Advertisement

ಪಾಕಿಸ್ಥಾನ‌ಕ್ಕೆ ಈ ಬುದ್ಧಿ ಮೊದಲೇ ಬರಬೇಕಿತ್ತು

01:11 AM Jan 18, 2023 | Team Udayavani |

ಸ್ವಾತಂತ್ರ್ಯಾಅನಂತರದಲ್ಲಿ ಭಾರತದೊಂದಿಗೆ ಮೂರು ಯುದ್ಧಗಳನ್ನು ಮಾಡಿದ್ದೇವೆ. ನಮ್ಮ ತಪ್ಪು ನಮಗೆ ಅರಿವಾಗಿದೆ. ಯುದ್ಧಗಳಿಂದ ನಾವು ಗಳಿಸಿದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು. ಹೀಗಾಗಿ, ಭಾರತದೊಂದಿಗೆ ಶಾಂತಿಯುತ ಸಂಬಂಧಕ್ಕೆ ಪ್ರಯತ್ನಿಸುತ್ತೇನೆ ಎಂದು ಪಾಕಿಸ್ಥಾನ‌ದ ಪ್ರಧಾನಿ ಶಹಭಾಜ್‌ ಷರೀಫ್ ಅರಬಿಕ್‌ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಒಂದು ಲೆಕ್ಕಾಚಾರದಲ್ಲಿ ನೋಡಿದರೆ, ಪಾಕಿಸ್ಥಾನ‌ದ ಪ್ರಧಾನಿಯೊಬ್ಬರಿಂದ ಇಂಥ ಪಶ್ಚಾತ್ತಾಪದ ಮಾತುಗಳು ಕೇಳಿಬಂದದ್ದು ಕಡಿಮೆಯೇ. ಏಕೆಂದರೆ, ನಾವು ಈ ಹಿಂದೆ ಮಾಡಿದ್ದು ತಪ್ಪಾಯಿತು, ಸರಿ ಪಡಿಸಿ ಕೊಂಡು ಹೋಗುತ್ತೇವೆ ಎಂದು ಹೇಳುವುದು ಪಾಕಿಸ್ಥಾನ‌ದಲ್ಲಿ ಅಪರಾಧವೇ.

Advertisement

ಸದ್ಯ ಈ ಹೇಳಿಕೆಗಳನ್ನು ಅವಲೋಕಿಸುವುದಾದರೆ, ಪಾಕಿಸ್ಥಾನ‌ಕ್ಕೆ ಕೆಟ್ಟ ಮೇಲೆ ಬುದ್ಧಿ ಬಂದಂತೆ ತೋರುತ್ತಿದೆ. ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ಥಾನ ಹೆಚ್ಚು ಕಡಿಮೆ ಒಬ್ಬಂಟಿಯಾಗಿದೆ. ಚೀನಾ ಮತ್ತು ಟರ್ಕಿಯಂಥ ದೇಶಗಳು ಬಿಟ್ಟರೆ, ಪಾಕಿಸ್ಥಾನ‌ದ ಪರವಾಗಿ ನಿಲ್ಲುವ ದೇಶಗಳ ಸಂಖ್ಯೆ ಬಹುತೇಕ ಕಡಿಮೆ ಇದೆ. ಅಲ್ಲದೆ, ಈಗ ಚೀನಾ ಕೊರೊನಾ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದೆ. ಅಲ್ಲಿನ ಆರ್ಥಿಕತೆಯೂ ಕುಸಿಯುವ ಹಂತದಲ್ಲಿದೆ. ಚೀನಾದಿಂದ ಒಂದೊಂದೇ ಕಂಪೆನಿಗಳು ಹೊರಗೆ ಕಾಲಿಡುತ್ತಿವೆ. ಇಂಥ ಹೊತ್ತಿನಲ್ಲಿ ಚೀನಾಗೆ ತನ್ನ ಕ್ಷೇಮಕ್ಕಿಂತ ಹೊರಗಿನವರ ಕ್ಷೇಮದ ಬಗ್ಗೆ ತಲೆಕೆಡಿಸಿಕೊಳ್ಳುವುದು ದೂರದ ಮಾತು.

ಪಾಕಿಸ್ಥಾನ‌ದಲ್ಲಿ ಇಂದು ಆರ್ಥಿಕ ಸ್ಥಿತಿಯೂ ಚೆನ್ನಾಗಿಲ್ಲ. ಹಿಂದಿನಿಂದಲೂ ಪಾಕಿಸ್ಥಾನ‌ಕ್ಕೆ ಹಣದ ಕೊರತೆಯಾದಾಗೆಲ್ಲಾ ಅಮೆರಿಕದ ಬಳಿ ಹೋಗಿ ಹಣ ಪಡೆದುಕೊಂಡು ಬರುತ್ತಿತ್ತು. ಹೀಗಾಗಿ, ಕಷ್ಟನಷ್ಟಗಳು ಹೆಚ್ಚು ಗೊತ್ತಾಗುತ್ತಿರಲಿಲ್ಲ. ಈಗ ಅಮೆರಿಕದ ಸಹಾಯ ಹಸ್ತ ನಿಂತಿದೆ. ಜತೆಗೆ ವಿಶ್ವಬ್ಯಾಂಕ್‌, ಜಾಗತಿಕ ಹಣಕಾಸು ನಿಧಿಯಂಥ ಹಣಕಾಸು ಸಂಸ್ಥೆಗಳೂ ಪಾಕಿಸ್ಥಾನ‌ಕ್ಕೆ ಸಾಲ ನೀಡುತ್ತಿಲ್ಲ. ಅತ್ತ ಅರಬ್‌ ದೊರೆಗಳೂ ಪಾಕಿಸ್ಥಾನ‌ದ ವರ್ತನೆಯಿಂದ ಬೇಸತ್ತು ದಿನದಿಂದ ದಿನಕ್ಕೆ ದೂರವಾಗುತ್ತಿವೆ. ಚೀನಾ ಸಹಾಯ ಮಾಡಿದರೂ, ಅದು ಷರತ್ತಿಗೆ ಒಳಪಟ್ಟಿದೆ.

