ಕೂಡ್ಲಿಗಿ: “ಅಡ್ಡಡ್ಡ ಮಳಿ ಬಂದ, ದೊಡ್ಡ ದೊಡ್ಡ ಕೆರಿ ತುಂಬಿ, ಗೊಡ್ಡುಗಳೆಲ್ಲ ಹೈನಾಗಿ ಜೋಕುಮಾರ, ಮಡಿವಾಳರ ಕೇರಿ ಹೊಕ್ಕಾನೆ ಜೋಕುಮಾರ, ಮುಡಿ ತುಂಬಾ ಹೂ ಮುಡಿದಂತ ಚಲುವಿ ತನ್ನ ಮಡದಿಯಾಗೆಂದ ಸುಕುಮಾರ…’
“ಜೋಕುಮಾರ ಹುಟ್ಟಲಿ, ಲೋಕವೆಲ್ಲ ಬೆಳಗಲಿ. ಆ ತಾಯಿ ಹಾಲು ಕರೆಯಲಿ, ಕಟ್ಟಿದ ಮೊಸರು ಕಟಿಯಲಿ ನಮ ದೇವಿ…’ ಹೀಗೆ ಸಾಮೂಹಿಕವಾಗಿ ಮಹಿಳೆಯರು ಜೋಕು ಮಾರನ ಕುರಿತು ಜನಪದ ಶೈಲಿಯಲ್ಲಿ ಸುಶ್ರಾವ್ಯವಾಗಿ ಹಾಡುವುದನ್ನು ಕೇಳುವುದೇ ಇಂಪು. ಈ ರೀತಿ ಜನಪದ ಶೈಲಿಯಲ್ಲಿ ವಿಶಿಷ್ಟವಾಗಿ ಹಾಡುವ ಬಾರಿಕೇರ ಸಮುದಾಯ ಮಹಿಳೆಯರ ಗುಂಪು ಬಿದಿರು ಪುಟ್ಟಿಯಲ್ಲಿ ಜೋಕುಮಾರನನ್ನು ಪ್ರತಿಷ್ಠಾಪಿಸಿಕೊಂಡು ಮನೆಗಳಿಗೆ ಹೊತ್ತೂಯ್ಯುವ ಹಬ್ಬದ ಆಚರಣೆ ಸೊಬಗು ಕೂಡ್ಲಿಗಿ ಪಟ್ಟಣದ ವಿವಿಧ ಭಾಗಗಳಲ್ಲಿ ಮತ್ತು ಹಳ್ಳಿಗಳಲ್ಲಿ ಆರಂಭಗೊಂಡಿದೆ.
ಕೂಡ್ಲಿಗಿ ಗಂಗಾಮತಸ್ಥರ ಮನೆಯಲ್ಲಿ ಜನಿಸಿರುವ ಜೋಕುಮಾರ ಸ್ವಾಮಿಯನ್ನು ಹನ್ನೊಂದು ದಿನ ಏಳು ಊರುಗಳಲ್ಲಿ ಬಾರಿಕೇರ ಬಸಮ್ಮ, ರೇಣುಕಮ್ಮ, ರತ್ನಮ್ಮ ಮೆರೆಸುತ್ತಾರೆ. ಎಣ್ಣೆ ಮತ್ತು ಹುತ್ತಿನ ಮಣ್ಣಿನಿಂದ ತಯಾರಿಸಿದ ಜೋಕುಮಾರನನ್ನು ಬಿದಿರಿನ ಬುಟ್ಟಿಯಲ್ಲಿ ಪ್ರತಿಷ್ಠಾಪಿಸಿ ಬೇವಿನ ಎಲೆ, ಸಜ್ಜೆ, ಜೋಳ, ದಾಸವಾಳ ಹೂವಿನಿಂದ ಅಲಂಕರಿಸಿರುತ್ತಾರೆ. ಹೀಗೆ ಬುಟ್ಟಿಯಲ್ಲಿ ಹೊತ್ತುಯ್ಯುವ ಜೋಕುಮಾರನಿಗೆ ಮನೆ ಮಂದಿ ಅಡಕೆ, ಎಲೆ, ಅಕ್ಕಿ, ಜೋಳ ಇತ್ಯಾದಿ ಕಾಳು ಕಡಿ, ಎಣ್ಣೆ, ಉಪ್ಪು, ಹುಣಸೆ, ಒಣ ಮೆಣಸಿನಕಾಯಿ, ಬೆಲ್ಲ ಮುಂತಾದ ಪದಾರ್ಥಗಳನ್ನು ಕೊಡುವರು.ಜೋಕುಮಾರನನ್ನು ಸೆ.28 ರಂದು ರಾತ್ರಿ ಅಂತ್ಯಕ್ರಿಯೆ ವಿಧಿ ವಿಧಾನವನ್ನು ನೆರವೇರಿಸುತ್ತಾರೆ ಎಂದು ಅವರು ಹೇಳುತ್ತಾರೆ.
ತಾವು ಹನ್ನೊಂದು ದಿನ ಸಂಚರಿಸಿದ ಸಂದರ್ಭದಲ್ಲಿ ದೊರೆತ ಧವಸ ಧಾನ್ಯಗಳಿಂದ ಅಡುಗೆ ಮಾಡಿ ಜೋಕುಮಾರನಿಗೆ ನೈವೇದ್ಯ ಅರ್ಪಿಸಿ ನಂತರ ಸಾಮೂಹಿಕ ಭೋಜನ ಮಾಡುವುದಾಗಿ ಅವರು ತಿಳಿಸಿದರು. ಮಳೆ ತರಿಸುವ, ಬೆಳೆ ಕಾಪಾಡುವ ಹಾಗೂ ಸಮೃದ್ಧ ಫಸಲಿನ ಸಂಕೇತವಾದ ಜೋಕುಮಾರನ ಆಚರಣೆ ನಮ್ಮ ಸಮುದಾಯದಲ್ಲಿ ತಲೆ ತಲಾಂತರದಿಂದ ನಡೆದುಕೊಂಡು ಬಂದಿದೆ ಎಂದೂ ಹೇಳಿದರು.
ಜೋಕುಮಾರಸ್ವಾಮಿ ಹಬ್ಬವನ್ನು ಭಯ ಭಕ್ತಿ ಶ್ರದ್ಧೆಯಿಂದ ವಂಶ ಪಾರಂಪರಿಕವಾಗಿ ಆಚರಿಸಿಕೊಂಡು ಬರಲಾಗುತ್ತದೆ. ಎಷ್ಟೇ ಆಧುನಿಕತೆಗೆ ಮನುಷ್ಯ ಹೋದರು ನಮ್ಮ ಹಿಂದಿನ ಸಂಸ್ಕಾರ ಪದ್ಧತಿ ಬಿಡುವುದಿಲ್ಲ. ನಿರಂತರವಾಗಿ ಆಚರಣೆ ಮಾಡುತ್ತಾ ಬರುತ್ತೇವೆ.
ಬಿ.ಜಗದೀಶ,
ಗಂಗಾಮತಸ್ಥರು ಕೂಡ್ಲಿಗಿ
ಕೆ.ನಾಗರಾಜ