Advertisement

ಸರ್ಕಾರ ಹೆಚ್ಚು ದಿನ ಬಾಳುವುದಿಲ್ಲ, ಯಾವುದೇ ಸಂದರ್ಭದಲ್ಲಿ ಪತನವಾಗಬಹುದು: ಸಿದ್ದರಾಮಯ್ಯ

03:51 PM Aug 14, 2021 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಹೆಚ್ಚು ದಿನ ಬಾಳುವುದಿಲ್ಲ. ಸರ್ಕಾರದಲ್ಲಿ ಗೊಂದಲ ಮುಂದುವರಿದಿದೆ. ಈ ಸರ್ಕಾರ ಅವಧಿ ಪೂರ್ಣಗೊಳಿಸುವುದು ಅನುಮಾನ. ಯಾವುದೇ ಸಂದರ್ಭದಲ್ಲಿ ಪತನಗೊಳ್ಳುವ ಸಾಧ್ಯತೆ ಇದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಸವನಗೌಡ ಪಾಟೀಲ್ ಯತ್ನಾಳ, ಅರವಿಂದ ಬೆಲ್ಲದ್, ರಾಮದಾಸ ಮತ್ತಿತರ ಶಾಸಕರು ದೆಹಲಿಗೆ ಹೋಗಿ ಬಂದು ಮಾಡುತ್ತಿದ್ದಾರೆ. ಹೀಗಾಗಿ ಈ ಸರ್ಕಾರ ಬಹಳ ದಿನ ಬಾಳುವುದಿಲ್ಲ ಎಂದರು.

ಕೋವಿಡ್ ಮೂರನೇ ಅಲೆ ಆರಂಭವಾಗುತ್ತಿದೆ. ಕೊಡಗು, ದಕ್ಷಿಣ ಕನ್ನಡ, ಮೈಸೂರು ಸೇರಿದಂತೆ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕು. ಮೂರನೇ ಅಲೆಯಿಂದ ಜನ ತೊಂದರೆಗೆ ಒಳಗಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ವಾರಾಂತ್ಯದ ಲಾಕ್‌ ಡೌನ್ ಘೋಷಣೆ ಮಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಸೋಂಕು ಹರಡದಂತೆ ಮುಂಜಾಗ್ರತೆ ವಹಿಸುವುದು ಉತ್ತಮ ಎಂದು ಅವರು ಹೇಳಿದರು.

ಶಾಲಾರಂಭ ಬೇಡ: ಕೊರೊನಾ ಮೂರನೇ ಅಲೆ ನಿಯಂತ್ರಣಕ್ಕೆ ಬರದಿದ್ದರೆ ಶಾಲೆ, ಕಾಲೇಜುಗಳನ್ನು ಆರಂಭಿಸುವುದು ಸೂಕ್ತವಲ್ಲ. ಇದರಿಂದ ಮಕ್ಕಳನ್ನು ನಾವೇ ತೊಂದರೆಗೆ ದೂಡಿದಂತೆ ಆಗುತ್ತದೆ. ಜನಜಂಗುಳಿ ಹೆಚ್ಚಾಗಿರುವ ಕಾರ್ಯಕ್ರಮಗಳಿಗೆ ಸರ್ಕಾರ ಅನುಮತಿ ನೀಡಬಾರದು. ಈ ಒಂದು ವರ್ಷ ಹಬ್ಬ ಹರಿದಿನ, ಜಾತ್ರೆಗಳನ್ನು ಮಾಡದಿರುವುದು ಉತ್ತಮ. ಮುಂದಿನ ತಿಂಗಳು ಗಣೇಶನ ಹಬ್ಬ. ಸಾಧ್ಯವಾದಷ್ಟು ಮನೆಗಳಲ್ಲಿಯೇ ಮೂರ್ತಿ ಕೂರಿಸಿ ಪೂಜಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಎಂಟಿಬಿ ಭೇಟಿಯಲ್ಲಿ ವಿಶೇಷವಿಲ್ಲ: ನಾನು ಮತ್ತು ಸಚಿವ ಎಂಟಿಬಿ ನಾಗರಾಜ್ ನಿನ್ನೆ ಹೊಸಕೋಟೆಯಲ್ಲಿ ಭೇಟಿಯಾಗಿದ್ದುದು ನಿಜ. ಆದರೆ ಯಾವುದೇ ರಾಜಕೀಯ ವಿಚಾರ ಚರ್ಚೆ ಮಾಡಲಿಲ್ಲ. ಬಿಜೆಪಿಯವರ ಜೊತೆ ರಾಜಕೀಯ ಮಾತನಾಡುವುದೂ ಇಲ್ಲ. ಬಿಜೆಪಿಯವರು ಅಧಿಕಾರದಿಂದ ತೊಲಗಲಿ ಎಂದು ಹೇಳುವವನು ನಾನು ಎಂದರು.

