ವಾಷಿಂಗ್ಟನ್: ಸಂಸ್ಕೃತ ಭಾಷೆಯಲ್ಲಿರುವ ವೇದ ಮಂತ್ರಗಳನ್ನು ಪಠಿಸಿದರೆ ನೆನಪಿನ ಶಕ್ತಿ ಹೆಚ್ಚಲಿದೆ! ಹೀಗಂಥ ನಾವು ಹೇಳುತ್ತಿಲ್ಲ. ಸ್ವತಃ ನರರೋಗ ಶಾಸ್ತ್ರಜ್ಞರ ಅಧ್ಯಯನ ವರದಿಯಲ್ಲೇ ಇದು ಉಲ್ಲೇಖವಾಗಿದೆ. ಹೌದು. ವೇದ ಮಂತ್ರಗಳನ್ನು ಪಠಣ ಮಾಡುವುದರಿಂದ ನೆನಪಿನ ಶಕ್ತಿ ಹೆಚ್ಚಲಿದೆ ಎಂದು ಅಮೆರಿಕದ ನರರೋಗ ಶಾಸ್ತ್ರಜ್ಞ ಜೇಮ್ಸ್ ಹಾರ್ಟ್‌ಜೆಲ್ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ಈ ಅಧ್ಯ ಯನಕ್ಕೆ “ಸಂಸ್ಕೃತ ಎಫೆಕ್ಟ್ ‘ ಎಂದು ಕರೆದಿರುವ ಜೇಮ್ಸ್, ವೇದ ಮಂತ್ರಗಳನ್ನು ಪಠಣ ಮಾಡುವಾಗ ಜ್ಞಾಪಕ ಪ್ರಕ್ರಿಯೆ ನಡೆಯುವ ಮಿದುಳಿನ ಭಾಗ ವಿಸ್ತಾರಗೊಳ್ಳುತ್ತದೆ. ಇದು ಅಲ್ಪ ಮತ್ತು ದೀರ್ಘಕಾಲೀನ ಜ್ಞಾಪನ ಶಕ್ತಿ ಯನ್ನು ವೃದ್ಧಿಸುವಂತೆ ಮಾಡಲಿದೆ ಎಂದು ತಮ್ಮ ವರದಿಯಲ್ಲಿ ವಿವರಿಸಿದ್ದಾರೆ.
ಹಾರ್ಟ್‌ಜೆಲ್ ಅವರು ಸಂಸ್ಕೃತ ಹಾಗೂ ಟಿಬೆಟನ್ ಅನ್ನು ಕ್ರಮವಾಗಿ ಹಾರ್ವರ್ಡ್, ಕೊಲಂಬಿಯಾ ವಿವಿಗಳು ಮತ್ತು ಟ್ರೆಂಟೋ ವಿವಿ ಯಿಂದ ನ್ಯೂರೋಸೈನ್ಸ್ ಪದವಿ ಪಡೆದಿದ್ದಾರೆ.
ಈ ಅಧ್ಯಯನಕ್ಕೆ ಹಾರ್ಟ್‌ಜೆಲ್‌ಗೆ ಹರಿಯಾಣದ ರಾಷ್ಟ್ರೀಯ ಮಿದುಳು ಸಂಶೋಧನಾ ಕೇಂದ್ರ (ಎನ್‌ಬಿಆರ್‌ಸಿ)ದ ಡಾ| ತನ್ಮಯನಾಥ್, ಡಾ| ನಂದಿನಿ ಚಟರ್ಜಿ ಸಿಂಗ್ ಕೂಡ ಸಹಕರಿಸಿದ್ದಾರೆ. ಈ ಅಧ್ಯಯನಕ್ಕೆ ದಿಲ್ಲಿಯ ವೇದಿಕ್ ಪಂಡಿತ್ ಶಾಲೆಯ ಶುಕ್ಲ ಯಜುರ್ವೇದ ಪಂಡಿತರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.
ಈ ಪಂಡಿತರು ಸತತ 7 ವರ್ಷಗಳವರೆಗೆ ಶುಕ್ಲ ಯಜುರ್ವೇದವನ್ನು ಪಠಣ ಮಾಡಿದ್ದರು. ಇನ್ನೊಂದೆಡೆ ಸಮೀಪದ ಕಾಲೇಜಿನಿಂದ 21 ಸಾಮಾನ್ಯ ಯುವಕರನ್ನು ಆಯ್ಕೆ ಮಾಡಿಕೊಳ್ಳ ಲಾಗಿತ್ತು. ಎಲ್ಲರೂ ಸರಾಸರಿ 22 ವರ್ಷದ ಯುವಕರಾಗಿದ್ದು, ಇವರ ಮಿದುಳಿನ ಸ್ಕ್ಯಾನಿಂಗ್ ಮಾಡಿ ಅಧ್ಯಯನ ನಡೆಸಿದಾಗ ಈ ಅಂಶಗಳು ಬೆಳಕಿಗೆ ಬಂದಿವೆ. ಆಗ ವೇದಾಧ್ಯಯನ ಮಾಡಿದ ಪಂಡಿತರ ಮಿದುಳು ಸಾಮಾನ್ಯ ಯುವಕರಿಗಿಂತ ಹೆಚ್ಚು ಹಿಗ್ಗಿರುವುದು ಕಂಡುಬಂದಿದೆ.