ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಪಡೆದ ಬಳಿಕ ಕಾಂಗ್ರೆಸ್ ನಾಯಕರು ಸಂಭ್ರಮದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಮಾಧ್ಯಮಗೋಷ್ಠಿ ನಡೆಸಿ ಜನತೆಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ. ಈ ಗೆಲುವು ಭಾರತ್ ಜೋಡೋ ಮಾಡಲಿದೆ. ಈ ಗೆಲುವು ಕರ್ನಾಟಕ ರಾಜ್ಯದ ಜನತೆಯ ಗೆಲುವು. ಜನರ ಕಣ್ಣೀರನ್ನು ಒರೆಸುತ್ತೇವೆ. ಜನರ ಮುಖದಲ್ಲಿ ನಗು ಅರಳುತ್ತಿದೆ. ಜನರಿಗೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ನಾಳೆ (ಭಾನುವಾರ) ಸಂಜೆ 5.30ಕ್ಕೆ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆ ನಡೆಸುತ್ತೇವೆ. ಯಾರಿಗೂ ಹೇಳಿಕೆ ನೀಡಲು ನಿರ್ಬಂಧ ಹೇರಿದ್ದೇವೆ. ಶಾಸಕಾಂಗ ಸಭೆಯಲ್ಲಿ ಪಕ್ಷದ ನೀತಿ ನಿಯಮಗಳಂತೆ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಇದು ಭ್ರಷ್ಟಾಚಾರದ ವಿರುದ್ದದ ಗೆಲುವು, ರೈತರಿಗೆ ಕೊಟ್ಟ ಕಷ್ಟದ ವಿರುದ್ಧದ ಗೆಲುವು, ಗೃಹಿಣಿ ಯರ ಕಣ್ಣೀರಿನ ವಿರುದ್ದದ ಗೆಲುವು. ಸರಕಾರ ಅಸ್ತಿತ್ವಕ್ಕೆ ಬಂದ ಮೊದಲ ದಿನವೇ ಗೃಹ ಜ್ಯೋತಿ ಯೋಜನೆ ಅನುಷ್ಠಾನಕ್ಕೆ ತರುತ್ತೇವೆ ಎಂದರು. ಎಲ್ಲ ಗ್ಯಾರೆಂಟಿ ಜಾರಿ ಮಾಡುತ್ತೇವೆ ಎಂದರು.
Related Articles
ನಮ್ಮ ಜನರಿಗೆ ನಮ್ಮ ಖಾತರಿಗಳು ರಾಜ್ಯಕ್ಕಾಗಿ ನಮ್ಮ ದೃಷ್ಟಿಯ ಮಾರ್ಗದರ್ಶಿ ಶಕ್ತಿಯಾಗಿದೆ ಮತ್ತು ನಾವು ಈಗಿನಿಂದಲೇ ಅನುಷ್ಠಾನಕ್ಕೆ ಇಳಿಯುತ್ತೇವೆ.ಈ ಗೆಲುವಿಗೆ ಶ್ರಮಿಸಿದ ನಮ್ಮ ನಾಯಕರು ಮತ್ತು ಕಾರ್ಯಕರ್ತರಿಗೆ ಇದು ದೊಡ್ಡ ಜನಾದೇಶವಾಗಿದೆ. ಎಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದರು.
ನಾವು ಸೋನಿಯಾ ಗಾಂಧಿ ಅವರಿಗೆ ಏನಾದರೂ ಮಾಡಿ ಕರ್ನಾಟಕವನ್ನು ಗೆದ್ದು ಕೊಡುತ್ತೇವೆ ಎಂದು ಮಾತು ಕೊಟ್ಟಿದ್ದೆವು. ಅದು ಸಾಧ್ಯವಾಗಿದೆ ಎಂದರು.
ಮಾಡಿಯೇ ತೀರುತ್ತೇವೆ
ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಮೊದಲ ದಿನದಿಂದಲೇ,ಗೃಹ ಜ್ಯೋತಿ ಬೆಳಗಲಿದೆ, ಗೃಹಲಕ್ಷ್ಮೀ ನಗಲಿದ್ದಾಳೆ, ಯುವನಿಧಿ ಯುವ ಸಮುದಾಯಕ್ಕೆ ಆತ್ಮವಿಶ್ವಾಸ ತುಂಬಲಿದೆ, ಅನ್ನಭಾಗ್ಯ ಬಡವರ ಹಸಿವು ತಣಿಸಲಿದೆ, ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡಲಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ನೆಮ್ಮದಿಯ ನಿಟ್ಟುಸಿರು ಬಿಡಲಿದ್ದಾರೆ. ನಾನು ಸಿದ್ದರಾಮಯ್ಯ ಅವರು ನಾಡ ದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಮ್ಮ ಗ್ಯಾರಂಟಿಗಳ ಜಾರಿಗೆ ಬದ್ಧ ಎಂದು ಹೇಳಿದ್ದೇವೆ, ಅದನ್ನು ಮಾಡಿಯೇ ತೀರುತ್ತೇವೆ ಎಂದರು.
ಸೊಕ್ಕು ನಾಶ
ಯಾರು ಕಾಂಗ್ರೆಸ್ ಮುಕ್ತ ಭಾರತ ಮಾಡುವ ಭರವಸೆ ನೀಡಿದ್ದರೋ ಅವರನ್ನು ದಕ್ಷಿಣ ಭಾರತದಿಂದ ಹೊರಹಾಕಿದ್ದಾರೆ!. ಜನಾದೇಶದಿಂದ ಬಿಜೆಪಿಯ ಸೊಕ್ಕು ನಾಶವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಬಿಜೆಪಿಯವರು ನಮ್ಮನ್ನ ಕೆಣಕಿ ಮಾತನಾಡುತ್ತಿದ್ದರು, ಅಹಂಕಾರದಿಂದ ಯಾರೇ ಮಾತನಾಡಿದರೂ ಅದು ಬಹಳ ದಿನ ನಡೆಯುವುದಿಲ್ಲ. ಇದು ಪ್ರಜಾಪ್ರಭುತ್ವ ಎಂದು ಖರ್ಗೆ ಹೇಳಿದರು.
ಕರ್ನಾಟಕ ಪ್ರಜಾಪ್ರಭುತ್ವಕ್ಕೆ ಹೊಸ ಬೆಳಕನ್ನು ತೋರಿಸಿದೆ. ಇದು 6.5 ಕೋಟಿ ಕನ್ನಡಿಗರ ಜಯ. ಇಂದು ಕರ್ನಾಟಕದ ಹೆಮ್ಮೆಗೆ ಜಯ! ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದರು.