ತೀರ್ಥಹಳ್ಳಿ: ಪ್ರವಾಹದಿಂದಾಗಿ ತಾಲೂಕಿನಲ್ಲಿ ಆದ ಹಾನಿಯ ಕುರಿತು ಸರ್ಕಾರಕ್ಕೆ ಸೂಕ್ತ ಮಾಹಿತಿಯನ್ನು ಅಧಿಕಾರಿಗಳು ನೀಡಿಲ್ಲ. ಯಾವುದೇ ಮನೆ ಹಾನಿಗೊಂಡಿಲ್ಲ ಎಂಬ ವರದಿಯು ಜಿಲ್ಲಾಧಿಕಾರಿಗಳ ಕೈ ಸೇರಿದೆ. ಇಂತಹ ವರದಿಗಳನ್ನು ಅಧಿಕಾರಿಗಳು ಯಾಕೆ ಕೊಡುತ್ತಿದ್ದಾರೆ. ನೆರೆ ಹಾನಿಯ ಬಗ್ಗೆ ತಪ್ಪು ಮಾಹಿತಿ ನೀಡಬೇಡಿ ಎಂದು ಶಾಸಕ ಆರಗ ಜ್ಞಾನೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಪಂ ಸಭಾಂಗಣದಲ್ಲಿ ನಡೆದ ನೆರೆಹಾನಿ ವರದಿ ಪರಿಶೀಲನೆ ಸಭೆಯಲ್ಲಿ ನೋಡೆಲ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಕರ್ತವ್ಯ ನಿರ್ಲಕ್ಷ್ಯದ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಮೇಲಿನಕುರುವಳ್ಳಿ , ಹಣೆಗೆರೆ, ಆರಗ, ಕನ್ನಂಗಿ, ತೂದೂರು ಮುಂತಾದ ಗ್ರಾಮಗಳಲ್ಲಿ ಹಲವು ಮನೆಗಳು ಸಂಪೂರ್ಣ ಹಾಳಾಗಿವೆ. ಆದರೆ ಹಾನಿಯಾಗಿಲ್ಲ ಎಂಬ ವರದಿ ನೀಡಿದರೆ ಸಂತ್ರಸ್ತರ ಗತಿಯೇನು ಎಂದು ಪ್ರಶ್ನಿಸಿದರು.
ಈಗಾಗಲೇ ಸಾಗುವಳಿ ಪ್ರದೇಶ, ಮನೆ ಕೊಟ್ಟಿಗೆ ಜಾನುವಾರು ಜೀವಹಾನಿ ಕುರಿತಂತೆ 3910 ಪರಿಹಾರ ಅರ್ಜಿಗಳು ಸಲ್ಲಿಕೆಯಾಗಿವೆ. ಇನ್ನಷ್ಟು ಅರ್ಜಿ ಸಂತ್ರಸ್ತರಿಂದ ಬರಬೇಕಾಗಿದೆ. ಹಳ್ಳದ ದಂಡೆ, ಕೆರೆ ದಂಡೆ, ಸೇತುವೆ- ಮೋರಿ, ರಸ್ತೆ ಹಾಳಾದ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ. ಪಿಡಿಒ, ಗ್ರಾಮ ಲೆಕ್ಕಿಗರು, ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ನೋಡೆಲ್ ಅಧಿಕಾರಿ ಮಾಹಿತಿ ನೀಡಿದರು.
ಅಧಿಕಾರಿ ಹಾಗೂ ಸಿಬ್ಬಂದಿಗಳು ಕೂಡಲೇ ತಾಲೂಕಿನ ಗ್ರಾಪಂ ವ್ಯಾಪ್ತಿಯ ಹಾನಿಗೊಳಗಾದ ಪ್ರದೇಶಗಳ ಸೂಕ್ತ ಮಾಹಿತಿ ನೀಡಬೇಕು. ಈ ಮಾಹಿತಿ ಸರ್ಕಾರಕ್ಕೆ ಬೇಗನೆ ಸಲ್ಲಿಸಿದರೆ ಪರಿಹಾರವೂ ಸಂತ್ರಸ್ತರಿಗೆ ಬೇಗ ಸಿಗುವಂತಾಗುತ್ತದೆ. ಈಗಾಗಲೇ ಸಂತ್ರಸ್ತರು ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಸಿಟ್ಟಾಗಿದ್ದು, ನೀವು ಮಾಡಿದ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ಕನ್ನಂಗಿ, ಕೂಡುವಳ್ಳಿಯಲ್ಲಿ ಪ್ರವಾಹಕ್ಕೆ ಸಿಲುಕಿ ಆಕಸ್ಮಿಕವಾಗಿ ಮೃತಪಟ್ಟ ಲಕ್ಷ್ಮಮ್ಮ ಅವರ ಕುಟುಂಬದವರಿಗೆ 5 ಲಕ್ಷ ರೂ. ಪರಿಹಾರ ಧನದ ಚೆಕ್ ವಿತರಿಸಿದರು.
ಸಭೆಯಲ್ಲಿ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಶ್ರೀನಿವಾಸ್, ತಾಪಂ ಅಧ್ಯಕ್ಷೆ ನವಮಣಿ, ಉಪಾಧ್ಯಕ್ಷೆ ಯಶೋಧ, ತಹಶೀಲ್ದಾರ್ ಭಾಗ್ಯ, ತಾಪಂ ಇಒ ಅನಂತ ಕುಮಾರ್ ಮತ್ತಿತರರು ಇದ್ದರು.