Advertisement
ನೀನಿಲ್ಲದಿರುವಾಗ ನಲ್ಲಾ ಒಬ್ಬಂಟಿ ನಾನು ಮನೆಯಲ್ಲಿ, ಮೂಡುವುದು ಚಿತ್ರ ಮನದಲ್ಲಿ… ಮಧುರ ದನಿಯಲ್ಲಿ ಹಾಡು ಕೇಳಿ ಬರುತ್ತಿತ್ತು. ಅವಳಿಗನ್ನಿಸಿತು: ವಿರಹವೂ ಎಷ್ಟು ಚೆಂದ ಅಲ್ವಾ ಅಂತ. ಅವಳ ಇನಿಯನೂ ಅವಳಲ್ಲಿಗೆ ಬಾರದೆ ಸುಮಾರು ಸಮಯವಾಗಿತ್ತು. ಅವಳೂ ಕಾಯುತ್ತಿದ್ದಳು. ವಿರಹ ಅವಳನ್ನೂ ಸುಡುತ್ತಲಿತ್ತು. “ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ ವಾರದಾಗ ಮೂರು ಸರತಿ ಬಂದು ಹೋಗಾಂವಾ’ ಎಂದು ಮನದಲ್ಲೇ ಗುನುಗಿಕೊಂಡಳು. ಇನಿಯನ, ಅವನೊಡನೆ ಸಲ್ಲಾಪದ ನೆನಪಿನಿಂದ ಅವಳ ಕದಪುಗಳು ರಂಗೇರಿದವು. ಮುಖದಲ್ಲಿ ಕಂಡೂ ಕಾಣದ ಮುಗುಳ್ನಗೆ. ಯಾರಾದರೂ ಕಂಡುಬಿಟ್ಟಾರೆಂದು ಕ್ಷಣದಲ್ಲೇ ಗಂಭೀರ ಮುಖದವಳಾದಳು.
Related Articles
Advertisement
ಕಿಟಕಿಯಿಂದ ತೂರಿಬಂದ ಗಾಳಿ ಪಾರಿಜಾತದ ಘಮವನ್ನು ಹೊತ್ತು ತಂದಿತ್ತು. ಮಲ್ಲೆ ಜಾಜಿಗಳು ನಾವೇನು ಕಡಿಮೆ ಎನ್ನುತ್ತಾ ಪೈಪೋಟಿಯಿಂದ ತಮ್ಮ ನವಿರು ಕಂಪನ್ನು ಚೆಲ್ಲಾಡಿದ್ದವು. ಪಾರಿಜಾತ ಮರದ ಕೆಳಗಿದ್ದ ಕಲ್ಲು ಹಾಸಿನ ಮೇಲೆ ಬಂದು ಕುಳಿತಳು. ಅಲ್ಲಿ ಕುಳಿತು ಇಬ್ಬರೂ ಸಲ್ಲಾಪಿಸುತ್ತಿದ್ದ ದಿನಗಳು ನೆನಪಾಯಿತು. ಅವಳ ಕೈಬೆರಳಿನೊಂದಿಗೆ ತನ್ನ ಬೆರಳುಗಳನ್ನು ಹೊಸೆದು ಅವಳ ದನಿಗೆ ತನ್ನ ದನಿ ಕೂಡಿಸುತ್ತಿದ್ದ ಅವನನ್ನು ನೆನೆದು ಮುದಗೊಂಡಳು. ತುಟಿಗಳಲ್ಲಿ ನವಿರು ಲಾಸ್ಯ ತೊನೆದಾಡಿತ್ತು. ಕಂಠ ಅದಾವುದೋ ರಾಗ ಗುನುಗುನುಗಿಸಿತ್ತು.