Advertisement

ಇದನ್ನೂ ಓದಿ:‘ಇನ್ನಾದರೂ ಸುಳ್ಳು ಹೇಳುವುದನ್ನು ನಿಲ್ಲಿಸಿ’: ಶಾಸಕ ಶ್ರೀನಿವಾಸ್- ಸಂಸದ ಬಸವರಾಜ್ ಮಾತಿನ ಸಮರ

ಕನಕ ಸಮೃದ್ಧಿ ಸಹಕಾರ ಬ್ಯಾಂಕ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಹೊಸಕೋಟೆಗೆ ಹೋಗಿದ್ದೆ. ಕಾರ್ಯಕ್ರಮಕ್ಕೆ ಮುನ್ನ ಕಾಂಗ್ರೆಸ್ ಮುಖಂಡರ ಮನೆಯಲ್ಲಿ ಊಟ ಇತ್ತು. ನಾಗರಾಜ್ ಸಹ ಅಲ್ಲಿಗೆ ಬಂದಿದ್ದರು ಅಷ್ಟೆ. ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯಿಲಿ, ಶಾಸಕರಾದ ಬೈರತಿ ಸುರೇಶ್, ಶರತ್ ಬಚ್ಚೇಗೌಡ ಸಹ ಇದ್ದರು ಎಂದು ಹೇಳಿದರು.

ಈಶ್ವರಪ್ಪ ಆಸಕ್ತಿ ವಹಿಸಲಿ: ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಗಣತಿ ವರದಿ ನಾನು ಮುಖ್ಯಮಂತ್ರಿಯಾಗಿದ್ದಾಗ ಸಿದ್ಧವಾಗಿರಲಿಲ್ಲ. ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗಿದ್ದಾಗ ವರದಿ ಸಿದ್ಧವಾಗಿತ್ತು. ಅಂದಿನ ಸಚಿವ ಪುಟ್ಟರಂಗ ಶೆಟ್ಟಿಯವರು ವರದಿ ಮಂಡನೆಗೆ ಮುಂದಾದಾಗ ಅವಕಾಶ ಕೊಡಲಿಲ್ಲ. ಈಗ ಈಶ್ವರಪ್ಪ ಅವರು ಸಚಿವರಾಗಿದ್ದಾರೆ. ಅವರು ವರದಿ ಸ್ವೀಕಾರವಾಗುವಂತೆ ಮಾಡಲಿ. ರಾಯಣ್ಣ ಬ್ರಿಗೇಡ್, ಕುರುಬರ ಎಸ್ ಟಿ ಹೋರಾಟದ ಜೊತೆಗೆ ಈ ಕೆಲಸಕ್ಕೂ ಅವರು ಮುಂದಾಗಲಿ. ವರದಿ ಮಂಡನೆಗೆ ನಿರಾಕರಿಸಿದಾಗ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಿತ್ತು ಎಂದು ಈಶ್ವರಪ್ಪ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ನಾನು ಮಂತ್ರಿ ಆಗಿರಲಿಲ್ಲ. ಸಮನ್ವಯ ಸಮಿತಿ ಅಧ್ಯಕ್ಷ ಆಗಿದ್ದೆ. ರಾಜಿನಾಮೆ ಪರಿಹಾರ ಎಂದಾಗಿದ್ದರೆ ಕೊಡುತ್ತಿದ್ದೆ ಎಂದು ಸಿದ್ದರಾಮಯ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next