ಮೈಸೂರು: “2018ರ ವಿಧಾನಸಭೆ ಚುನಾವಣೆಯೇ ನನ್ನ ಕಡೆಯ ಚುನಾವಣೆ. ನನಗೆ ರಾಜಕೀಯವಾಗಿ ಜನ್ಮ ನೀಡಿದ, ಉಪ ಚುನಾವಣೆಯಲ್ಲಿ ಮರುಜನ್ಮ ನೀಡಿದ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ’ ಎಂದು
ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹೂಟಗಳ್ಳಿಯ ಸಂತೆ ಮೈದಾನದಲ್ಲಿಮಂಗಳವಾರ ಏರ್ಪಡಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. “2013ರ ಚುನಾವಣೆಯೇ ಅಂತಿಮ, ಇನ್ನು ಸ್ಪರ್ಧೆ ಮಾಡಲ್ಲ ಎಂದು ಹೇಳಿದ್ದೆ, ಆದರೆ, ಕಾಂಗ್ರೆಸ್ ಹೈಕಮಾಂಡ್ ನನ್ನ ನಾಯಕತ್ವದಲ್ಲೇ ಚುನಾವಣೆಗೆ ಹೋಗಲು ಹೇಳಿರುವುದರಿಂದ ಅನಿವಾರ್ಯವಾಗಿ 2018ರ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಇದೊಂದೇ ಚುನಾವಣೆ, ಇನ್ನು ಯಾರು ಹೇಳಿದರೂ ಚುನಾವಣೆಗೆ ನಿಲ್ಲಲ್ಲ’ ಎಂದರು.
ಗಳಗಳನೆ ಅತ್ತಿದ್ದೆ: ಸಾಮಾನ್ಯವಾಗಿ ನನಗೆ ಅಳು ಬರುವುದಿಲ್ಲ. ನನ್ನ ತಂದೆ-ತಾಯಿ ಸತ್ತಾಗಲೂ ನಾನು ಅತ್ತಿರಲಿಲ್ಲ. ಆದರೆ, ಚಾಮುಂಡೇಶ್ವರಿ ಕ್ಷೇತ್ರ ಬಿಟ್ಟು ಹೋಗುವಾಗ ಕಾರ್ಯಕರ್ತರ ಸಭೆಯಲ್ಲಿ ಗಳಗಳನೆ ಅತ್ತಿದ್ದೆ, ಅಷ್ಟರ ಮಟ್ಟಿಗೆ ಕ್ಷೇತ್ರದ ಜತೆಗೆ ನನಗೆ ಬಾಂಧವ್ಯ ಬೆಳೆದಿತ್ತು ಎಂದರು.
ಡಿ.15ರಿಂದ ರಾಜ್ಯ ಪ್ರವಾಸ: ಮುಂಬರುವ ಚುನಾವಣೆ ದೃಷ್ಟಿಯಿಂದ ಡಿಸೆಂಬರ್ 15ರಿಂದ ಸಂಕ್ರಾಂತಿವರೆಗೆ (ಜ.15) ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದರು. ಈ ಒಂದು ತಿಂಗಳ ಪ್ರವಾಸದ ಅವಧಿಯಲ್ಲಿ ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಿಗೂ ಭೇಟಿ ನೀಡುವುದಾಗಿ ತಿಳಿಸಿದರು.