Advertisement

ಒಳಚರಂಡಿ ವ್ಯವಸ್ಥೆಯತ್ತ ಗಮನಹರಿಸಬೇಕಿದೆ ಈ ವಾರ್ಡ್‌ !

09:26 PM Oct 22, 2019 | mahesh |

ಮಹಾನಗರ: ಭೌಗೋಳಿಕವಾಗಿ ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಎತ್ತರದ ಪ್ರದೇಶ, ಮಧ್ಯ ಭಾಗದಲ್ಲಿ ತಗ್ಗು ಪ್ರದೇಶ ಹಾಗೂ ಉತ್ತರ ಭಾಗದಿಂದ ದಕ್ಷಿಣದ ಕಡೆಗೆ ಹರಿಯುವ ರಾಜ ಕಾಲುವೆ ಮತ್ತು ಬಹು ಮಹಡಿ ಕಟ್ಟಡಗಳನ್ನು ಒಳಗೊಂಡಂತೆ ಬಹುಪಾಲು ಜನ ವಸತಿ ಇರುವ ವಾರ್ಡ್‌ ಬಿಜೈ (ನಂ.31).

Advertisement

ಬಿಜೈ ಕೆಎಸ್‌ಆರ್‌ಟಿಸಿ ಎದುರುಗಡೆಯಿಂದ ಸಕೀìಟ್‌ ಹೌಸ್‌ ಮುಂಭಾಗದ ಕದ್ರಿ ಪೊಲೀಸ್‌ ಠಾಣೆ ವರೆಗೆ ಮುಖ್ಯರಸ್ತೆ, ಬಳಿಕ ಕೆಪಿಟಿ ಜಂಕ್ಷನ್‌ ಬಳಿಯಿಂದ ಕುಂಟಿಕಾನ್‌ ಜಂಕ್ಷನ್‌ ತನಕ ರಾಷ್ಟ್ರೀಯ ಹೆದ್ದಾರಿ 66 ಹಾಗೂ ಕುಂಟಿಕಾನ್‌ ಜಂಕ್ಷನ್‌ನಿಂದ ಬಿಜೈ ಕೆಎಸ್‌ಆರ್‌ಟಿಸಿ ವರೆಗಿನ ಮುಖ್ಯ ರಸ್ತೆ ಈ ವಾರ್ಡ್‌ನ ಗಡಿ ಗುರುತುದ ಆಗಿದ್ದು, ಭೌಗೋಳಿಕವಾಗಿ ತ್ರಿಕೋನಾಕೃತಿಯಲ್ಲಿ ಈ ವಾರ್ಡ್‌ ಇದೆ.

ನಾಲ್ಕು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಮೆಸ್ಕಾಂ ಕಾರ್ಪೊರೇಟ್‌ ಕಚೇರಿ, ಕಾಪಿಕಾಡ್‌ ಸರಕಾರಿ ಶಾಲೆ, ನವೀಕೃತ ಬಿಜೈ ಪ್ರಾಥಮಿಕ ಆರೋಗ್ಯ ಕೇಂದ್ರ, ಕೆಎಂಸಿ ಆಸ್ಪತ್ರೆ, ಕೆಎಸ್‌ಆರ್‌ಟಿಸಿ ಎರಡು ಡಿಪೊಗಳು, “ಆಶ್ರಯ’ ಆಶ್ರಮ, ಕದ್ರಿ ಪೊಲೀಸ್‌ ಠಾಣೆ, ಟ್ರಾಫಿಕ್‌ ಪೂರ್ವ ಪೊಲೀಸ್‌ ಠಾಣೆ, ಬಿಜೈ ಶ್ರೀಮಂತಿ ಬಾಯಿ ಸರಕಾರಿ ವಸ್ತು ಸಂಗ್ರಹಾಲಯ ಈ ವಾರ್ಡ್‌ ವ್ಯಾಪ್ತಿಯಲ್ಲಿರುವ ಪ್ರಮುಖ ಸಂಸ್ಥೆಗಳು. ಬಿಜೈ ಭಜನಾ ಮಂದಿರ, ಮಸೀದಿ, ಕುಂಟಿಕಾನ್‌ ಮರಿಯ ಭವನ್‌ ಕಾನ್ವೆಂಟ್‌, ವನ ದುರ್ಗಾ ದೇವಸ್ಥಾನ ಸೇರಿದಂತೆ ನಾಲ್ಕು ಧಾರ್ಮಿಕ ಕೇಂದ್ರಗಳಿವೆ.

