Advertisement

ದೇಶದೆಲ್ಲೆಡೆ ಹೀಗಿದೆ ದಸರಾ ಆಚರಣೆ

02:40 AM Oct 18, 2018 | Team Udayavani |

ದಸರೆಯನ್ನು ದೇಶದ ನಾನಾ ಭಾಗಗಳಲ್ಲಿ  ವಿಧವಿಧವಾಗಿ ಆಚರಿಸಲಾಗುತ್ತದೆ. ದಕ್ಷಿಣ, ಪೂರ್ವ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮುಖ್ಯವಾಗಿ ಮಹಿಷಾಸುರನ ವಿರುದ್ಧದ ದುರ್ಗೆಯ ವಿಜಯದಿನವನ್ನಾಗಿ ಆಚರಿಸಲಾಗುತ್ತದೆ. ಪುರಾಣದ ಪ್ರಕಾರ-ಬ್ರಹ್ಮನ ವರಬಲದಿಂದ ಮದೋನ್ಮತ್ತನಾಗಿದ್ದ ಮಹಿಷಾಸುರನ ಸಂಹಾರ ಮಾಡಲು, ದೇವತೆಗಳೆಲ್ಲ ತಮ್ಮ ಶರೀರದ ಒಂದೊಂದು ಅಂಶವನ್ನು ತೆಗೆದು ಆದಿಶಕ್ತಿಯನ್ನು ಸೃಷ್ಟಿ ಮಾಡುತ್ತಾರೆ. ಮಹಿಷನ ಮೇಲೆ ಯುದ್ಧಕ್ಕೆ ಕಳುಹಿಸಿ ಅವನನ್ನು ಸಂಹಾರ ಮಾಡಲು ನೆರವಾಗುತ್ತಾರೆ. ಹತ್ತು ದಿನಗಳಲ್ಲಿ ಆಕೆ ಮಹಿಷನನ್ನು ಸಂಹರಿಸುತ್ತಾಳೆ. ಆದುದರಿಂದಲೇ ಹತ್ತನೆಯ ದಿನ ವಿಜಯದಶಮಿಯನ್ನು ಆಚರಿಸುವುದು ರೂಢಿಯಾಗಿದೆ. ಉತ್ತರ ಮತ್ತು ಪಶ್ಚಿಮ ರಾಜ್ಯಗಳಲ್ಲಿ  ಈ ದಿನವನ್ನು ರಾವಣನ ವಿರುದ್ಧದ ರಾಮಚಂದ್ರನ ವಿಜಯದ ದ್ಯೋತಕವಾಗಿ ಆಚರಿಸಲಾಗುತ್ತದೆ. ಇದು ರಾಮ್‌ಲೀಲಾ ಎಂದೇ ವಿಖ್ಯಾತ. ಅಲ್ಲದೇ, ಪಾಂಡವರು ಕೌರವರ ಮೇಲೆ ವಿಜಯ ಸಾಧಿಸಿದ ದಿನವೂ ಇದೆಂದು ಹೇಳಲಾಗುತ್ತದೆ. ಒಟ್ಟಲ್ಲಿ, ದೇಶದ ವಿವಿಧೆಡೆಗಳಲ್ಲಿ ವಿಧವಿಧವಾದ ದಸರಾ ಆಚರಣೆಗಳಿವೆ.  
ಅವುಗಳತ್ತ ಕಿರುನೋಟ…