ಇದಕ್ಕಿಂತ ಹೆಚ್ಚಾಗಿ ಅತ್ತ ತಾಲಿಬಾನ್‌ ಕಾಟವೂ ಜೋರಾಗಿದೆ. ತೆಹ್ರಿಕ್‌ ಇ ತಾಲಿಬಾನ್‌ ಪಾಕಿಸ್ಥಾನ್‌(ಟಿಟಿಪಿ) ಸಂಘಟನೆ ಪಾಕಿಸ್ಥಾನ ಸೇನೆ ಜತೆಗಿನ ಕದನಾ ವಿರಾಮ ಒಪ್ಪಂದವನ್ನು ಮುರಿದುಕೊಂಡಿದ್ದು, ನೇರವಾಗಿ ಸಮರ ಸಾರಿದೆ. ಆಂತರಿಕವಾಗಿ ಈ ಬೆಳವಣಿಗೆ ಪಾಕ್‌ ಸೇನೆಗೂ ತಲೆನೋವು ತಂದಿದೆ. ಅಂದರೆ ತಾಲಿಬಾನ್‌ಗಳ ಕೈ ಮೇಲಾಗುವುದು. ಅಂದರೆ ಆಫ‌^ನ್‌ ತಾಲಿಬಾನಿಗಳು ಹೆಚ್ಚು ಶಕ್ತಿಯುತರಾಗುತ್ತಿದ್ದಾರೆ ಎಂದರ್ಥ.

ಇದರ ಮಧ್ಯೆಯೇ ಪಾಕಿಸ್ಥಾನ‌ದ ವಿದೇಶಿ ವಿನಿಮಯ ನಿಧಿ ಸಂಗ್ರಹ 10 ಬಿಲಿಯನ್‌ ಅಮೆರಿಕ್‌ ಡಾಲರ್‌ಗೆ ಇಳಿಕೆಯಾಗಿದೆ. ಆಮದು ಮತ್ತು ರಫ್ತು ಪ್ರಕ್ರಿಯೆಗಳು ಹೆಚ್ಚು ಕಡಿಮೆ ಸ್ಥಗಿತವಾಗಿವೆ. ಇಂಥ ಹೊತ್ತಿನಲ್ಲಿ ಅನಿವಾರ್ಯವಾಗಿ ಪಾಕಿಸ್ಥಾನ‌ ಭಾರತದೊಂದಿಗೆ ಶಾಂತಿಮಾತುಕತೆಗೆ ಕುಳಿತುಕೊಳ್ಳಬೇಕಾದ ಸಂದಿಗ್ಧ ಸ್ಥಿತಿಗೆ ಬಂದಿದೆ.

Advertisement

ಆದರೆ, ಪಾಕಿಸ್ಥಾನ‌ದ ಶಾಂತಿ ಮಾತುಕತೆ ಪ್ರಸ್ತಾಪವನ್ನು ನಂಬಬಹುದೇ? ಅಲ್ಲಿನ ರಾಜಕಾರಣಿಗಳಿಗೆ ನಿಜವಾಗಿಯೂ ಅಧಿಕಾರವಿದೆಯೇ ಎಂಬ ಪ್ರಶ್ನೆಗಳೂ ಉದ್ಭವವಾಗುತ್ತವೆ. ಈ ಹಿಂದಿನಿಂದಲೂ ಪಾಕ್‌ನ ಯಾವುದೇ ಪ್ರಧಾನಿ ಭಾರತದೊಂದಿಗೆ ಶಾಂತಿ ಮಾತುಕತೆಗೆ ಮುಂದಾಗಿದ್ದಾಗಲೂ, ಅವರನ್ನು ಸೇನೆ ಅಧಿಕಾರದಿಂದ ಕೆಳಗಿಳಿಸಿತ್ತು. ಈಗಲೂ ಸೇನೆಯ ಕೈಬೊಂಬೆಯಂತಿರುವ ಶಾಭಾಜ್‌ ಷರೀಫ್ರನ್ನು ನಂಬಲು ಸಾಧ್ಯವೇ ಎಂಬ ಪ್ರಶ್ನೆಯೂ ಉದ್ಭವವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next