Advertisement

ಈ ವರ್ಷವೂ ಸಿಗದು ಶಿಕ್ಷಕರಿಗೆ ಹೊಸ ಶಾಲೆ

06:00 AM Nov 30, 2017 | |

ಬೆಂಗಳೂರು:ಅಂತೂ ಇಂತೂ ಶಿಕ್ಷಕರ ವರ್ಗಾವಣೆಗೆ ಕಾಲ ಕೂಡಿಬಂದಿದ್ದು,  ಪ್ರಸಕ್ತ ಸಾಲಿನ ವರ್ಗಾವಣೆ ಅಧಿಸೂಚನೆ ಪ್ರಕಟಗೊಂಡಿದೆ. ಆದರೆ, ವರ್ಗಾವಣಾ ನಿಯಮದಲ್ಲಿ ಶಿಕ್ಷಕರು ಹಾಗೂ ಶಿಕ್ಷಕ ಸಂಘಟನೆಗಳು ನಿರೀಕ್ಷಿಸಿದಷ್ಟು ಬದಲಾವಣೆ ತಂದಿಲ್ಲ.

Advertisement

ವರ್ಗಾವಣೆ ಪ್ರಕ್ರಿಯೆ ವೇಳಾಪಟ್ಟಿ ಇನ್ನಷ್ಟೇ ಬಿಡುಗಡೆಯಾಗಬೇಕಿದ್ದು ಬಹುತೇಕ ಡಿಸೆಂಬರ್‌ ಮೊದಲ ವಾರದಲ್ಲಿ ಅರ್ಜಿ ಸಲ್ಲಿಕೆ ಪ್ರಾರಂಭಗೊಂಡು ಹೊಸ ವರ್ಷದ ಜನವರಿ ಅಂತ್ಯಕ್ಕೆ ಕೌನ್ಸಿಲಿಂಗ್‌ ನಡೆಯುವ ಸಾಧ್ಯತೆಯಿದೆ. ನಿಯಮದ ಪ್ರಕಾರ  ಶೈಕ್ಷಣಿಕ ವರ್ಷದ ಆರಂಭದಲ್ಲೇ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ  ನೀಡಬೇಕು. ಕಳೆದ ನಾಲ್ಕೈದು ವರ್ಷದಿಂದ ವರ್ಗಾವಣೆ ಪ್ರಕ್ರಿಯೆ ವಿಳಂಬವಾಗುತ್ತಲೇ ಬಂದಿದೆ. ಅದರಂತೆ  ಈ ವರ್ಷವೂ ಕೂಡ ಶಾಲಾ ಚಟುವಟಿಕೆ ಪ್ರಾರಂಭಗೊಂಡ ಆರು ತಿಂಗಳ ನಂತರ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ವರ್ಗಾವಣೆ ನಡೆಯಲಿರುವುದರಿಂದ ಸ್ಥಳ ನಿಯೋಜನೆ ಹಾಗೂ ಹೊಸ ಸ್ಥಳಕ್ಕೆ ಸೇರಿಕೊಳ್ಳುವ ಆದೇಶವನ್ನು ಶೈಕ್ಷಣಿಕ ವರ್ಷದ ಕೊನೆಯಲ್ಲಿ ನೀಡುವ ಸಾಧ್ಯತೆಯೂ ಇದೆ. ಒಂದು ವೇಳೆ ಕೌನ್ಸೆಲಿಂಗ್‌ ನಡೆಯುವ ತಕ್ಷಣವೇ ಸ್ಥಳ ನಿಯೋಜನೆ ಆದೇಶ ನೀಡಿದಲ್ಲಿ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನಾನುಕೂಲವಾಗಲಿದೆ.

ಆದರೂ, ವರ್ಗಾವಣೆ ಅಧಿಸೂಚನೆ ಹೊರಬಂತಲ್ಲಾ ಎಂಬುದೇ ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಸಮಾಧಾನ ತರುವ ಸಂಗತಿಯಾಗಿದೆ. ಜತೆಗೆ ತಾಲೂಕಿಗೆ ಮಂಜೂರಾದ ಒಟ್ಟು ಹುದ್ದೆಯಲ್ಲಿ ಶೇ.20 ರಷ್ಟು ಖಾಲಿ ಇದ್ದರೂ ವರ್ಗಾವಣೆ ಮಾಡಬಹುದು ಎಂಬ ಅಂಶವೂ ಸೇರಿಸಿರುವುದು ಶಿಕ್ಷಕ ಸಮುದಾಯಕ್ಕೆ ಸಂತಸ ತಂದಿದೆ.

ಸೇವಾ ಜೇಷ್ಠತೆಯ ಆಧಾರದಲ್ಲಿ ಘಟಕದಿಂದ ಘಟಕಕ್ಕೆ ವರ್ಗಾವಣೆ ಪಡೆಯುವಾಗ ತಾಲೂಕಿಗೆ ಮಂಜೂರಾದ ನಿರ್ದಿಷ್ಟ ವಿಭಾಗದ ಶಿಕ್ಷಕರ ಹುದ್ದೆಯಲ್ಲಿ ಶೇ.15ರಷ್ಟು ಖಾಲಿ ಇದ್ದಲ್ಲಿ ಅಂತಹ ತಾಲೂಕಿನ ಶಿಕ್ಷಕರಿಗೆ ವರ್ಗಾವಣೆ ಇಲ್ಲ ಎಂಬುದನ್ನು ಕರಡು ನೀತಿಯಲ್ಲಿ ಉಲ್ಲೇಖೀಸಲಾಗಿತ್ತು. ಅಂತಿಮ ನೀತಿಯಲ್ಲಿ ಖಾಲಿ ಹುದ್ದೆ ಪ್ರಮಾಣವನ್ನು ಶೇ.15 ರಿಂದ ಶೇ.20ಕ್ಕೆ ಏರಿಸಲಾಗಿದೆ.