Advertisement

ವಾರಾಣಸಿ ರಾಮಲೀಲಾ
ದೇಶದ ಅತಿ ಪುರಾತನ ನಗರಿಗಳಲ್ಲಿ ಒಂದಾಗಿರುವ ವಾರಾಣಸಿಯು ಪ್ರತಿವರ್ಷದ ರಾಮಲೀಲಾ ಉತ್ಸವಕ್ಕೂ ಹೆಸರುವಾಸಿಯಾಗಿದೆ. 18ನೇ ಶತಮಾನದಿಂದಲೇ ರಾಮನಗರ ಕೋಟೆಯ ಬದಿಯಲ್ಲಿ ರಾಮಲೀಲಾ ಉತ್ಸವವನ್ನು ಆಚರಿಸಲಾಗುತ್ತದೆ. ಅಂದಿನ ಮಹಾರಾಜ ಉದಿತ್‌ ನಾರಾಯಣ ಸಿಂಗ್‌ ಬನಾರಸ್‌ನಲ್ಲಿ ರಾಮಲೀಲಾ ಆರಂಭಿಸಿದರು ಎನ್ನಲಾಗುತ್ತದೆ. ಕೋಟೆಯ ಸುತ್ತಲಿನ ಜಾಗವನ್ನು ಅಯೋಧ್ಯೆ, ಲಂಕಾ, ಅಶೋಕವಾಟಿಕಾ ಪ್ರದೇಶಗಳಾಗಿ ಮಾರ್ಪಡಿಸಲಾ ಗುತ್ತದೆ. ರಾಮಾಯಣದ ವಿವಿಧ ಘಟನೆಗಳನ್ನು ಪ್ರದರ್ಶಿಸಲಾಗುತ್ತದೆ. ನಟರು ಹಾಗೂ ವಾದ್ಯಮೇಳ ಒಂದು ಸ್ಥಳದಲ್ಲಿ ಪ್ರದರ್ಶನ ನೀಡಿ, ಇನ್ನೊಂದಕ್ಕೆ ಸಾಗಿದಾಗ ಅವರೊಂದಿಗೆ ಪ್ರೇಕ್ಷಕರೂ ಹೋಗುತ್ತಾರೆ. ವಿಶೇಷವೆಂದರೆ, ಸಾವಿರಾರು ಜನರು ನೆರಿದಿದ್ದರೂ ನಟರು ಮೈಕ್‌ ಅಥವಾ ಲೌಡ್‌ಸ್ಪೀಕರ್‌ಗಳ ಮೊರೆಹೋಗುವುದಿಲ್ಲ. 

ಕುಲಸೈ ಹಬ್ಬ
ತಮಿಳುನಾಡಿನ ಬಂದರು ನಗರಿ ಕುಲಸೇಕರಪಟ್ಟಿಣಂ ತನ್ನ ವಿಶಿಷ್ಟ ದಸರಾ ಆಚರಣೆಯಿಂದ ಹೆಸರುವಾಸಿಯಾಗಿದೆ. ದಸರಾ ಎಂದಲ್ಲ, ಉಳಿದ ದಿನಗಳಲ್ಲೂ ಅಲ್ಲಿನ ಮುತರಮ್ಮನ್‌ ಮಂದಿರ ವಿಶಿಷ್ಟ ಆಚರಣೆಗಳಿಂದ ಸದ್ದು ಮಾಡುತ್ತದೆ. ಮಂದಿರದ ಸಂಪ್ರದಾಯದಂತೆ ಭಕ್ತರು ವಿವಿಧ ವೇಷ ಧರಿಸುತ್ತಾರೆ. ಕೆಲವರು ಕಾಳಿಯಾಗುತ್ತಾರೆ, ಕೆಲವರು ರಾಜರಾಗುತ್ತಾರೆ, ಕೆಲವರು ವಾನರರಾದರೆ, ಉಳಿದವರು ಭಿಕ್ಷುಕರ ವೇಷ ಧರಿಸುತ್ತಾರೆ. ಇವರೆಲ್ಲ ರಸ್ತೆಯಲ್ಲಿ ನೆರೆದು ಭಿಕ್ಷೆ ಯಾಚಿಸುತ್ತಾರೆ. ಹೀಗೆ ಸಂಗ್ರಹವಾದ ಹಣವನ್ನು ದೇವಿ ಮುತರಮ್ಮನ್‌ಗೆ ಅರ್ಪಿಸಲಾಗುತ್ತದೆ. ದಸರಾ ಸಮಯದಲ್ಲಿ ಈ ಪ್ರದೇಶವು ವರ್ಣಮಯ ವೇಷ ಧರಿಸಿದ ಭಕ್ತಾದಿಗಳಿಂದ ಕಂಗೊಳಿಸುತ್ತದೆ. ಸರಿ ರಾತ್ರಿಯವರೆಗೂ ಸಂಗೀತ, ನೃತ್ಯ ನಡೆದೇ ಇರುತ್ತದೆ.

