್ತೆ ಬದಿ ನೆಡುತೋಪು ನಿರ್ಮಿಸಲು ಕಾಯ್ದಿರಿಸಬೇಕು ಎಂದು ರಾಜ್ಯ ಸರ್ಕಾರ ಜ. 20ರಂದು ಆದೇಶ ಹೊರಡಿಸಿದೆ. ಆದರೆ, ಈ ಆದೇಶ ಅನುಷ್ಠಾನಗೊಳಿಸುವ ರಾಜ್ಯದ ಎಲ್ಲ ಅಧಿಕಾರಿಗಳಿಗೆ ಇನ್ನೂ ಅಧಿಕೃತವಾಗಿ ತಲುಪಿಲ್ಲ.

ಆರ್ಥಿಕ ವರ್ಷಾಂತ್ಯ, ಅಂದರೆ ಮಾರ್ಚ್‌ ತಿಂಗಳ ಸಮೀಪಿಸುತ್ತಿದ್ದು ಎಲ್ಲ ಹಂತಗಳಲ್ಲಿ ಕಾಮಗಾರಿಗಳು ವೇಗ ಪಡೆದುಕೊಳ್ಳುತ್ತವೆ. ಬಹುತೇಕ ರಸ್ತೆ ಕಾಮಗಾರಿಗಳ ಕ್ರಿಯಾಯೋಜನೆಗಳೂ ಸಿದ್ಧಗೊಳ್ಳುತ್ತಿವೆ. ಸರ್ಕಾರದ ಈ ಆದೇಶ ಅನುಷ್ಠಾನಕ್ಕೆ ಇದು ಸೂಕ್ತ ಸಂದರ್ಭವಿದ್ದರೂ ಸರ್ಕಾರದ ಈ ಆದೇಶ ಪ್ರತಿ ಇನ್ನೂ ಎಲ್ಲ ಅಧಿಕಾರಿಗಳಿಗೆ ತಲುಪಿಲ್ಲ. ಇದರಿಂದ ಯೋಜನೆ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ. ಹೀಗಾಗಿ ಪ್ರಸಕ್ತ 2016-17ನೇ ಸಾಲಿನ ಕಾಮಗಾರಿ ವೇಳೆ ಸರ್ಕಾರದ ಈ ಆದೇಶ ಪಾಲನೆ ಕಷ್ಟ ಸಾಧ್ಯ ಎಂದೇ ಹೇಳಲಾಗುತ್ತಿದೆ.

ಏನಿದು ಆದೇಶ?:
ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಯೋಜನೆ ಕಾಮಗಾರಿಯ ಶೇ.1ರಷ್ಟನ್ನು ರಸ್ತೆ ಬದಿ ಮರ ಬೆಳೆಸಲು ಕಾಯ್ದಿರಿಸಲು ನಿರ್ಣಯ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಹ ಲೋಕೋಪಯೋಗಿ ಇಲಾಖೆ, ಕರ್ನಾಟಕ ಹೆದ್ದಾರಿ ಅಭಿವೃದ್ಧಿ ಯೋಜನೆ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ, ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆ, ಕರ್ನಾಟಕ ಗ್ರಾಮೀಣ ಅಭಿವೃದ್ಧಿ ರಸ್ತೆ ಪ್ರಾಧಿಕಾರ, ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಹಾಗೂ ಗ್ರಾಮ ಪಂಚಾಯತ್‌ಗಳಿಂದ ನಿರ್ಮಿಸುವ ರಸ್ತೆ ಕಾಮಗಾರಿಯ ಅಂದಾಜು ವೆಚ್ಚದ ಕನಿಷ್ಠ ಶೇ.1ರಷ್ಟನ್ನು ರಸ್ತೆ ಬದಿ ಸಸಿ ನೆಡಲು ಕಾಯ್ದಿರಿಸಲು ಆದೇಶಿಸಿದೆ.