“ನೀನೊಂದು ದಡದಲ್ಲಿ ನಾನೊಂದು ದಡದಲ್ಲಿ ನಡುವೆ ಮೈಚಾಚಿರುವ ವಿರಹಗಡಲು ಯಾವ ದೋಣಿಯು ತೇಲಿ ಎಂದು ಬರುವುದೋ ಕಾಣೆ ನೀನಿರುವ ಎದೆಯಲ್ಲಿ ನನ್ನ ಬಿಡಲು’ ಮನ ಪ್ರಿಯತಮನಿಗಾಗಿ ಕಾದು ತಪ್ತವಾಗಿತ್ತು. ಮನೆಯೊಳಗೆ ಬಂದು ದೀಪ ಹಚ್ಚಿ ದೇವರ ಮುಂದಿಟ್ಟಾಗ ಮುರಳೀಧರ, ರಾಧಾಲೋಲ ಕೃಷ್ಣ ನಗುತ್ತಿದ್ದ. ಈ ದಿನವೂ ನಿನ್ನ ಹುಡುಗ ಬರಲಿಲ್ಲವೇನೇ ಹುಡುಗಿ ಎಂದು ಕೇಳುವಂತಿತ್ತು ಅವನ ನೋಟ. “ತುಂಟ, ನೀನು ನಿನ್ನ ರಾಧೆಯನ್ನು ಬಗಲಿಗೇ ಇಟ್ಟುಕೊಂಡು ನನ್ನ ಗೋಳಾಡಿಸುವೆಯಾ’ ಎಂದಿತ್ತು ಅವಳ ಮನಸ್ಸು. “ನೀನಿಲ್ಲದೆ ನನಗೇನಿದೆ? ಮನಸೆಲ್ಲ ನಿನ್ನಲ್ಲೇ ನೆಲೆಯಾಗಿದೆ, ಕನಸೆಲ್ಲ ಕಣ್ಣಲ್ಲೆ ಸೆರೆಯಾಗಿದೆ…’ ಮನ ಚಡಪಡಿಸಿತು. ಸಂಜೆ ಬಿಡಿಸಿದ್ದ ಮಲ್ಲಿಗೆಯ ಮೊಗ್ಗುಗಳು ಅವಳ ಕೈಯಲ್ಲಿ ಸುಂದರ ಮಾಲೆಯಾಗಿತ್ತು. ರಾಧಾಲೋಲನಿಗೆ ಮಾಲೆ ಹಾಕಿ ಉಳಿದದ್ದು ತಾನು ಮುಡಿದಳು. ಆ ಮುರಳೀ ಮನೋಹರನ ಕಂಗಳಲ್ಲಿ ಹೊಳಪು. ಅವನ ಮಾಲೆಯಲ್ಲಿ ಪಾಲು ಗಿಟ್ಟಿಸಿಕೊಂಡ ರಾಧೆಯ ಕೆನ್ನೆಗಳು ಕೆಂಪೇರಿದ್ದವು. ರಾಧೆಯ ಲಜ್ಜಾಪೂರ್ಣ ನೋಟವನ್ನು ಹಿಡಿದಿಟ್ಟುಕೊಂಡ ಮಾರಜನಕನ ಒಲವು ತುಂಬಿದ ದೃಷ್ಟಿಯನ್ನು ನೋಡುತ್ತ ಇವಳು ಪರವಶಳಾದಳು. ಈ ವಿಶ್ವಮಾನ್ಯ ಪ್ರೇಮದೇವತೆಗಳನ್ನು ನೋಡುತ್ತ ತನ್ನಿನಿಯ ಬಾರದಿರುವ ಸಂಕಟವನ್ನೂ ಆ ಕ್ಷಣ ಮರೆತಳು. ಗೋಡೆಯ ಗಡಿಯಾರ ಹತ್ತು ಬಾರಿಸಿದಾಗ ಈ ದಿನವೂ ಕಳೆದೇ ಹೋಯಿತಲ್ಲ ಎನಿಸಿತು. ಇಂದು ಕಳೆಯಿತು, ನಾಳೆ ಬಂದಾನು ಎಂಬ ನಿರೀಕ್ಷೆಯಲ್ಲಿ ಕನಸು ತುಂಬಿದ್ದ ಕಣ್ಣುಗಳು ಬಳಲಿ ರೆಪ್ಪೆಗಳು ಭಾರವಾದವು. “ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ ನಿನ್ನ ಜೊತೆಯಿಲ್ಲದೆ, ಮಾತಿಲ್ಲದೆ ಮನ ವಿಭಾÅಂತ…’ ಅವನು ಬಂದಾಗ ಇಬ್ಬರೂ ಕೂಡಿ ಕಳೆದ ಕಾಲಕ್ಕಿಂತ ಬಂದಾನೆಂಬ ನಿರೀಕ್ಷೆ ಈ ವಿರಹ- ಕಾಯುವಿಕೆಯಲ್ಲೂ ಒಂದು ಸೊಗಸಿದೆ ಅಂತನ್ನಿಸಿತು. – ವೀಣಾ ರಾವ್