ಆನೆಗುಂಡಿ ಮುಖ್ಯ ರಸ್ತೆಗೆ ಕಾಂಕ್ರೀಟೀಕರಣ, ಬಿಜೈ ನ್ಯೂ ರೋಡ್‌ 3ನೇ ಅಡ್ಡ ರಸ್ತೆಯಿಂದ 4ನೇ ಅಡ್ಡ ರಸ್ತೆ ವರೆಗೆ ಕಾಂಕ್ರೀಟೀಕರಣ, ಮುಖ್ಯ ರಸ್ತೆಗಳಿಗೆ ಎಲ್‌ಇಡಿ ಲೈಟ್‌ ವ್ಯವಸ್ಥೆ, ಕಾಪಿಕಾಡ್‌ ದಲಿತ ಕಾಲನಿ ಬಳಿ ಚರಂಡಿ ವ್ಯವಸ್ಥೆ, ಬಿಜೈ ಕೆಎಸ್‌ಆರ್‌ಟಿಸಿ ಬಳಿಯಿಂದ ಕುಂಟಿಕಾನ್‌ ಜಂಕ್ಷನ್‌ ತನಕ ಹಾಗೂ ಸಕೀìಟ್‌ ಹೌಸ್‌ ಬಳಿಯಿಂದ ಕೆಎಸ್‌ಆರ್‌ಟಿಸಿ ತನಕ ಇರುವ ಬಹುತೇಕ ಎಲ್ಲ ಅಡ್ಡ ರಸ್ತೆಗಳಿಗೆ ಕ್ರಾಂಕ್ರೀಟು ಮತ್ತು ಇಂಟರ್‌ಲಾಕ್‌, ನೀರಿನ ಸಮಸ್ಯೆ ಇರುವ ತಾಣಗಳಲ್ಲಿ ಪೈಪ್‌ಲೈನ್‌ ನವೀಕರಣ ಕಾಮಗಾರಿಗಳು ನಡೆದಿರುವುದು ಈ ವಾರ್ಡ್‌ನಾದ್ಯಂತ ಸಂಚರಿಸಿದಾಗ ಕಂಡು ಬರುತ್ತದೆ.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಬಳಿಯಿಂದ ಸರ್ಕಿಟ್‌ ಹೌಸ್‌ ತನಕದ ಮುಖ್ಯ ರಸ್ತೆಗೆ ಚರಂಡಿ ಮತ್ತು ಫುಟ್ಬಾತ್‌ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನು ಸುಮಾರು ಶೇ. 25 ರಷ್ಟು ಮಾತ್ರ ಬಾಕಿ ಇದೆ. ಬಿಜೈ ನ್ಯೂ ರೋಡ್‌ನ‌ ತುದಿಯಲ್ಲಿ ಸ್ವಲ್ಪ ಭಾಗ ಕಾಂಕ್ರೀಟೀಕರಣಕ್ಕೆ ಬಾಕಿ ಇರುವುದು ಈ ವಾರ್ಡ್‌ ಸುತ್ತಾಡಿದಾಗ ಕಂಡು ಬಂದ ಅಂಶ.

Advertisement

ಒಳಚರಂಡಿ ವ್ಯವಸ್ಥೆಯ ಲೋಪ ದೋಷಗಳಿಂದಾಗಿ ತಗ್ಗು ಪ್ರದೇಶದ ಕೆಲವು ಕಡೆ ಸೋರಿಕೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ರಾಜ ಕಾಲುವೆಯ ಪಕ್ಕದಲ್ಲಿರುವ ಕೆಲವು ಮನೆಗಳವರು ತಮ್ಮ ಮನೆಯ ಶೌಚದ ನೀರನ್ನು ನೇರವಾಗಿ ರಾಜ ಕಾಲುವೆಗೆ ಹರಿಯ ಬಿಡುತ್ತಿರುವುದು ಆನೆ ಗುಂಡಿ ಮತ್ತು ಇತರ ಕೆಲವು ಕಡೆ ಕಂಡು ಬಂದಿದೆ.

ಆನೆಗುಂಡಿ 2 ನೇ ಕ್ರಾಸ್‌ ರಸ್ತೆಯಲ್ಲಿ ಒಳ ಚರಂಡಿ ಸೋರಿಕೆ ಆಗಿ ಗಲೀಜು ರಾಜ ಕಾಲುವೆಗೆ ಸೇರುತ್ತಿದ್ದು ಈ ಬಗ್ಗೆ ಹಲವು ಬಾರಿ ಮಹಾ ನಗರ ಪಾಲಿಕೆಯ ಗಮನಕ್ಕೆ ತಂದಿದ್ದರೂ ಸಮಸ್ಯೆ ಪರಿಹಾರ ಆಗಿಲ್ಲ ಎನ್ನುವುದು ಸ್ಥಳೀಯ ನಿವಾಸಿಗಳ ಆರೋಪ. ಖಾಲಿ ಜಾಗದಲ್ಲಿ ಕಸದ ರಾಶಿ ಬಂದು ಬೀಳುತ್ತಿದ್ದು, ಸುತ್ತಮುತ್ತಲ ನಾಗರೀಕರೇ ಇದನ್ನು ತಂದು ಹಾಕುತ್ತಾರೆ, ಎಷ್ಟು ಹೇಳಿದರೂ ಕೇಳುವುದಿಲ್ಲ ಎನ್ನುವುದು ಸ್ಥಳೀಯರ ದೂರು.

