ನಮ್ಮ ಜೀವನದಲ್ಲಿ ಆತ್ಮೀಯರನ್ನು ಕಳೆದುಕೊಂಡ ಸಂದರ್ಭದಲ್ಲಿನ ನೋವು ಬೇರೆ ಯಾವ ಸಂದರ್ಭದಲ್ಲಿ ಅಷ್ಟಾಗಿ ಆಗದು. ಇವತ್ತು ನಮ್ಮ ಜೊತೆಗಿದ್ದವರು ನಾಳೆ ನಮ್ಮ ನೆನಪಿನಲ್ಲಿ ಮಾತ್ರ ನಮ್ಮನ್ನು ಕಾಡುತ್ತಾರೆ ಎನ್ನುವುದನ್ನು ಅನುಭವಿಸುವಾಗ ಆಗುವ ದುಃಖವಿದೆ ಅಲ್ವಾ ಅದನ್ನು ಅಕ್ಷರ ರೂಪದಲ್ಲಿ ಇಳಿಸಿ ಅರ್ಥೈಸಲು ಸಾಧ್ಯವಾಗದು.
ಈ ಮೇಲಿನ ಮಾತು ಹೇಳಲು ಕಾರಣ 22 ವರ್ಷದ ಖುಷಿ ಪಾಂಡೆ ಎನ್ನುವ ಯುವತಿ. ಉತ್ತರ ಪ್ರದೇಶದ ಲಕ್ನೋ ಮೂಲದ ಖುಷಿ ಪಾಂಡೆ ಸದ್ಯ ಎಲ್ ಎಲ್ ಬಿ ಓದುತ್ತಿದ್ದಾರೆ. ಈ ಸಣ್ಣ ವಯಸಿನಲ್ಲೇ ಅವರು ಜನ ಮೆಚ್ಚುವ ಸಮಾಜ ಸೇವೆಯನ್ನು ಅಳಿಲು ಸೇವೆಯನ್ನಾಗಿ ಮಾಡುತ್ತಿದ್ದಾರೆ. ಭಾರತದಲ್ಲಿ ನಿತ್ಯ ಸಾವಿರಾರು ರಸ್ತೆ ಅಪಘಾತಗಳು ಸಂಭವಿಸುತ್ತವೆ. ನೂರಾರು ಜನರು ತಮ್ಮ ಆತ್ಮೀಯರನ್ನು, ಸ್ನೇಹಿತರನ್ನು ಕಳೆದುಕೊಳ್ಳುತ್ತಾರೆ. ಇಂಥದ್ದೇ ಅಪಘಾತ ಒಂದರಲ್ಲಿ ಖುಷಿ ತನ್ನ ಆಪ್ತ ಜೀವವಾಗಿದ್ದ ತನ್ನ ಬಾಲ್ಯದಲ್ಲಿ ಮುದ್ದು ಮಾಡಿದ್ದ ಅಜ್ಜ ( ತಾಯಿಯ ತಂದೆ) ನನ್ನು ಕಳೆದುಕೊಳ್ಳುತ್ತಾರೆ.
ಅದು ಡಿಸೆಂಬರ್ 2022 ರ ಡಿಸೆಂಬರ್ 25 ರ ಮಂಜಿನ ಸಂಜೆಯ ಸಮಯ. ಊರೆಲ್ಲ ಕ್ರಿಸ್ ಮಸ್ ಹಬ್ಬದ ಸಂಭ್ರಮದಲ್ಲಿತ್ತು. ಅಜ್ಜ ಇನ್ನೇನು ಮನೆಗೆ ಬರುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದ ಖುಷಿಗೆ ಅದೊಂದು ಆಘಾತಕಾರಿ ಸುದ್ದಿ ಬರುತ್ತದೆ. ಸೈಕಲ್ ನಲ್ಲಿ ಬರುತ್ತಿದ್ದ ಖುಷಿಯ ಅಜ್ಜನಿಗೆ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಹಿರಿಯ ಅಲ್ಲೇ ಕೊನೆಯುಸಿರೆಳೆದ್ದಾರೆ.
