Advertisement

ಇಪ್ಪತ್ತೈದು ದಿನಗಳಲ್ಲಿ ಮೂವತ್ತಾರು ವಾಹನಗಳ ಮುಟ್ಟುಗೋಲು

11:39 PM May 30, 2019 | Sriram |

ಮಹಾನಗರ: ಮೀನು ಸಾಗಿಸುವ ಸಂದರ್ಭದಲ್ಲಿ ರಸ್ತೆಗೆ ತ್ಯಾಜ್ಯ ನೀರು ಬಿದ್ದು ಪರಿಸರ ಮಾಲಿನ್ಯಕ್ಕೆ ಕಾರಣವಾದ ವಾಹನಗಳ ವಿರುದ್ಧ ಕ್ರಮ ಜರಗಿಸುವ ಕಾರ್ಯಾಚರಣೆಯ ಅನ್ವಯ ಪೊಲೀಸರು 25 ದಿನಗಳಲ್ಲಿ 36 ವಾಹನ ಗಳನ್ನು ಮುಟ್ಟುಗೋಲು ಹಾಕಿದ್ದಾರೆ.

Advertisement

ಮೀನು ಸಾಗಿಸುವ ವಾಹನಗಳಿಂದ ಉಂಟಾಗುತ್ತಿರುವ ಸಮಸ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ)ದ ದಕ್ಷಿಣ ವಲಯ ಪೀಠವು 2015 ಜುಲೈ 2ರಂದು ಹೊರಡಿಸಿದ್ದ ಆದೇಶವನ್ನು ಇದೇ ಮೇ 6ರಿಂದ ಮಂಗಳೂರಿಗೂ ಅನ್ವಯವಾಗುವಂತೆ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್ ಆದೇಶ ಹೊರಡಿಸಿದ್ದರು. ಈ ಆದೇಶ ಕಟ್ಟು ನಿಟ್ಟಾಗಿ ಅನುಷ್ಠಾನ ಆಗುವುದನ್ನು ಖಾತರಿ ಪಡಿಸುವಂತೆ ಆಯುಕ್ತರು ನಗರ ಪೊಲೀಸರಿಗೆ ನೋಟಿಸ್‌ ಜಾರಿ ಮಾಡಿದ್ದ ಹಿನ್ನೆಲೆಯಲ್ಲಿ ನಗರದ ಟ್ರಾಫಿಕ್‌ ಪೊಲೀಸರು ವಿಶೇಷ ಕಾರ್ಯಾಚರಣೆಯನ್ನು ಪ್ರತಿನಿತ್ಯ ನಡೆಸುತ್ತಿದ್ದಾರೆ.

ಸಾರ್ವಜನಿಕರಿಂದ ದೂರು
ಮೀನು ಸಾಗಿಸುವ ವಾಹನಗಳಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯದ ಬಗ್ಗೆ ಪ್ರತಿ ಶುಕ್ರವಾರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ನಡೆಯುತ್ತಿರುವ ಫೋನ್‌ ಇನ್‌ ಕಾರ್ಯಕ್ರಮಗಳಲ್ಲಿ ಸಾರ್ವ ಜನಿಕರಿಂದ ನಿರಂತರವಾಗಿ ದೂರುಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಎ. 29ರಂದು ಪೊಲೀಸ್‌ ಆಯುಕ್ತರು ಮೀನು ಸಾಗಿಸುವ ವಾಹನಗಳ ಮಾಲಕರು ಮತ್ತು ಚಾಲಕರು, ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು, ಪೊಲೀಸ್‌ ಅಧಿಕಾರಿಗಳ ಸಭೆಯನ್ನು ನಡೆಸಿದ್ದರು. ಈ ಸಭೆಯಲ್ಲಿ ಸಮಸ್ಯೆಯ ಬಗ್ಗೆ ವಿಸ್ತೃತ ಚರ್ಚೆ ನಡೆದಿತ್ತು. ಈ ವೇಳೆ ಕೇರಳ ಸರಕಾರ ಜಾರಿಗೆ ತಂದಿರುವ ಕಾನೂನಿನ ಬಗ್ಗೆ ಪ್ರಸ್ತಾವ ಬಂದಿದ್ದು, ಬಳಿಕ ಪೊಲೀಸರು ಎನ್‌ಜಿಟಿ ಕೇರಳ ಸರಕಾರಕ್ಕೆ ನೀಡಿದ ಆದೇಶದ ಬಗ್ಗೆ ಅಧ್ಯಯನ ನಡೆಸಿ ಅದನ್ನು ನಗರದಕ್ಕೆ ಅನ್ವಯಿಸಲು ನಿರ್ಣಯಿಸಿದ್ದರು.

ಆದೇಶ ಜಾರಿಯಾದ ಬಳಿಕ ಮೇ 9ರಂದು ಒಂದೇ ದಿನ ಪೊಲೀಸರು ಮೀನು ಸಾಗಿಸುವ 6 ವಾಹನಗಳ ವಿರುದ್ಧ ಕ್ರಮ ಜರಗಿಸಿ ಮುಟ್ಟುಗೋಲು ಹಾಕಿದ್ದರು.