Advertisement

10 ವರ್ಷದಿಂದ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ (ನಿವೃತ್ತಿ ಅಂಚಿನ ಶಿಕ್ಷಕರನ್ನು ಹೊರತುಪಡಿಸಿ) ಶಿಕ್ಷಕರನ್ನು ಕಡ್ಡಾಯವಾಗಿ ವರ್ಗಾವಣೆ ಮಾಡಲಾಗುತ್ತದೆ. ಈ ನಿಯಮ ಸಡಿಲ ಮಾಡಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸೇರಿ ವಿವಿಧ ಶಿಕ್ಷಕರು ವೈಯಕ್ತಿಕವಾಗಿ ಸಲ್ಲಿಸಿದ ಆಕ್ಷೇಪಣೆಯನ್ನು ಸರ್ಕಾರ ಮಾನ್ಯ ಮಾಡಿಲ್ಲ.

ಜಿಲ್ಲೆ ಮತ್ತು ತಾಲೂಕುಗಳಲ್ಲಿ ಹೆಚ್ಚುವರಿಯಾಗಿ ಉಳಿದಿರುವ ಶಿಕ್ಷಕರಿಗೆ ಆದ್ಯತೆ ನೀಡಬೇಕು, ದಂಪತಿ ಶಿಕ್ಷಕ ವರ್ಗಾವಣೆಯಲ್ಲಿ ತಾರತಮ್ಯ ಮಾಡಬಾರದು. ಸರ್ಕಾರಿ ದಂಪತಿ ಶಿಕ್ಷಕರಂತೆ ಸರ್ಕಾರಿ-ಖಾಸಗಿ ದಂಪತಿ ಶಿಕ್ಷಕರಿಗೂ ಕನಿಷ್ಠ ಸೇವಾವಧಿ ವಿನಾಯ್ತಿ ನೀಡಬೇಕು ಎಂಬ ಮನವಿ ತಿರಸ್ಕರಿಸಲಾಗಿದೆ. ಒಟ್ಟಾರೆಯಾಗಿ ಶಿಕ್ಷಕರ ವರ್ಗಾವಣೆ ಅಧಿಸೂಚನೆಯಿಂದ ಎಷ್ಟು ಶಿಕ್ಷಕರಿಗೆ ಅನುಕೂಲ ಆಗಲಿದೆ ಎಂಬುದ ವರ್ಗಾವಣೆ ಪ್ರಕ್ರಿಯೆ ಮುಗಿದ ನಂತರವಷ್ಟೇ  ತಿಳಿಯಲಿದೆ.

ಇಲಾಖೆಯಿಂದ ಸಿದ್ಧತೆ
ಪ್ರಸಕ್ತ ಸಾಲಿನ ವರ್ಗಾವಣೆ ಅಧಿಸೂಚನೆ ಅಂತಿಮಗೊಂಡಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ವರ್ಗಾವಣೆ ನಡೆಸಲು ಬೇಕಾದ ಸಿದ್ಧತೆ ಮಾಡಿಕೊಂಡಿದೆ. ವರ್ಗಾವಣೆಯ ವೇಳಾಪಟ್ಟಿಯನ್ನು ಮೂರ್‍ನಾಲ್ಕು ದಿನದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ಇಲಾಖೆಯ ಉನ್ನತ ಮೂಲಗಳು ಸ್ಪಷ್ಟಪಡಿಸಿದೆ.

ಹತ್ತು ಸಾವಿರ ಹುದ್ದೆಯನ್ನು ಪರಿಗಣಿಸಿ
ರಾಜ್ಯದ ಸರ್ಕಾರಿ ಶಾಲೆಯ 6ರಿಂದ 8ನೇ ತರಗತಿಗೆ 10 ಸಾವಿರ ಪದವೀಧರ ಶಿಕ್ಷಕರ ನೇಮಕಾತಿ ನಡೆಯುತ್ತಿದೆ. ಈ ಹತ್ತು ಸಾವಿರ ಹುದ್ದೆಯನ್ನು ವರ್ಗಾವಣೆ ಸಂದರ್ಭದಲ್ಲಿ ಖಾಲಿ ಇರುವ ಹುದ್ದೆಗೆ ಪರಿಗಣಿಸಬೇಕು. ಇದರಿಂದ ಅನೇಕ ಜಿಲ್ಲೆಗಳಲ್ಲಿ ಬಹುತೇಕ ಶಿಕ್ಷಕರು ವರ್ಗಾವಣೆ ಪಡೆಯಲು ಅನುಕೂಲವಾಗಲಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಧಿಸೂಚನೆ ಹೊರಡಿಸುವಾಗ ಇದನ್ನು ಸೇರಿಸಿಕೊಳ್ಳಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next