ತೀರ್ಥಹಳ್ಳಿ: ಚಟುವಟಿಕೆಗಳು ಮಕ್ಕಳನ್ನು ಸಶಕ್ತಗೊಳಿಸುತ್ತವೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ನ.12ರ ಮಂಗಳವಾರ ತಾಲೂಕಿನ ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಮರಗಳಲೆಯಲ್ಲಿ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದರು.
ಜಾನಪದ, ಸಾಹಿತ್ಯ, ಕಲೆ, ನೃತ್ಯಗಳಿಗೆ ಭಾರತೀಯ ಪರಂಪರೆಯಲ್ಲಿ ಮಹತ್ತರವಾದ ಸ್ಥಾನವಿದೆ. ಅದನ್ನು ನಾವು ಉಳಿಸುವ ಜೊತೆಗೆ ಮುಂದಿನ ಪೀಳಿಗೆಗೂ ಪರಿಚಯಿಸುವ ಕೆಲಸ ನಮ್ಮಿಂದ ಆಗಬೇಕು. ಅದಕ್ಕಾಗಿ ಪ್ರತಿಭಾ ಕಾರಂಜಿಗಳು ಉಪಯುಕ್ತವಾಗಿವೆ ಎಂದು ತಿಳಿಸಿದರು.
ಮರಗಳಲೆ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿದಿದೆ. ಅತೀ ಕಡಿಮೆ ಸಂಖ್ಯೆಯಲ್ಲಿ ಶಾಲೆಗಳಲ್ಲಿ ಮಕ್ಕಳು ಅಭ್ಯಾಸ ಮಾಡುವುದು ಉತ್ತಮ. ಶಿಕ್ಷಣದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ. 2,3 ಮಕ್ಕಳು ಒಂದು ಶಾಲೆಯಲ್ಲಿ ಕುಳಿತು ಒಬ್ಬರ ಮುಖ ಒಬ್ಬರನ್ನು ನೋಡಿಕೊಂಡಿರುವುದು ಶೈಕ್ಷಣಿಕವಾಗಿ ಪೂರಕ ವಾತಾವರಣ ತರುವುದಿಲ್ಲ. ಸರ್ಕಾರಗಳು ಈ ನಿಟ್ಟಿನಲ್ಲಿ ಯೋಚಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಭೆಯ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ಆನಂದ ನಾಯ್ಕ್ ವಹಿಸಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷ ಅಗಸಾಡಿ ಶಾಮಪ್ಪ, ಜಿ.ಎಸ್. ನಾರಾಯಣ ರಾವ್, ಗಿರಿಯಪ್ಪ ಗೌಡ, ನರಸಿಂಹ ಮೂರ್ತಿ, ಗುರುಮೂರ್ತಿ, ನಾಗರಾಜ್, ಮಂಜುನಾಥ್, ಮಮತಾ, ಸೇರಿ ಹಲವರು ಉಪಸ್ಥಿತರಿದ್ದರು.