Advertisement

ತಿರುವಳ್ಳುವರ್‌ ಸಾಮಾಜಿಕ ಪರಿವರ್ತನೆಯ ಹರಿಕಾರ: ಸಿಎಂ

11:48 AM Jan 16, 2017 | |

ಬೆಂಗಳೂರು: ತಮಿಳುನಾಡಿನ ಪ್ರಸಿದ್ಧ ಕವಿ ಹಾಗೂ ತತ್ವಜ್ಞಾನಿಯಾದ ತಿರುವಳ್ಳುವರ್‌ ಸಾಮಾಜಿಕ ಪರಿವರ್ತನೆಯ ಹರಿಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕೆಪಿಸಿಸಿ ಕಾರ್ಮಿಕ ವಿಭಾಗದಿಂದ ಭಾನುವಾರ ಹಲಸೂರು ಕೆರೆ ಬಳಿಯ ಚಂಗಮ್‌ ರಸ್ತೆಯಲ್ಲಿ ಆಯೋಜಿಸಿದ್ದ “ವಿಶ್ವಕವಿ ತಿರುವಳ್ಳುವರ್‌ ಜಯಂತಿ ಮತ್ತು ತಮಿಳು ಭಾಷಿಕ ಕನ್ನಡಿಗರ ದಿನಾಚರಣೆ’ಯಲ್ಲಿ ತಿರುವಳ್ಳುವರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.  

Advertisement

ಕರ್ನಾಟಕಕ್ಕೆ ತ್ರಿಪದಿ ಕವಿ ಸರ್ವಜ್ಞರಿದ್ದಂತೆ ತಮಿಳುನಾಡಿಗೆ ತಿರುವಳ್ಳುವರ್‌ ಮಹಾಕವಿ. ಅವರು ಮಾನವೀಯ ಮೌಲ್ಯಗಳ ಪ್ರತೀಕವಾಗಿದ್ದರು. ಸಾಹಿತ್ಯದ ಮೂಲಕ ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದ ಆಧ್ಯಾತ್ಮಿಕ ಕವಿಯೂ ಹೌದು. ತಿರುವಳ್ಳುವರ್‌ ಸಾಹಿತ್ಯದಲ್ಲಿ ಶಾಂತಿ, ಸೌಹಾರ್ದತೆಯ ಸಂದೇಶಗಳನ್ನು ಕಾಣಬಹುದು ಎಂದರು. ವಿಶ್ವಕವಿ ತಿರುವಳ್ಳುವರ್‌ ಸಾವಿರಾರು ವಚನಗಳನ್ನು ರಚನೆ ಮಾಡಿದ್ದಾರೆ.

ವಚನಗಳ ಮೂಲಕ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಭದ್ರವಾಗಿ ನೆಲೆಗೊಳಿಸಲು ಶ್ರಮಿಸಿದ್ದಾರೆ. ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ಬಾಂಧವ್ಯ ವೃದ್ಧಿ ದೃಷ್ಠಿಯಿಂದ ಬೆಂಗಳೂರಿನಲ್ಲಿ ತಿರುವಳ್ಳುವರ್‌ ಪ್ರತಿಮೆ ಸ್ಥಾಪಿಸಿದರು. ಕಾಂಗ್ರೆಸ್‌ ಸರ್ಕಾರ ಕೂಡ ಎರಡೂ ರಾಜ್ಯಗಳ ಸ್ನೇಹ, ಬಾಂಧವ್ಯ ವೃದ್ಧಿಗೆ ಶ್ರಮಿಸುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ತಿರುವಳ್ಳುವರ್‌ ಅವರ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದೆ ಎಂದು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ಶಾಸಕ ಎನ್‌.ಎ.ಹ್ಯಾರಿಸ್‌, ಕೆಪಿಸಿಸಿ ಕಾರ್ಮಿಕ ಘಟಕದ ಅಧ್ಯಕ್ಷ$ಎಸ್‌.ಎಸ್‌.ಪ್ರಕಾಶಂ, ಎಂ.ಟಿ.ಬಿ. ನಾಗರಾಜ್‌ ಸೇರಿದಂತೆ ಪಕ್ಷದ ವಿವಿಧ ಮುಖಂಡರು ಉಪಸ್ಥಿತರಿದ್ದರು.

ತಳ್ಳಾಟ, ಮಾಧ್ಯಮಗಳ ವಿರುದ್ಧ ತ.ನಾಡು ಶಾಸಕಿ ಗರಂ
ತಿರುವಳ್ಳುವರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಸಂದರ್ಭದಲ್ಲಿ ಜನದಟ್ಟಣೆಯಿಂದ ಸ್ವಲ್ಪ ನೂಕಾಟ ಉಂಟಾಯಿತು. ಈ ವೇಳೆ ತಮಿಳುನಾಡಿನ ನಾಗರ್‌ ಕೊಯಿಲ್‌ ವಿಧಾನಸಭಾ ಕ್ಷೇತ್ರದ ಶಾಸಕಿ ವಿಜಯ ಧರಣಿ ಕೂಡ ತಳ್ಳಲ್ಪಟ್ಟರು. ಇದರಿಂದ ಸಿಟ್ಟಾದ ವಿಜಯ ಧರಣಿ ಅವರು ವಿನಾಕಾರಣ ಮಾಧ್ಯಮದರ ಮೇಲೆ ಹರಿಹಾಯ್ದ ಘಟನೆ ನಡೆಯಿತು. ಅಷ್ಟರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶಿಸಿ ಶಾಸಕರನ್ನು ಸಮಾಧಾನ ಪಡಿಸಿದರಲ್ಲದೆ, ಮತ್ತೂಮ್ಮೆ ತಿರುವಳ್ಳುವರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ವಾತಾವರಣ ತಿಳಿಗೊಳಿಸಿದರು. 

Advertisement

ಮತ್ತೂಂದೆಡೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಂದ ಮಾಧ್ಯಮದವರನ್ನು ಸಮಾಧಾನ ಪರಿಸುವ ಪ್ರಯತ್ನ ನಡೆಸಿದರು. ಈ ವೇಳೆ ಸುದ್ದಿಗಾರರು, ಕಾರ್ಯಕ್ರಮಕ್ಕೆ ತಮಿಳುನಾಡಿನಿಂದ ವೀಕ್ಷಕರನ್ನು ಕಳುಹಿಸಲಾಗಿದೆಯೇ ಎಂದು ಪ್ರಶ್ನಿಸಿದಾಗ, ಯಾರೂ ಯಾವ ವೀಕ್ಷಕರನ್ನೂ ಕಳುಹಿಸಿಲ್ಲ. ತಮಿಳುನಾಡಿನ ನಮ್ಮ ಪಕ್ಷದ ಶಾಸಕರು ಕಾರ್ಯಕ್ರಮಕ್ಕೆ ಬಂದಿದ್ದಾರೆ ಅಷ್ಟೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರೂ ಸಂಯಮದಿಂದ ವರ್ತಿಸಬೇಕು ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next