ಹಿರಿಯ ಸಾಹಿತಿ ಎಚ್.ಎಸ್.ವೆಂಕಟೇಶಮೂರ್ತಿ ಅವರು ಇದೇ ಮೊದಲ ಬಾರಿಗೆ ಅಭಿನಯಿಸಿರುವ “ಅಮೃತವಾಹಿನಿ’ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಇದೊಂದು ಆಪ್ತವೆನಿಸುವ ಕಥೆ ಆಗಿದ್ದು, ಪ್ರತಿಯೊಬ್ಬರಿಗೂ ಮನಮುಟ್ಟುವಂತಹ ವಿಷಯ ಇಲ್ಲಿದೆ ಎಂಬುದು ಚಿತ್ರತಂಡದ ಮಾತು. ಈ ಚಿತ್ರವನ್ನು ನರೇಂದ್ರ ಬಾಬು ನಿರ್ದೇಶಿಸಿದ್ದು, ಸಂಪತ್‌ಕುಮಾರ್ ಹಾಗು ಅನಂತಪದ್ಮನಾಭ್ ಜೊತೆಗೂಡಿ ನಿರ್ಮಾಣ ಮಾಡಿದ್ದಾರೆ. ತಮ್ಮ ಸಿನಿಮಾ ಕುರಿತು ಹೇಳಲೆಂದೇ ಪತ್ರಕರ್ತರ ಮುಂದೆ ತಂಡದ ಜೊತೆ ಬಂದಿದ್ದರು ನಿರ್ದೇಶಕ ನರೇಂದ್ರ ಬಾಬು. “ನಾನು ಮೊದಲು ಈ ಕಥೆ ಕೇಳಿದಾಗ, ತುಂಬಾ ರಿಸ್ಕ್ ಎನಿಸಿತು. ಆದರೆ, ಆ ಪಾತ್ರಕ್ಕೆ ಯಾರು ಅಂತ ಕೇಳಿದಾಗ, ನಿರ್ಮಾಪಕರು ಸಾಹಿತಿ ಎಚ್.ಎಸ್.ವೆಂಕಟೇಶಮೂರ್ತಿ ಅಂದರು. ಆಗ ಇನ್ನೊಂದು ಚಾಲೆಂಜ್ ನನ್ನ ಕಣ್ಣ ಮುಂದೆ ಬಂತು. ಸರಿ, ಏನಾದರೂ ಆಗಲಿ, ಅವರನ್ನು ಒಪ್ಪಿಸಿ ಮಾಡೋಣ ಅಂತ ನಿರ್ಧರಿಸಿದೆ. ಕಥೆ ಹೇಳಿದೆ, ಅವರ ಹಲವು ಪ್ರಶ್ನೆಗಳಿಗೆ ಉತ್ತರ ಕೊಟ್ಟೆ. ಅವರೂ ಒಪ್ಪಿ ನಟಿಸಿದರು. ವಯಸ್ಸಾದ ಪಾತ್ರವದು. ಹೇಳಿದ್ದನ್ನು ಅಷ್ಟೇ ನೀಟ್ ಆಗಿ ಮಾಡಿದ್ದಾರೆ. ರಾತ್ರಿ-ಹಗಲು ನಮ್ಮೊಂದಿಗೆ ಕೆಲಸ ಮಾಡಿ, ಒಳ್ಳೆಯ ಸಿನಿಮಾ ಆಗೋಕೆ ಕಾರಣ ಆಗಿದ್ದಾರೆ. ಇದೊಂದು ವೃದ್ಧ ವ್ಯಕ್ತಿಯ ಸುತ್ತ ನಡೆಯುವ ಕಥೆ. ಸೊಸೆ, ಮಾವ ಮತ್ತು ಮಗ ಇವರ ಜೊತೆ ಸಾಗುವ ಕಥೆಯಲ್ಲಿ ಮನಕಲಕುವ ದೃಶ್ಯಗಳಿವೆ. ಎಲ್ಲಾ ವರ್ಗಕ್ಕೂ ಇಷ್ಟವಾಗುವಂತಹ ಕಥೆ ಇಲ್ಲಿದೆ. ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಇಷ್ಟರಲ್ಲೆ ಬಿಡುಗಡೆ ಆಗಲಿದೆ’ ಎಂದರು ನರೇಂದ್ರ ಬಾಬು.