ಗುಜರಾತ್‌ ದಸರಾ
ಗುಜರಾತ್‌ನಲ್ಲಿನ ದಸರಾ ಆಚರಣೆ ಸಂಗೀತ-ನೃತ್ಯಗಳಿಂದ ಖ್ಯಾತಿವೆತ್ತಿದೆ. ಅದರಲ್ಲೂ ಮುಖ್ಯ ವಾಗಿ ಅಹಮದಾಬಾದ್‌ನಲ್ಲಿನ ನವರಾತ್ರಿ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿ ಸ ಲಾಗುತ್ತದೆ. 9 ದಿನಗಳವರೆಗೆ ಉಚಿತ ಖಾದ್ಯ ವಿತರಣೆ, ಚನಿಯಾ ಛೋಲಿ, ಕಾಫಿ ಪೈಜಾಮಾ ಧಾರಿಗಳಿಂದ ಗಾರ್ಬಾ ನೃತ್ಯಸೇವೆ ನಡೆಯುತ್ತದೆ. ಸಾವಿರಾರು ಜನರು ವರ್ತುಲ ರೂಪಿಸಿ ಗುಜರಾತಿ ಆರತಿ ಎಂದೇ ಹೆಸರುವಾಸಿಯಾದ ನೃತ್ಯದ ಮೂಲಕ ದೇವಿಗೆ ನಮನ ಸಲ್ಲಿಸುತ್ತಾರೆ. 

ಕೋಲ್ಕತಾ ದುರ್ಗಾ ಪೂಜೆ
ಪಶ್ಚಿಮ ಬಂಗಾಳದ ಅತಿದೊಡ್ಡ ಹಬ್ಬವಿದು. ದುರ್ಗಾ ಪೂಜೆಯ ದಿನದಂದು ಇಡೀ ಕೋಲ್ಕತಾವೇ ಸಂಭ್ರಮದ ನಗರಿಯಾಗಿ ಬದಲಾಗುತ್ತದೆ. ನಮ್ಮಲ್ಲಿ ಗಣೇಶ ಹಬ್ಬದಂದು ಮೂರ್ತಿಗಳನ್ನು ಕೂರಿಸುವಂತೆಯೇ ಕೋಲ್ಕತ್ತಾದ ಗಲ್ಲಿಗಲ್ಲಿಗಳಲ್ಲಿÉ ದುರ್ಗಾ ಮಾತೆಯ ಪೆಂಡಾಲ್‌ಗ‌ಳನ್ನು ಹಾಕಲಾಗುತ್ತದೆ. ಪ್ರತಿ ಮೂರ್ತಿ ಮತ್ತು ಪೆಂಡಾಲ್‌ಗ‌ಳಿಗೂ ವಿಶಿಷ್ಟವಾದ ಥೀಮ್‌ ಇರುತ್ತದೆ. ಅದು ಪ್ರತಿ ವರ್ಷವೂ ಬದಲಾಗುತ್ತಿರುತ್ತದೆ. ಉತ್ಸವದ ಕೊನೆಗೆ ಪ್ರತಿ ಮನೆಯಲ್ಲೂ ಭೋಗ್‌ ಎಂಬ ಖಾದ್ಯವ‌ನ್ನು ಸೇವಿಸಲಾಗುತ್ತದೆ. ಪೂಜೆಯ ವೇಳೆಯಲ್ಲಿ ಢಾಕ್‌ ವಾದ್ಯದ ತಾಳಕ್ಕೆ ತಕ್ಕಂತೆ ಬೆಂಗಾಲಿ ಮಹಿಳೆಯರು ನರ್ತಿಸುತ್ತಾರೆ.

