ತಿರುವನಂತಪುರಂ: “ಪಾಲಿಕೆಯಲ್ಲಿ ಖಾಲಿಯಿರುವ 295 ತಾತ್ಕಾಲಿಕ ಹುದ್ದೆಗಳ ಭರ್ತಿಗೆ ಪಕ್ಷದ ಕಾರ್ಯಕರ್ತರ ಪಟ್ಟಿ ಕೊಡಿ’ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿಗೆ ಮೇಯರ್ ಆರ್ಯ ರಾಜೇಂದ್ರನ್ ಅವರು ಪತ್ರ ಬರೆದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ವಿವಾದ ಮುಂದುವರಿದಿದೆ.
ಮಂಗಳವಾರವೂ ಮೇಯರ್ ವಿರುದ್ಧ ಬಿಜೆಪಿ ಮತ್ತು ಯುಡಿಎಫ್ ಕೌನ್ಸಿಲರ್‌ಗಳು ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ, “ನಕಲಿ ಪತ್ರ’ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ ಎಂದು ಆರೋಪಿಸಿ ಆರ್ಯ ಅವರು ನೀಡಿರುವ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ಕೂಡ ದಾಖಲಿಸಿದ್ದಾರೆ.
ಇದರ ನಡುವೆಯೇ, ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿ ವರದಿ ನೀಡಿರುವ ಕ್ರೈಂ ಬ್ರಾಂಚ್, “ಮೇಯರ್ ಆರ್ಯ ರಾಜೇಂದ್ರನ್ ಅವರ ಹೆಸರನ್ನು ಕೆಡಿಸಬೇಕು, ಅವರ ಘನತೆಗೆ ಧಕ್ಕೆ ತರಬೇಕು, ಪಾಲಿಕೆಗೆ ಅವಹೇಳನ ಮಾಡಬೇಕು ಎಂಬ ದುರುದ್ದೇಶದಿಂದಲೇ ಈ ಪತ್ರವನ್ನು ಸಿದ್ಧಪಡಿಸಲಾಗಿತ್ತು’ ಎಂದು ಹೇಳಿದೆ.