ಎಚ್.ಎಸ್.ವೆಂಕಟೇಶಮೂರ್ತಿ ಮಾತನಾಡಿ, “ಹಿಂದೆ “ಹಸಿರು ರಿಬ್ಬನ್’ ಚಿತ್ರ ನಿರ್ದೇಶನ ಮಾಡಿದೆ. ಈಗ ಮೊದಲ ಸಲ ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದೇನೆ. ಜೊತೆಗೆ ಗೀತೆ ಬರೆದಿದ್ದೇನೆ. ಇದೊಂಥರಾ ಸಾಹಸ. ನನ್ನ 76 ನೇ ವಯಸ್ಸಲ್ಲಿ ನಟನೆ ಮಾಡಿದ್ದೇನೆ. ನಟಿಸೋಕೆ ಕಾರಣ, ನಿರ್ಮಾಪಕ ಸಂಪತ್‌ಕುಮಾರ್ ಹಾಗು ನಿರ್ದೇಶಕ ಬಾಬು. ಅಭಿನಯ ಕಷ್ಟದ ಕೆಲಸ. ನನ್ನನ್ನು ಮರೆತು ಇನ್ನೊಬ್ಬರು ಆಗುವಂಥದ್ದು. ಸಾಮಾನ್ಯದಲ್ಲ. ನನ್ನಿಂದ ಅವರು ಅಭಿನಯ ತೆಗೆಸಿದ್ದಾರೆ. ನನ್ನ ಜೊತೆ ಸುಪ್ರಿಯಾ, ವತ್ಸಲಾ, ವೈದ್ಯ, ಬೇಬಿ ಋತ್ವಿ ಚೆನ್ನಾಗಿ ಅಭಿನಯಿಸಿದ್ದಾರೆ. ಉಪಾಸನ ಮೋಹನ್ ಸಂಗೀತದ ಹಾಡುಗಳು ಚೆನ್ನಾಗಿವೆ. ಎಲ್ಲರೂ ಪ್ರೀತಿ, ಶ್ರದ್ಧೆಯಿಂದ ಚಿತ್ರ ಮಾಡಿದ್ದಾರೆ. ಇದೊಂದು ವೃದ್ಧನ ಪಾತ್ರ. ವೃದ್ಧರ ಅನೇಕ ಸಮಸ್ಯೆಗಳನ್ನು ಇಲ್ಲಿ ಹೇಳಲಾಗಿದೆ. ಮಗ ಯಾರನ್ನೋ ಪ್ರೀತಿಸಿ ಮನೆಗೆ ಕರೆತರುತ್ತಾನೆ. ಆಗ, ನನಗೆ ಗೊತ್ತಿಲ್ಲದೆ ಈ ಕೆಲಸ ಮಾಡಿದ ಎಂಬ ಕಾರಣಕ್ಕೆ ಸಂಘರ್ಷ ಶುರುವಾಗುತ್ತೆ. ಸೊಸೆ, ಮಾವ ಮತ್ತು ಮಗನ ನಡುವೆ ನಡೆಯೋ ಕಥೆಯಲಿ ಸಾಕಷ್ಟು ಏರಿಳಿತಗಳಿವೆ. ಆ ಬಗ್ಗೆ ಹೇಳುವುದಕ್ಕಿಂತ ಚಿತ್ರ ನೋಡಿ. ಇಲ್ಲಿ ಯಾವುದೇ ಫೈಟು, ಡ್ಯಾನ್ಸು, ಮಚ್ಚು-ಲಾಂಗು ಇಲ್ಲ’ ಎಂದರು ಎಚ್.ಎಸ್.ವಿ.
ಲಹರಿ ಸಂಸ್ಥೆ ವೇಲು ಅವರಿಗೆ ಎಚ್‌ಎಸ್‌ವಿ ಅವರು ನಟಿಸಿರುವುದು ಖುಷಿ ಕೊಟ್ಟಿದೆಯಂತೆ. ಸಾಹಿತ್ಯ ಕ್ಷೇತ್ರದಲ್ಲೂ ಹೆಸರು ಮಾಡಿದ್ದಾರೆ. ಭಾವಗೀತೆ ಪ್ರಪಂಚದಲ್ಲೂ ಸೈ ಎನಿಸಿಕೊಂಡಿದ್ದಾರೆ. ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ. ಈಗ ನಟರಾಗಿದ್ದಾರೆ. ಇದು ಅವರಿಗೆ ಯಶಸ್ಸು ಕೊಡಲಿ’ ಎಂದರು ಲಹರಿ ವೇಲು.
ಅಂದು ಕೃಷ್ಣೇಗೌಡ, ನಿರ್ಮಾಪಕರಾದ ಸಂಪತ್‌ಕುಮಾರ್, ಅನಂತಪದ್ಮನಾಭ, ವಿನಯ್‌ಗೌಡ, ಉಪಾಸನ ಮೋಹನ್, ಛಾಯಾಗ್ರಾಹಕ ಗಿರಿಧರ್ ದಿವಾನ್, ವಿತರಕ ಸೋಮಣ್ಣ, ಸಂಕಲನಕಾರ ಗಿರಿ ಮಾತನಾಡಿದರು. ವತ್ಸಲಾ, ಸುಪ್ರಿಯಾ, ಋತ್ವಿ ಇತರರು ಇದ್ದರು.