Advertisement

ಆದಾಗ್ಯೂ ಸಾರ್ವಜನಿಕ ದುರ್ಗಾ ಪೂಜೆಯೇ ಎಲ್ಲರ ಕೇಂದ್ರಬಿಂದು ವಾಗಿರುತ್ತದಾದರೂ ಕೋಲ್ಕತಾ ನಗರಿಯ ಪ್ರಮುಖ ಕುಟುಂಬಗಳಲ್ಲಿ ನಡೆ ಯುವ ದುರ್ಗಾ ಪೂಜೆಯೂ ಅಷ್ಟೇ ಮಹತ್ವಪಡೆದಿದೆ. ಈ ಕುಟುಂಬಗಳನ್ನು “ಬೋನೇದಿ’ ಕುಟುಂಬಗಳು ಎನ್ನಲಾಗುತ್ತದೆ. ಬೋನೇದಿ ಎನ್ನುವುದು ಬುನಿಯಾದಿ ಎಂಬ ಪದದಿಂದ ಬಂದದ್ದು. (ಈ ಕುಟುಂಬಗಳು ಕೋಲ್ಕತಾ ನಗರಿಯ ಬುನಾದಿಗಳು ಎಂಬ ಹಿರಿಮೆ ಗಳಿಸಿವೆ). ಬ್ರಿಟಿಷ್‌ ಆಡಳಿತಾವಧಿಯಲ್ಲಿ ಈ ಕುಟುಂಬಗಳು ಅತ್ಯಂತ ವಿಜೃಂಭಣೆಯಿಂದ ದುರ್ಗಾ ಪೂಜೆ ನಡೆಸುತ್ತಿದ್ದವಾದರೂ ಈಗ ಆಚರಣೆಯಲ್ಲಿ ಮೊದಲಿನಂಥ ವೈಭವವಿಲ್ಲ. ಕೆಲವೊಂದು ಕುಟುಂಬಗಳಲ್ಲಿ 300 ವರ್ಷದಿಂದ ದುರ್ಗಾ ಪೂಜೆ ಆಚರಿಸುತ್ತಾ ಬರಲಾಗಿದೆ.  ದುರ್ಗಾ ಮಾತೆಯು ಜೋರ್ಸಾಂಕೋ ಕೃಷ್ಣರ ಕುಟುಂಬದಲ್ಲಿನ ಒಡವೆಗಳನ್ನು ಧರಿಸಿ, ಅಭಯ್‌ ಚರಣ ಮಿತ್ರಾರ ಮನೆಯಲ್ಲಿನ ಭೋಜನ ಸವಿದು, ಝೋವ್‌ಬಜಾರ್‌ ರಾಜ್‌ಬರಿಯಲ್ಲಿ ಸಂಗೀತ ಮತ್ತು ನೃತ್ಯವನ್ನು ಕೇಳಿ-ನೋಡಿ ಆನಂದಿಸುತ್ತಾಳೆ ಎನ್ನುವ ಪ್ರತೀತಿಯಿದೆ.

