ಉತ್ತರ ಪ್ರದೇಶ : ಭಾರತದಲ್ಲಿ ವಿವಿಧ ಭಕ್ಷ ಭೋಜನಗಳಿಗೆ ಕೊರತೆಯೇ ಇಲ್ಲ. ಅದರಲ್ಲೂ ರಸ್ತೆ ಬದಿಯ ಆಹಾರ ತಿನಿಸುಗಳ ಬಗ್ಗೆ ಮಾತನಾಡಿದ್ರೆ ಬಾಯಲ್ಲಿ ನೀರು ಬರೋದು ಗ್ಯಾರೆಂಟಿ. ಇತ್ತೀಚಿನ ದಿನಗಳಲ್ಲಿ ವೆರೈಟಿಯಾಗಿ ತಿನಿಸುಗಳನ್ನು ಮಾಡಲು ಕಲಿತಿರುವ ಮಂದಿ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದೇ ಸಾಲಿಗೆ ಸೇರುವ ಅಂಗಡಿಯೊಂದು ಉತ್ತರ ಪ್ರದೇಶದಲ್ಲಿ ಕಂಡು ಬಂದಿದೆ. ಇಲ್ಲಿನ ವಿಶೇಷ ಏನಂದ್ರೆ ಆಹಾರವನ್ನು ತಯಾರಿಸುವುದೇ ಮರಳಿಂದ. ಆಶ್ಚರ್ಯ ಆದರೂ ಕೂಡ ಇದು ಸತ್ಯ.
ಹೌದು, ಹಾಗಾದ್ರೆ ಯಾವುದಪ್ಪ ಈ ತಿನಿಸು ಅಂದ್ರಾ..? ಅದೇ ‘ಭುನ ಆಲೂ’.. ಈ ತಿನಿಸನ್ನು ಆಲೂಗಡ್ಡೆಯಿಂದ ಮಾಡಲಾಗುತ್ತದೆ. ಉತ್ತರ ಪ್ರದೇಶದ ಮೈನ್ ಪುರಿಯಲ್ಲಿ ಈ ಅಂಗಡಿ ಇದ್ದು, ಇದನ್ನು ಸುಮಾರು ಏಳು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ.
ಆಲೂಗಡ್ಡೆಯನ್ನು ಮರಳು ತುಂಬಿದ ದೊಡ್ಡ ಬಾಂಡ್ಲಿಯಲ್ಲಿ ಬೇಯಿಸಲಾಗುತ್ತದೆ. ಸುಮಾರು 20 ನಿಮಿಷಗಳ ಕಾಲ ಆಲೂಗಡ್ಡೆಯನ್ನು ಬೇಯಿಸಿ ನಂತ್ರ ಇದನ್ನು ಚಟ್ನಿ ಸಮೇತ ಬಡಿಸಲಾಗುತ್ತದೆ. ಕೊತ್ತಂಬರಿ ಸೊಪ್ಪು, ಟೊಮೊಟೊ, ಶುಂಠಿ ಮತ್ತು ಬೆಳ್ಳುಳ್ಳಿಯಿಂದ ಸಿದ್ಧ ಮಾಡಿದ ಚಟ್ನಿ ಜೊತೆ ಭುನ ಆಲೂ ಅನ್ನು ಕೊಡಲಾಗುತ್ತದೆ. ಒಂದು ಪ್ಲೇಟ್ ಭುನ ಆಲೂ ಬೆಲೆ 25 ರೂಪಾಯಿ.
ಈ ವಿಡಿಯೋ ವೈರಲ್ ಆದದ್ದು ಫುಡ್ ಬ್ಲಾಗರ್ ಅಮರ್ ಸಿರೋಹಿ ಎಂಬುವವರು ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ನಂತ್ರ. ಎಣ್ಣೆ ಇಲ್ಲದೆ, ಮಸಾಲೆ ಇಲ್ಲದೆ ಕಡಿಮೆ ಅವಧಿಯಲ್ಲಿ, ಕಡಿಮೆ ಸಮಯದಲ್ಲಿ ತಯಾರಾಗುವ ಈ ರೆಸಿಪಿಯನ್ನು ನೀವೂ ಕೂಡ ಪ್ರಯತ್ನಿಸಬಹುದು.