50 ವರ್ಷಗಳ ಹಿಂದಿನ ಒಳ ಚರಂಡಿ ವ್ಯವಸ್ಥೆ ಹಾಗೂ ಹಳೆಯ ಪೈಪ್‌ಲೈನ್‌ ಒಳಚರಂಡಿ ವ್ಯವಸ್ಥೆಯ ಅವ್ಯವಸ್ಥೆಗೆ ಮುಖ್ಯ ಕಾರಣ ಎಂದು ನಿಕಟ ಪೂರ್ವ ಕಾರ್ಪೊರೇಟರ್‌ ಲ್ಯಾನ್‌ಲೊಟ್‌ ಪಿಂಟೊ ಅಭಿಪ್ರಾಯ ಪಟ್ಟಿದ್ದು, 2 ನೇ ಎಡಿಬಿ ಯೋಜನೆಯಲ್ಲಿ ಇದನ್ನು ಕೈಗೆತ್ತಿಕೊಳ್ಳುವ ಭರವಸೆ ಸಿಕ್ಕಿದೆ ಎನ್ನುತ್ತಾರೆ.

ಬಾರೆಬೈಲ್‌ನಿಂದ ಬಿಜೈ ಕೆಎಸ್‌ಆರ್‌ಟಿಸಿ ತನಕ ಸುಮಾರು ಒಂದುವರೆ ಕಿ.ಮೀ. ಉದ್ದದ ರಾಜ ಕಾಲುವೆ ಇದೆ. ಇದು 3 ಕಡೆಗಳಲ್ಲಿ ಕುಸಿದಿದ್ದು, 2 ಕಡೆ ತಡೆಗೋಡೆ ನಿರ್ಮಾಣ ಮಾಡಲಾಗಿದೆ.

ಬಿಜೈ ವಾರ್ಡ್‌ ವ್ಯಾಪ್ತಿ
ಬಿಜೈ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಎದುರಿನಿಂದ ಸರ್ಕಿಟ್‌ ಹೌಸ್‌ ಎದುರಿನ ಕದ್ರಿ ಪೊಲೀಸ್‌ ಠಾಣೆ ತನಕ, ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ 66 ರ ಸಕಯ್‌ಗಾಡ್ಡ ಹಾಗೂ ಕುಂಟಿಕಾನ್‌ ಜಂಕ್ಷನ್‌ ವರೆಗೆ, ಕುಂಟಿಕಾನದಿಂದ ಬಿಜೈ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣವರೆಗಿನ ರಸ್ತೆಯ ಎಡ ಬದಿ.  ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಈ ವಾರ್ಡ್‌ನಲ್ಲಿ 6000 ಮತದಾರರಿದ್ದರು.

5 ವರ್ಷಗಳಲ್ಲಿ ಬಂದ ಅನುದಾನ
2014- 15: 91.13 ಲಕ್ಷ ರೂ.
2015- 16: 1.46 ಕೋಟಿ ರೂ.
2016- 17: 1.92 ಕೋಟಿ ರೂ.
2017- 18: 54.38 ಲಕ್ಷ ರೂ.
2018-19: 1.20 ಕೋಟಿ ರೂ.

2013ರ ಚುನಾವಣೆ ಮತ ವಿವರ
ಕಾಂಗ್ರೆಸ್‌: 1901
ಬಿಜೆಪಿ: 869
ಜೆಡಿಎಸ್‌: 229

ರಾಜಕೀಯ ಹಿನ್ನೋಟ
ವಾರ್ಡ್‌ ನಂ. 31- ಬಿಜೈನಲ್ಲಿ ಲ್ಯಾನ್ಸ್‌ಲೊಟ್‌ ಪಿಂಟೊ ಅವರು ಕಳೆದ 30 ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಸತತವಾಗಿ ಜಯ ಸಾಧಿಸುತ್ತಾ ಬಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಿಂತ 1032 ಮತಗಳ ಅಂತರದಿಂದ ಕಾಂಗ್ರೆಸ್‌ ಜಯ ಗಳಿಸಿತ್ತು. ಕಳೆದ ಬಾರಿಯ ಚುನಾವಣೆಯಲ್ಲಿ ಈ ವಾರ್ಡ್‌ ಸಾಮಾನ್ಯ ವರ್ಗಕ್ಕೆ ಮೀಸಲಿರಿಸಲಾಗಿತ್ತು. ಈ ಬಾರಿ ಹಿಂದುಳಿದ ವರ್ಗ “ಬಿ’ ಅಭ್ಯರ್ಥಿಗೆ ಮೀಸಲಾಗಿದೆ. ಹಾಗಾಗಿ ಈ ಬಾರಿಯೂ ಅವರಿಗೆ ಸ್ಪರ್ಧಿಸಲು ಅವಕಾಶ ಲಭಿಸಿದೆ.

ಹಿಲರಿ ಕ್ರಾಸ್ತಾ

Advertisement

Udayavani is now on Telegram. Click here to join our channel and stay updated with the latest news.

Next