ಬಳಿಕ ಚುನಾವಣೆ ಮತ್ತು ಮತದಾನದ ಫಲಿತಾಂಶ ಸಂಬಂಧಿತ ಬಂದೋಬಸ್ತು ಕಾರ್ಯ ನಿಮಿತ್ತ ತಾತ್ಕಾಲಿಕವಾಗಿ ಕೆಲವು ದಿನ ಕಾರ್ಯಾಚರಣೆ ಸ್ಥಗಿತಗೊಂಡಿದ್ದರೂ ಇದೀಗ ತಪಾಸಣೆಯನ್ನುಬಿಗಿಗೊಳಿಸಿದ್ದಾರೆ.

Advertisement

ಎನ್‌ಜಿಟಿ ಆದೇಶದಲ್ಲೇನಿದೆ?
••ಮೀನು ಸಾಗಿಸುವ ಎಲ್ಲ ವಾಹನ ಗಳಿಂದ ತ್ಯಾಜ್ಯ ನೀರು ಸೋರಿಕೆ ಆಗದಂತೆ ಸೂಕ್ತ ವ್ಯವಸ್ಥೆ ಮಾಡಬೇಕು.

••ಮೀನುಗಳನ್ನು ಕ್ರೇಟ್‌ಗಳಲ್ಲಿ ತುಂಬಿಸಿ ಸಾಗಿಸಬೇಕು.

••ತ್ಯಾಜ್ಯ ನೀರು ರಸ್ತೆಗೆ ಬೀಳದಂತೆ ಅದನ್ನು ಸಂಗ್ರಹಿಸಲು ಸೂಕ್ತ ಟ್ಯಾಂಕನ್ನು (ಒಂದು ಟನ್‌ ಸಾಮರ್ಥ್ಯದ ಲಾರಿಗೆ 50 ಲೀ. ಸಾಮರ್ಥಯದ ಟ್ಯಾಂಕ್‌) ವಾಹನಕ್ಕೆ ಕಡ್ಡಾಯವಾಗಿ ಜೋಡಿಸಿರ ಬೇಕು.

ನ್ಯಾಯಾಲಯದಲ್ಲಿ ದಂಡ ಪಾವತಿ
ಮೀನು ಸಾಗಿಸುವ ಲಾರಿಗಳನ್ನು ಮುಟ್ಟುಗೋಲು ಹಾಕಿದ ಪ್ರಕರಣಗಳಲ್ಲಿ ವಾಹನ ಮಾಲಕರಿಗೆ ದಂಡ ವಿಧಿಸುವ ಅಧಿಕಾರ ಪೊಲೀಸರಿಗಿಲ್ಲ; ಬದಲಾಗಿ ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯ ದಂಡ ವಿಧಿಸುತ್ತದೆ. ಟ್ರಾಫಿಕ್‌ ಪೊಲೀಸರು ರಸ್ತೆಗೆ ಮೀನಿನ ಗಲೀಜು ನೀರು ಸೋರಿಕೆ ಮಾಡಿಕೊಂಡು ಹೋಗುವ ವಾಹನಗಳನ್ನು ಪತ್ತೆ ಹಚ್ಚಿ ಅವುಗಳನ್ನು ವಶಕ್ಕೆ ಪಡೆದು ಮುಟ್ಟುಗೋಲು ಹಾಕಿಕೊಂಡ ಬಳಿಕ ಸಂಬಂಧ ಪಟ್ಟ ಪೊಲೀಸ್‌ ಠಾಣೆಗೆ ಹಸ್ತಾಂತರಿಸುತ್ತಾರೆ. ಪೊಲೀಸ್‌ ಠಾಣೆಯವರು ಸಂಬಂಧ ಪಟ್ಟ ವಾಹನ ಚಾಲಕ/ ಮಾಲಕರ ವಿರುದ್ಧ ಎಫ್‌ಐಆರ್‌ ದಾಖಲಿಸಿ ಈ ಬಗ್ಗೆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ. ವಾಹನಗಳ ಮಾಲಕ/ ಚಾಲಕರು ನ್ಯಾಯಾಲಯಕ್ಕೆ ಹೋಗಿ ನ್ಯಾಯಾಲಯ ಸೂಚಿಸಿದ ದಂಡ ಮೊತ್ತವನ್ನು ಪಾವತಿಸಿ ವಾಹನವನ್ನು ಬಿಡಿಸಿಕೊಂಡು ಬರ ಬೇಕಾಗುತ್ತದೆ.

ಕಾರ್ಯಾಚರಣೆ ನಿರಂತರ

ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಮೀನು ಸಾಗಾಟ ವಾಹನಗಳ ವಿರುದ್ಧ ಕಾರ್ಯಾಚರಣೆ ನಿರಂತರವಾಗಿ ಮುಂದುವರಿಯಲಿದೆ. ಮೀನು ಸಾಗಿಸುವ ವಾಹನಗಳ ಚಾಲಕ/ ಮಾಲಕರು ಸಾರ್ವಜನಿಕ ಹಿತದೃಷ್ಟಿಯಿಂದ ನಿಯಮಗಳನ್ನು ಪಾಲಿಸಿ ಸಹಕರಿಸಬೇಕು.
ಲಕ್ಷ್ಮೀ ಗಣೇಶ್‌,

ಡಿಸಿಪಿ (ಸಂಚಾರ ವಿಭಾಗ)
Advertisement

Udayavani is now on Telegram. Click here to join our channel and stay updated with the latest news.

Next