Advertisement

ಮತ್ತೆ ಸಿಕ್ಕಿತೇ ಪಕ್ಷೇತರರಿಗೆ ಖದರ್‌? ಈ ಬಾರಿ ಪಕ್ಷೇತರ ಕಣದಲ್ಲಿದ್ದಾರೆ 918 ಮಂದಿ

12:15 AM May 10, 2023 | Team Udayavani |

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಜತೆಗೆ ಪಕ್ಷೇತರ ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷಿಸಿದ ಸುದೀರ್ಘ‌ ಇತಿಹಾಸವಿದೆ. ಒಂದೊಮ್ಮೆ ಈ ಬಾರಿ ಅತಂತ್ರ ಫ‌ಲಿತಾಂಶ ಬಂದರೆ ಪಕ್ಷೇತರರಿಗೆ ಡಿಮ್ಯಾಂಡ್‌ ಬರಲಿದೆ. ಈ ಬಾರಿ 918 ಪಕ್ಷೇತರರು ಕಣದಲ್ಲಿದ್ದು ಗೆಲ್ಲೋರ್ಯಾರು ಅನ್ನುವುದನ್ನು ಕಾದು ನೋಡಬೇಕಿದೆ.

Advertisement

ರಾಜ್ಯದಲ್ಲಿ ಈವರೆಗೆ ನಡೆದಿರುವ ಒಟ್ಟು 15 ವಿಧಾನಸಭಾ ಚುನಾವಣೆಗಳಲ್ಲಿ 10,045 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಅದರಲ್ಲಿ ಗೆದ್ದವರು 372 ಮಂದಿ ಮಾತ್ರ. ಉಳಿದ ಶೇ.96ಕ್ಕೂ ಅಧಿಕ ಅಂದರೆ 9,655 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.

ಎಲ್ಲ ಚುನಾವಣೆಗಳಲ್ಲೂ ಪಕ್ಷೇತರರು ಗೆದ್ದಿದ್ದಾರೆ. ಆದರೆ ಗೆದ್ದ ರಾಜಕೀಯ ಪಕ್ಷಗಳು ಅವರನ್ನು ಅಧಿಕಾರದ ಪಾಲುದಾರರನ್ನಾಗಿ ಮಾಡಿಕೊಂಡಿರುವಂತಹ ಉದಾಹರಣೆಗಳು ಇಲ್ಲ. ಪಕ್ಷೇತರರಿಗೆ “ಖದರ್‌’ ಬಂದು ಅಧಿಕಾರದ ರುಚಿ ಹತ್ತಿದ್ದು 2008ರಲ್ಲಿ. ಆಗ ಗೆದ್ದಿದ್ದ 6 ಪಕ್ಷೇತರರ ಪೈಕಿ 6 ಮಂದಿ ಪಕ್ಷೇತರರು ಬೆಂಬಲಿಸಿದ್ದಕ್ಕೆ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂತು. ಕೊಟ್ಟ ಮಾತಿನಂತೆ ಆಗಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಎಲ್ಲ ಐದು ಮಂದಿ ಪಕ್ಷೇತರ ಶಾಸಕರಿಗೆ ಸಚಿವ ಸ್ಥಾನ ಕಲ್ಪಿಸಿದ್ದರು. ಒಬ್ಬರಿಗೆ ಮಂಡಳಿ ಅಧ್ಯಕ್ಷ ಸ್ಥಾನ ಕಲ್ಪಿಸಿದರು.

ಅದರ ಪರಿಣಾಮ ಅಧಿಕಾರದ ಆಸೆ ಚಿಗುರಿತು ಎಂಬಂತೆ 2013ರಲ್ಲಿ ಚುನಾವಣೆಯಲ್ಲಿ ಸ್ಪರ್ಧಾಳುಗಳ ಸಂಖ್ಯೆ ಸಾವಿರ ದಾಟಿತು. ಆಗ 1,217 ಮಂದಿ ಸ್ಪರ್ಧಿಸಿ 9 ಮಂದಿ ಗೆದ್ದರು. ಆದರೆ ಕಾಂಗ್ರೆಸ್‌ ಪಕ್ಷಕ್ಕೆ ಪೂರ್ಣ ಬಹುಮತ ಸಿಕ್ಕಿದ್ದರಿಂದ ಪಕ್ಷೇತರರ ಅಧಿಕಾರದ ಆಸೆ ಈಡೇರಲಿಲ್ಲ. 2018ರಲ್ಲಿ ಒಬ್ಬರು ಮಾತ್ರ ಪಕ್ಷೇತರ ಶಾಸಕರು ಗೆದ್ದಿದ್ದರು. ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರ ಪತನಗೊಂಡು ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗ ಏಕೈಕ ಪಕ್ಷೇತರ ಶಾಸಕರಿಗೆ ಮಾತ್ರ ಸ್ಥಾನ ಸಿಕ್ಕಿತ್ತು. ಭ್ರಷ್ಟಾಚಾರದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅವರು ಸಚಿವ ಸ್ಥಾನ ಕಳೆದುಕೊಳ್ಳಬೇಕಾಯಿತು.

ಪಕ್ಷೇತರರ ಪ್ರಾತಿನಿಧ್ಯ: ಕರ್ನಾಟಕ ವಿಧಾನಸಭೆಗೆ 1952ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ 154 ಮಂದಿ ಪಕ್ಷೇತರರು ಸ್ಪರ್ಧಿಸಿ 11 ಮಂದಿ ಗೆದ್ದಿದ್ದರು. ಅದಾದ ಅನಂತರದ 11 ವಿಧಾನಸಭೆ ಚುನಾವಣೆಗಳಲ್ಲಿ ಅಂದರೆ 2004ರ ವರೆಗೆ ಗೆದ್ದ ಪಕ್ಷೇತರರ ಸಂಖ್ಯೆ ಎರಡಂಕಿ ಇತ್ತು. ಕಳೆದ ಮೂರು ಚುನಾವಣೆಗಳಲ್ಲಿ ಗೆದ್ದವರ ಸಂಖ್ಯೆ ಒಂದಂಕಿಗೆ ಇಳಿಯಿತು. ಅತೀ ಹೆಚ್ಚು 41 ಪಕ್ಷೇತರರು 1967ರಲ್ಲಿ ಗೆದ್ದಿದ್ದರೆ, 2018ರಲ್ಲಿ ಅತೀ ಕಡಿಮೆ ಅಂದರೆ ಒಬ್ಬರು ಪಕ್ಷೇತರರು ಮಾತ್ರ ಗೆದ್ದಿದ್ದಾರೆ.

Advertisement

– ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next