ಕುಲು ದಶೇರಾ 
ಹಿಮಾಚಲ ಪ್ರದೇಶದ ಕುಲು ಕೇವಲ ಹಿಲ್‌ಸ್ಟೇಷನ್‌ ಆಗಿ ಮಾತ್ರವಲ್ಲ, ದಸರಾ ಮಹೋತ್ಸವದಿಂದಲೂ ವಿಖ್ಯಾತಿ ಪಡೆದಿದೆ. 17ನೇ ಶತಮಾನದಲ್ಲಿ ರಾಜಾ ಜಗತ್‌ ಸಿಂಗ್‌ರ ಕೈಯಲ್ಲಿ ಅಚಾನಕ್ಕಾಗಿ ಒಬ್ಬ ಬ್ರಾಹ್ಮಣನ ಕೊಲೆಯಾಯಿತಂತೆ. ಬ್ರಹ್ಮಹತ್ಯಾ ದೋಷದಿಂದ ಮುಕ್ತಿಪಡೆಯಲು ಈ ರಾಜ ತನ್ನ ಸಿಂಹಾಸನವನ್ನು ತ್ಯಜಿಸಿ ಅದರ ಮೇಲೆ ಅಯೋಧ್ಯೆಯಿಂದ ತಂದ ರಘುನಾಥನ ಮೂರ್ತಿಯನ್ನು ಕುಳ್ಳಿರಿಸಿದನಂತೆ. ದಸರಾ ಸಮಯದಲ್ಲಿ ಪ್ರಭು ರಘುನಾಥ, ಇತರೆ ದೇವತೆ ಗಳೊಂದಿಗೆ ಕುಲುಗೆ ಆಗಮಿಸುತ್ತಾರೆ ಎನ್ನುವ ಪ್ರತೀತಿ ಇದೆ. ಶ್ರದ್ಧಾಳುಗಳು ವಿವಿಧ ದೇವರ ಮೂರ್ತಿಗಳನ್ನು ತಲೆಯ ಮೇಲೆ ಹೊತ್ತು ಆ ಮೂರ್ತಿಗಳನ್ನು ರಾಮನ ಮಂದಿರಕ್ಕೆ ತರುತ್ತಾರೆ. ಮಂದಿರದ ಮೈದಾನದಲ್ಲಿ ಸಾವಿರಾರು ದೇವರ ಮೂರ್ತಿಗಳನ್ನು ಕೂಡಿಸಲಾಗುತ್ತದೆ. ಇವುಗಳಲ್ಲಿ ಕುಲು ಪ್ರದೇಶದ ಕುಲದೇವತೆ ಹಡಿಂಬಾ ಮಾತೆಯೂ ಇರುತ್ತಾಳೆ. 7 ದಿನಗಳವರೆಗೆ ನಡೆಯುವ ಈ ಉತ್ಸವದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಉತ್ಸವದ ಕೊನೆಯ ದಿನ ಬಿಯಾಸ್‌ ನದಿಯ ತಟದಲ್ಲಿ ಮರದ ತುಂಡು, ಒಣಗಿದ ಎಲೆಗಳನ್ನು ಗುಡ್ಡೆಹಾಕಿ ಅದಕ್ಕೆ ಅಗ್ನಿಸ್ಪರ್ಷ ಮಾಡಲಾಗುತ್ತದೆ. ಇದನ್ನು ಕುಲು ಜನರು ಲಂಕಾದಹನ ಎಂದು ಕರೆಯುತ್ತಾರೆ.

ಬತುಕಮ್ಮಾ ಪಂಡುಗ
ಬತುಕಮ್ಮಾ ಪಂಡುಗ ಆಂಧ್ರಪ್ರದೇಶ, ತೆಲಂಗಾಣ, ಒಡಿಶಾದಲ್ಲಿ ಆಚರಿಸಲಾಗುವ ನವರಾತ್ರಿ ಹಬ್ಬ. ತೆಲುಗು ಭಾಷೆಯಲ್ಲಿ ಬತುಕು ಅಂದರೆ ಬದುಕು. ಪಂಡುಗ ಅಂದರೆ ಹಬ್ಬ. ಇದು ದೇವಿ ಗೌರಿಯನ್ನು ಪ್ರಕೃತಿಯ ರೂಪದಲ್ಲಿ ಆರಾಧಿಸುವ ಆಚರಣೆ. ಈ ಹಬ್ಬದ ವಿಶೇಷತೆಯೆಂದರೆ ಗೋಪುರದ ಮಾದರಿಯಲ್ಲಿ ಬಿದಿರಿನ ಕಟ್ಟಿಗೆಗಳನ್ನು ಕಟ್ಟಿ, ಅದಕ್ಕೆ ವಿವಿಧ ಹೂಗಳಿಂದ ಸಿಂಗರಿಸುತ್ತಾರೆ. ಹೆಣ್ಣುಮಕ್ಕಳು ಈ ಗೋಪುರವನ್ನು ತಲೆಯ ಮೇಲೆ ಹೊತ್ತು ಮೆರವಣಿಗೆ ಮಾಡುತ್ತಾರೆ. ಗಣೇಶನ ಪೂಜೆಯೊಂದಿಗೆ ಆರಂಭವಾಗುವ ಈ ಉತ್ಸವದಲ್ಲಿ ಮಹಿಳೆಯರೆಲ್ಲ ಈ ಹೂಕಟ್ಟಿನ ಸುತ್ತಲೂ ಬತುಕಮ್ಮನ ಕುರಿತ ಸಾಂಪ್ರದಾಯಿಕ ಹಾಡು ಹಾಡುತ್ತಾ ಕುಣಿಯುತ್ತಾರೆ. ಮಹಾಲಯ ಅಮಾವಾಸ್ಯೆ ಯಂದು ಆರಂಭವಾಗುವ ಬತುಕಮ್ಮಾ ಹಬ್ಬ ಅಶ್ವಯುಜ ಅಷ್ಟಮಿ/ದುರ್ಗಾಷ್ಟಮಿ ಯಂದು ಕೊನೆಗೊಳ್ಳುತ್ತದೆ. 9 ದಿನಗಳವರೆಗೆ ಬತುಕಮ್ಮನನ್ನು ಸ್ಥಾಪಿಸಲಾದ ಸ್ಥಳದ ಸುತ್ತಲೂ ನಿತ್ಯ ಪೂಜೆ, ಹಾಡು, ನರ್ತನ ಸೇವೆ ನಡೆಯುತ್ತದೆ. ಕೊನೆಯ ದಿನ, ಬತುಕಮ್ಮನನ್ನು ನೀರಿನಲ್ಲಿ ವಿಸರ್ಜಿಸಲಾಗುತ್ತದೆ.

