ಬೆಂಗಳೂರು: ಕಳೆದ ಬಾರಿ ಬೆಳಗಾವಿಯಿಂದ ಸರ್ಕಾರವೇ ಬಿದ್ದು ಹೋಗಿತ್ತು. ಮತ್ತೆ ಬೆಳಗಾವಿಯ ಬೆಂಕಿಯು ಜ್ವಾಲೆಯಾಗಿ ಈಗ ದುಬೈವರೆಗೂ ಹೋಗಿದೆ. ಲೋಕಸಭೆ ಚುನಾವಣೆ ನಂತರ ಈ ಸರ್ಕಾರ ಇರುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಮತ್ತೊಮ್ಮೆ ಭವಿಷ್ಯ ನುಡಿದರು.
ಸೋಮವಾರ ಆದಿಚುಂಚನಗಿರಿ ಶಾಖಾ ಮಠದಲ್ಲಿ ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್ ಹಾಗೂ ಹೈಕಮಾಂಡ್ ಹೇಳಿದರೂ ಕಾಂಗ್ರೆಸ್ ಶಾಸಕರು ದುಬೈ ಪ್ರವಾಸ ಕೈಗೊಂಡಿದ್ದಾರೆ.
ಲೋಕಸಭೆ ಚುನಾವಣೆ ನಂತರ ಸರ್ಕಾರ ಇರುವುದಿಲ್ಲ ಎಂದು ಬಿಜೆಪಿಯವರು ಹೇಳಿದಾಗಲೆಲ್ಲಾ ಕಾಂಗ್ರೆಸಿಗರು ನಮ್ಮನ್ನು ಛೇಡಿಸುತ್ತಿದ್ದರು. ಈಗ ಬೆಳಗಾವಿಯ ಬೆಂಕಿ ಜ್ವಾಲೆಯಾಗಿ ದುಬೈವರೆಗೂ ಹೋಗಿದೆ ಎಂದರು.
ನಾಳೆಯಿಂದಲೇ ಬರ ಅಧ್ಯಯನ: ಬರ ಅಧ್ಯಯನ ನಡೆಸಲು ಶಾಸಕರಿಗೆ ತಿಳಿಸಿದ್ದು, ನಾನೂ ಕಲಬುರಗಿಯಿಂದ ಬರ ಪ್ರವಾಸ ಕೈಗೊಳ್ಳುತ್ತಿದ್ದೇನೆ. ಎಲ್ಲರೂ ತಂಡವಾಗಿ ಕೆಲಸ ಮಾಡುತ್ತೇವೆ. ಈ ಸರ್ಕಾರ ನಿದ್ದೆ ಮಾಡುತ್ತಿದೆ. ವಿರೋಧ ಪಕ್ಷವಾಗಿ ಅದನ್ನು ಎಚ್ಚರಿಸಬೇಕಿದೆ. ಕಿವಿ ಹಿಂಡಿದರೂ ಎಚ್ಚರಗೊಳ್ಳದಿದ್ದರೆ, ಬೇರೆ ಮದ್ದು ಹುಡುಕುತ್ತೇವೆ. ವಿಧಾನಸಭೆ ಅಧಿವೇಶನದಲ್ಲಿ 66 ಶಾಸಕರೂ ಒಗ್ಗಟ್ಟಾಗಿ ಹೋರಾಡುತ್ತೇವೆ ಎಂದರು.
ಬಿಜೆಪಿ ಮುಖಂಡರಾದ ರಾಜೂಗೌಡ, ಎಸ್.ಮುನಿರಾಜು, ಅಶ್ವತ್ಥನಾರಾಯಣ, ಲಕ್ಷ್ಮೀನಾರಾಯಣ, ಕೆ.ಗೋಪಾಲಯ್ಯ ಸೇರಿದಂತೆ ಇನ್ನಿತರರು ಇದ್ದರು. ಬಳಿಕ ಸ್ವಾಮೀಜಿ ಅವರೊಂದಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿದರು. ಸಂಜೆ ಮಾಜಿ ಸಿಎಂ ಡಿ.ವಿ. ಸದಾನಂದಗೌಡ, ಮಾಜಿ ಸಚಿವ ರಾಮಚಂದ್ರೇಗೌಡರನ್ನು ಭೇಟಿ ಮಾಡಿ ಉಭಯಕುಶಲೋಪರಿ ವಿಚಾರಿಸಿದರು.
ದತ್ತಮಾಲೆ ಧರಿಸುವುದು ಕಾನೂನುಬಾಹಿರವೇ?
ಬಹಳ ಜನ ಭಾರತ್ ಮಾತಾ ಕೀ ಜೈ ಎನ್ನಲು ಶುರು ಮಾಡಿದ್ದಾರೆ. ಕುಮಾರಸ್ವಾಮಿ ಅವರು ದತ್ತಮಾಲೆ ಧರಿಸುವ ನಿರ್ಧಾರ ಸ್ವಾಗತಾರ್ಹ. ಅದೇನು ಕಾನೂನುಬಾಹಿರ ಕೃತ್ಯವೇ? ಅಲ್ಲವಲ್ಲಾ? ಇದು ಭಾರತೀಯ ಪರಂಪರೆ. ನಮ್ಮ ತಂದೆ, ತಾತ ಎಲ್ಲರೂ ಒಂದಲ್ಲಾ ಒಂದು ದೇವರ ಹೆಸರಿನಲ್ಲಿ ಮಾಲೆಗಳನ್ನು ಹಾಕಿರುವುದಿದೆ. ದೇವರ ಮೇಲೆ ಭಕ್ತಿ ತೋರಲು ಭೇದ ಭಾವ ಬೇಡ. ಆಂತಹ ದ್ವೇಷ ಭಾವನೆಯನ್ನು ಕಾಂಗ್ರೆಸ್‌ಗೆ ಬಿಟ್ಟಿದ್ದೇವೆ. ಹಿಂದುಗಳನ್ನು ದ್ವೇಷಿಸುವುದು, ಬಿಜೆಪಿ ಶಾಸಕರು ಮುಸ್ಲಿಮರಿಗೆ ನಮಸ್ಕಾರ ಹಾಕಿಕೊಂಡು ನಿಂತಿರಬೇಕು ಎನ್ನುವ ದುರಂಹಕಾರದ ಹೇಳಿಕೆಗೆ ನಮ್ಮಲ್ಲಿ ಅವಕಾಶ ಇಲ್ಲ. ಎಲ್ಲಕ್ಕೂ ಅಧಿವೇಶನದಲ್ಲಿ ಸರ್ಕಾರ ಉತ್ತರಿಸಲಿ ಎಂದು ಆರ್.ಅಶೋಕ ಸವಾಲು ಹಾಕಿದರು.