ಚಾಮರಾಜನಗರ: ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಮತದಾರರು ಎಲೆಕ್ಟ್ರಾನಿಕ್ ಮತ ಯಂತ್ರದಲ್ಲಿ ಮತ ಹಾಕಿದ ಬಗ್ಗೆ ಖಾತರಿ ಪಡಿಸಿಕೊ ಳ್ಳಲು ಅವಕಾಶ ಕಲ್ಪಿಸಿರುವ ನೂತನ ವಿವಿಪಿಎ ಟಿ(ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್) ವ್ಯವಸ್ಥೆ ಬಗ್ಗೆ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಸಹ ಮತದಾರರಿಗೆ ಜಾಗೃತಿ ಮೂಡಿಸಲು ಸಹಕರಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ.ರಾಮು ಮನವಿ ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳು ಹಾಗೂ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಅವರ ಪ್ರತಿನಿಧಿಗಳಿಗಾಗಿ ವಿವಿಪಿಎಟಿ, ಇವಿಎಂ ಹಾಗೂ ಮತದಾನಕ್ಕಾಗಿ ಕೈಗೊಳ್ಳಲಾಗಿರುವ ಸಿದ್ಧತೆ ಕುರಿತು ವಿವರಿಸುವ ಸಲುವಾಗಿ ಕರೆಯಲಾಗಿದ್ದ ಸಭೆಯಲ್ಲಿ ಅವರು ಮತನಾಡಿದರು.
ಇವಿಎಂಗಳ ಬಗ್ಗೆ ಮತದಾರರಲ್ಲಿ ಸಂಶಯ ನಿವಾರಿಸಿ ಪಾರದರ್ಶಕತೆ ಕಾಯ್ದುಕೊಳ್ಳುವ ಸಲುವಾಗಿ ಪ್ರಪ್ರಥಮ ಬಾರಿಗೆ ಗುಂಡ್ಲುಪೇಟೆ ವಿಧಾನಸಭಾ ಉಪ ಚುನಾವಣೆಯಲ್ಲಿ ವಿವಿಪಿ ಎಟಿ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಲಾಗುತ್ತಿದೆ. ವಿವಿಪಿಎಟಿ ಯಂತ್ರ ಗಳನ್ನು ಇವಿಎಂ (ವಿದ್ಯುನ್ಮಾನ ಮತ ಯಂತ್ರ) ಗೆ ಜೋಡಣೆ ಮಾಡಲಾಗಿರುತ್ತದೆ.
ಮತದಾರರು ಅಭ್ಯರ್ಥಿಯ ಹೆಸರಿನ ಮುಂದೆ ಗುಂಡಿ ಒತ್ತಿದ ತಕ್ಷಣ ವಿವಿಪಿಎಟಿಯಲ್ಲಿ ಮತದಾರ ಚಲಾಯಿಸಿದ ಮತ ಉದ್ದೇಶಿತ ಅಭ್ಯರ್ಥಿಗೆ ಹೋಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬಹುದಾಗಿದೆ. ಅಭ್ಯರ್ಥಿಯ ಹೆಸರು ಕ್ರಮ ಸಂಖ್ಯೆ, ಚಿಹ್ನೆಯು ಮತದಾರನಿಗೆ ವಿವಿಪಿಎಟಿ ಯಂತ್ರದಲ್ಲಿ 7 ಸೆಕೆಂಡುಗಳ ಕಾಲ ಗೋಚರವಾಗಲಿದೆ. ಇದರಿಂದ ಮತದಾರನಿಗೆ ಅವರು ಇಚ್ಚಿಸಿದ ಅಭ್ಯರ್ಥಿಗೆ ಮತ ಚಲಾವಣೆಯಾಗಿರುವ ಬಗ್ಗೆ ಖಾತರಿಯಾಗಲಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಮತಗಟ್ಟೆಗಳಲ್ಲಿ ವಿವಿಪಿಎಟಿ ಯಂತವು ಬಳಕೆಯಾಗುತ್ತಿದೆ. ಇವಿಎಂ ಹಾಗೂ ವಿವಿಪಿಎಟಿ ಯಂತ್ರಗಳು ಸಾಕಷ್ಟು ಪ್ರಮಾಣದಲ್ಲಿ ಇವೆ ಈಗಾಗಲೇ ಪ್ರಥಮ ಹಂತದ ಪರಿಶೀಲನೆಯನ್ನು ಎರಡು ಬಾರಿ ಚುನಾವಣಾ ವಿಶೇಷ ವೀಕ್ಷಕರು ಸಾಮಾನ್ಯ ವೀಕ್ಷಕರು ಹಾಗೂ ರಾಜಕೀಯ ಪಕ್ಷಗಳು ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಅವರ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಸಲಾಗಿದೆ.
ಚುನಾವಣೆಗೆ ಅಗತ್ಯವಾಗಿರುವ ಬ್ಯಾಲೆಟ್ ಯೂನಿಟ್ ಕಂಟ್ರೋಲ್, ಯೂನಿಟ್ ಮತ್ತು ವಿವಿಪಿಎಟಿ ಯಂತ್ರಗಳು ಇದ್ದು ಇದರಲ್ಲಿ ಮತದಾನದ ವೇಳೆ ತಾಂತ್ರಿಕ ದೋಷ ಕಂಡುಬಂದಲ್ಲಿ ತಕ್ಷಣವೇ ಬದಲಾಯಿ ಸಲಾಗುತ್ತದೆ. ಶೇ.35 ರಷ್ಟು ಹೆಚ್ಚುವರಿ ಯಂತ್ರಗಳನ್ನು ಕಾಯ್ದಿರಿಸಿಕೊಳ್ಳಲಾಗಿದೆ. ಬಿಇಎಲ್‌ನಿಂದ ಎಂಜಿನಿಯರ್‌ಗಳು, ತಾಂತ್ರಿಕ ಪರಿಣಿತರು ಸಹ ಇರಲ್ಲಿದ್ದು ಯಾವುದೇ ಗೊಂದಲಕ್ಕೆ ಅವಕಾಶವಾಗದಂತೆ ನೋಡಿ ಕೊಳ್ಳಲಿದ್ದೇವೆ ಎಂದು ಜಿಲ್ಲಾಧಿಕಾರಿ ರಾಮು ತಿಳಿಸಿದರು.
ಮತ ಖಾತರಿ ಪಡಿಸಿಕೊಳ್ಳಲು ಮತದಾರನಿಗೆ ಅವಕಾಶ ಕಲ್ಪಿಸಲಾಗಿರುವ ನೂತನ ವಿವಿಪಿಎಟಿ ಬಗ್ಗೆ ರಾಜಕೀಯ ಪಕ್ಷಗಳು ಅಭ್ಯರ್ಥಿಗಳು ಅವರ ಪ್ರತಿನಿಧಿಗಳು ಸಹ ಮತದಾರರಿಗೆ ಅರಿವು ಮೂಡಿಸಬೇಕು ಎಂದರು. ಚುನಾವಣಾ ವೆಚ್ಚ ವೀಕ್ಷಕ ಸುಬೇಂದ್ರ, ಪೊಲೀಸ್ ವೀಕ್ಷಕ ಜಾಕೋಬ್ ಜಾಬ್, ಜಿಪಂ ಸಿಇಒ ಡಾ.ಕೆ.ಹರೀಶ್‌ಕುಮಾರ್, ಎಡೀಸಿ ಕೆ.ಎಂ.ಗಾಯತ್ರಿ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.