ದಿಲ್ಲಿ ರಾಮಲೀಲಾ
ವಾರಾಣಸಿಯಂತೆ ದಿಲ್ಲಿಯಲ್ಲೂ ಕೂಡ ರಾಮಲೀಲಾ ಉತ್ಸವ ಪ್ರಖ್ಯಾತಿ ಪಡೆದಿದೆ. ದಿಲ್ಲಿಯ ಅನೇಕ ಭಾಗಗಳಲ್ಲಿ ರಾಮಲೀಲಾ ಪ್ರದರ್ಶನ ನಡೆಯುತ್ತದಾದರೂ, ಹಳೆಯ ದಿಲ್ಲಿಯಲ್ಲಿನ ರಾಮಲೀಲಾ ಮೈದಾನದಲ್ಲಿ ನಡೆಯುವ ಪ್ರದರ್ಶನ ಲೋಕವಿಖ್ಯಾತಿ ಪಡೆದಿದೆ. ಗಗನದೆತ್ತರದ ರಾವಣ, ಮೇಘನಾಥ, ಕುಂಭಕರ್ಣನ ಗೊಂಬೆಗಳಿಗೆ ಅಗ್ನಿಸ್ಪರ್ಷ ಮಾಡುವ ಮೂಲಕ ಈ ಉತ್ಸವ ಕೊನೆಗೊಳ್ಳುತ್ತದೆ. 

ಕೋಟಾ ದಸರಾ
ರಾಜಸ್ಥಾನದ ಕೋಟಾ ದಸರಾ ಬೃಹತ್‌ ಜಾತ್ರೆಯಂತೆಯೇ ಕಾಣಿಸುತ್ತದೆ. ರಾಜಸ್ಥಾನಿ ತಿಂಡಿ, ಕರಕುಶಲ ವಸ್ತುಗಳ ಮಾರಾಟ ಭರದಿಂದ ನಡೆಯುತ್ತದೆ. ಕೋಟಾ ಉತ್ಸವವನ್ನು 1723ರಲ್ಲಿ ಇಂದಿನ ಮಹಾರಾಜ ದುರ್ಜನ್‌ಶಾಲ್‌ ಸಿಂಗ್‌ ಆರಂಭಿಸಿದನೆಂದು ಹೇಳಲಾಗುತ್ತದೆ.  ವಿಜಯದಶಮಿಯಂದು 75 ಅಡಿ ಎತ್ತರದ ರಾವಣದ ಗೊಂಬೆಗೆ ರಾಮನ ವೇಷಧಾರಿ ಅಗ್ನಿಸ್ಪರ್ಷ ಮಾಡುತ್ತಾನೆ. ಈ ಉತ್ಸವದಲ್ಲಿ ಕವಿ ಸಮ್ಮೇಳನಗಳು, ಶಾಯರಿ ವಾಚನಗಳು, ಮೀಸೆ ಪ್ರದರ್ಶನ ಸ್ಪರ್ಧೆಗಳು ಕೂಡ ನಡೆಯುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next