ಮೈಸೂರು: ನಾಡಹಬ್ಬ ದಸರಾ ಮೈಸೂರಿಗೆ ಸೀಮಿತವಲ್ಲ, ವಿಶ್ವ ವಿಖ್ಯಾತಿಗಳಿಸಿರುವ ಮೈಸೂರು ದಸರೆಯನ್ನು ವಿಶ್ವಮಟ್ಟಕ್ಕೆ ತಲುಪಿಸಲು ಕ್ರಮಕೈಗೊಳ್ಳಲಾಗುವುದು. ಜೊತೆಗೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಈ ಬಾರಿ ವೈಭವಯುತ ದಸರಾ ಆಯೋಜನೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಬ್ಟಾಗಿಲು ಹುಣಸೂರು ತಾಲೂಕು ವೀರನಹೊಸಹಳ್ಳಿ ಬಳಿ ಭಾನುವಾರ ಅರ್ಜುನ ನೇತೃತ್ವದ ದಸರಾ ಆನೆಗಳ ಮೊದಲ ತಂಡವನ್ನು ಮೈಸೂರಿಗೆ ಕಳುಹಿಸುವ ಗಜಪಯಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಕಲೆಯನ್ನು ಉಳಿಸುವ ಜೊತೆಗೆ ನಾಡಿನ ವೈಭವವನ್ನು ಸಾರುವ, ರಾಜ-ಮಹಾರಾಜರು ಹಾಕಿಕೊಟ್ಟ ಸಂಪ್ರದಾಯ-ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದಲ್ಲದೆ, ದಸರೆಯ ಸಂದರ್ಭದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗುವುದು.
ಈ ಬಾರಿಯ ದಸರಾ ಮಹೋತ್ಸವದ ಕಾರ್ಯಕ್ರಮಗಳನ್ನು ರೂಪಿಸುವ ಸಂಬಂಧ ಸೆ.6ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಲಿದ್ದು, ಜಿಲ್ಲೆಯ ಪ್ರತಿ ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ದಸರಾ ಸಂಬಂಧಿತ ಒಂದಲ್ಲಾ ಒಂದು ಕಾರ್ಯಕ್ರಮವನ್ನು ರೂಪಿಸಲಾಗುವುದು.
ರೈತ ದಸರಾ, ಮಹಿಳಾ ದಸರಾ, ಯುವ ದಸರಾ ಕಾರ್ಯಕ್ರಮಗಳು ಕೂಡ ಮೈಸೂರಿಗೆ ಮಾತ್ರ ಸೀಮಿತವಾಗದಂತೆ ಪ್ರತಿ ತಾಲೂಕಿನಲ್ಲೂ ಒಂದೊಂದು ದಿನ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು. ಪಕ್ಷ ರಾಜಕಾರಣ ಮರೆತು ವೈಭವಯುತವಾಗಿ ದಸರಾ ಆಚರಿಸುವ ಮೂಲಕ ಮೈಸೂರು ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಮಾಡೋಣ ಎಂದು ಹೇಳಿದರು.