ಅಜ್ಜನ ನಿಧನ ಸುದ್ದಿ ಖುಷಿಗೆ ಮುಂದೆ ಯಾರಿಗೂ ಈ ರೀತಿ ಆಗಬಾರದೆನ್ನುವ ಬದಲಾವಣೆಯ ಯೋಚನೆಯನ್ನು ತರುತ್ತದೆ. ಇದೇ ಕಾರಣದಿಂದ ಖುಷಿ ಸಮಾಜ ಸೇವೆಯನ್ನು ಮಾಡಲು ಮುಂದಾಗುತ್ತಾರೆ.
ಬೈಕ್, ಕಾರುಗಳ ಹಾಗೆ ಸೈಕಲ್ ಸವಾರರು ರಸ್ತೆಯಲ್ಲಿ ಹೋಗುತ್ತಿರುತ್ತಾರೆ. ವೇಗವಾಗಿ ಬಂದು ಸೈಕಲ್ ಸವಾರರಿಗೆ ಢಿಕ್ಕಿಯಾದರೆ ಅಪಘಾತದಲ್ಲಿ ಸವಾರರು ಮೃತಪಡುತ್ತಾರೆ. ಹೀಗಾಗಿ ವಾಹನದಲ್ಲಿ ಇಂಡಿಕೇಟರ್ ಆಗಿ ಅಳವಡಿಸುವ ಕೆಂಪು ಲೈಟನ್ನು ಸೈಕಲ್ ಗಳಿಗೆ ಅಳವಡಿಸಲು ನಿರ್ಧರಿಸಿ ಆರಂಭಿಕವಾಗಿ ಜನವರಿ 13, 2022 ರಂದು ಮೊದಲ ಬಾರಿ ಉಚಿತವಾಗಿ ಸೈಕಲಿನ ಹಿಂಬದಿಗೆ ಲೈಟ್ ಗೆ ಅಳವಡಿಸುತ್ತಾರೆ.
ಈ ಕಾರ್ಯ ನಿಧಾನ ಲಕ್ನೋದಲ್ಲಿ ಗಮನ ಸೆಳೆಯುತ್ತದೆ. ಮಂಜು ಕವಿದ ರಸ್ತೆಯಲ್ಲಿ ಹೋಗುವ ಸೈಕಲ್ ಸವಾರರನ್ನು ನೋಡಿ ಅವರ ಸೈಕಲ್ ಗೆ ರೆಡ್ ಲೈಟ್ ಹಾಕುತ್ತಾರೆ. ನಿಧಾನವಾಗಿ ಹೋಗಿ ಎನ್ನುವ ಹಿತನುಡಿಯನ್ನು ಹೇಳಿ ಮತ್ತೊಂದು ಸೈಕಲ್ ಸವಾರರ ಬಳಿ ಹೋಗುತ್ತಾರೆ.
ಇದುವರೆಗೆ ಖುಷಿ 500 ಕ್ಕೂ ಹೆಚ್ಚಿನ ಸೈಕಲ್ ಗಳಿಗೆ ರೆಡ್ ಲೈಟ್ ಗಳನ್ನು ಅಳವಡಿಸಿದ್ದಾರೆ. ಅಪಘಾತದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಇದಲ್ಲದೇ ಸರ್ಕಾರಿ ಶಾಲಾ ಮಕ್ಕಳಿಗೆ ಋತುಚಕ್ರದ ನೈರ್ಮಲ್ಯ ಕುರಿತ ಕಾರ್ಯಕ್ರಮ, ಆಸಿಡ್ ದಾಳಿಯಿಂದ ಬದುಕುಳಿದವರಿಗೆ ಕೌಶಲ್ಯ-ಆಧಾರಿತ ಕಾರ್ಯಾಗಾರಗಳನ್ನು ಮಾಡುತ್ತಿದ್ದಾರೆ. ಹಿಂದುಳಿದ ಮಕ್ಕಳಿಗಾಗಿ ಶಾಲೆಯನ್ನು ತೆರೆದಿದ್ದಾರೆ. ಇದುವರೆಗೆ ಲಕ್ನೋದ 11 ಹಳ್ಳಿಗಳಿಗೆ ಅಗತ್ಯ ಪಡಿತರವನ್ನು ವಿತರಿಸಿದ್ದಾರೆ. ಮತ್ತು ನಗರ ಸ್ವಚ್ಛ ಯೋಜನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
–ಸುಹಾನ್ ಶೇಕ್