ಸ್ಪಷ್ಟತೆ ಇಲ್ಲ:
ಸರ್ಕಾರ ರಸ್ತೆ ಕಾಮಗಾರಿಯಲ್ಲಿನ ಅಂದಾಜು ವೆಚ್ಚದ ಶೇ.1ರಷ್ಟು ಅನುದಾನವನ್ನು ರಸ್ತೆ ಬದಿ ಸಸಿ ನೆಡಲು ಕಾಯ್ದಿರಿಸಲು ಆದೇಶಿಸಿದೆಯಾದರೂ ಸಂಸ್ಥೆಗಳು ಈ ಅನುದಾನವನ್ನು ಅರಣ್ಯ ಇಲಾಖೆಗೆ ಕೊಡಬೇಕೋ, ಸ್ವತಃ ರಸ್ತೆ ಬದಿ ಸಸಿ ನೆಡುವ ಕಾಮಗಾರಿ ನಿರ್ವಹಿಸಬೇಕೋ ಎಂಬ ಬಗ್ಗೆ ಸ್ಪಷ್ಟ ಉಲ್ಲೇಖವೂ ಇಲ್ಲ. ಅಲ್ಲದೆ, ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತನ್ನ ಆದೇಶದಲ್ಲಿ ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್‌ ಇಲಾಖೆ ಮತ್ತು ಅರಣ್ಯ ಇಲಾಖೆ ಸಮನ್ವಯ ಸಾಧಿಸಬೇಕು ಎಂದು ತಿಳಿಸಿದೆ. ಆದರೆ, ಈ ಸಮನ್ವಯ ಕಾರ್ಯವೂ ಆಗಿಲ್ಲ.

Advertisement

ಒಟ್ಟಾರೆ ಸರ್ಕಾರವೇನೋ ಆದೇಶ ಮಾಡಿದೆ. ಆದರೆ ಆ ಆದೇಶ ಎಲ್ಲ ಅನುಷ್ಠಾನಾಧಿಕಾರಿಗಳಿಗೆ ತಲುಪಿ, ಬೇರೆ ಬೇರೆ ಇಲಾಖಾಧಿಕಾರಿಗಳು ಸಮನ್ವಯ ಸಾಧಿಧಿಸಿ ಅದರ ಅನುಷ್ಠಾನಗೊಳಿಸುವ ಹೊತ್ತಿಗೆ ಮುಂದಿನ ಆರ್ಥಿಕ ವರ್ಷವೇ ಬಂದಿರುತ್ತದೆ ಎಂದರೆ ತಪ್ಪಾಗದು.

ಅಧಿಕೃತ ಮಾಹಿತಿ ಬಂದಿಲ್ಲ:
ರಸ್ತೆ ಕಾಮಗಾರಿಯ ಶೇ.1ರಷ್ಟು ಅನುದಾನ ರಸ್ತೆ ಬದಿ ನೆಡುತೋಪು ನಿರ್ಮಾಣಕ್ಕೆ ಕಾಯ್ದಿರಿಸಲು ಸರ್ಕಾರ ಆದೇಶ ಮಾಡಿದೆ ಎಂಬ ಬಗ್ಗೆ ನಮಗೆ ಅಧಿಕೃತವಾಗಿ ಇಲಾಖೆಯಿಂದ ಈವರೆಗೆ ಮಾಹಿತಿ ಬಂದಿಲ್ಲ. ನಾನು ವಾಟ್ಸ್‌ಆ್ಯಪ್‌ ಮೂಲಕ ಬೇರೊಬ್ಬರಿಂದ ಸರ್ಕಾರದ ಆದೇಶ ಪ್ರತಿ ತರಿಸಿಕೊಂಡು ಓದಿದ್ದೇನೆ. ಆದರೆ ಸರ್ಕಾರದ ಆದೇಶ, ಅನುಷ್ಠಾನದ ನಿರ್ದೇಶನ ಯಾವುದೇ ಮಾಹಿತಿ ಬಂದಿಲ್ಲ. ಬೇರೆ ಯಾವ ಇಲಾಖೆಯವರೊಂದಿಗೂ ಈ ಬಗ್ಗೆ ಚರ್ಚಿಸಿಲ್ಲ.

– ಸೊನಾಲ್‌ ವೃಷಿ¡, ಡಿಎಫ್‌ಒ ಹಾವೇರಿ

– ಎಚ್‌.ಕೆ.ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next