ರಾಂಚಂದ್ರ ಕೊಪ್ಪಲು
ತೀರ್ಥಹಳ್ಳಿ: ಕಳೆದ 6 ತಿಂಗಳ ಹಿಂದೆಯೇ ತೀರ್ಥಹಳ್ಳಿಯ ಪಪಂ ಚುನಾವಣೆ ನಡೆದು ಜನಪ್ರತಿನಿಧಿ ಗಳ ಆಡಳಿತ ನಡೆಸಬೇಕಾಗಿತ್ತು. ಆದರೆ ಇಲ್ಲಿನ ಪಪಂ ರಾಜಕೀಯಕ್ಕೆ ಸಿಲುಕಿ ಮೀಸಲಾತಿಯ ಮೇಲಾಟದಿಂದ ಪ್ರಸ್ತುತ ತಾಲೂಕು ಆಡಳಿತದ ಹಿಡಿತದಲ್ಲಿದ್ದು, ಇದರಿಂದ ಪಟ್ಟಣದ ನಾಗರಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಪರದಾಡುವಂತಾಗಿದೆ.
ಜೆಡಿಎಸ್- ಕಾಂಗ್ರೆಸ್ ಸಮಿಶ್ರ ಸರ್ಕಾರದ ಸಮಯದಲ್ಲಿ ತೀರ್ಥಹಳ್ಳಿ ಪಪಂಗೆ ಮೀಸಲಾತಿ ಘೋಷಣೆಯಾಗಿತ್ತು. ಸಾಗರ, ಶಿವಮೊಗ್ಗ, ಹೊಸನಗರ, ಸೊರಬದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಂದರ್ಭದಲ್ಲಿಯೇ ಚುನಾವಣೆಯಾಗಬೇಕಾಗಿತ್ತು. ಆದರೆ ಮೀಸಲಾತಿ ಪಟ್ಟಿ ಹೊರಬರುತ್ತಿದ್ದಂತೆ ರಾಜಕೀಯ ಒತ್ತಡದ ಮೂಲಕ ಕೆಲವು ವ್ಯಕ್ತಿಗಳು ಮೀಸಲಾತಿಯ ತೊಡಕು ಎಂಬ ಪ್ರಶ್ನೆ ಮುಂದಿಟ್ಟು ನ್ಯಾಯಾಲಯದ ಮೆಟ್ಟಿಲೇರಿದರು. ಈ ಹಿನ್ನಲೆಯಲ್ಲಿ ಚುನಾವಣೆ ಮುಂದೂಡಲ್ಪಟ್ಟಿತ್ತು.
ಆದರೆ ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ತಮಗೆ ಅನುಕೂಲಕರವಾದ ಮೀಸಲಾತಿ ಪಟ್ಟಿಯನ್ನು ತಂದು ಚುನಾವಣೆಯನ್ನು ಎದುರಿಸುವ ತಂತ್ರಗಾರಿಕೆ ನಡೆಯುತ್ತಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಕಳೆದ ಆರು ತಿಂಗಳಿಂದ ಮೀಸಲಾತಿಯ ಜಂಜಾಟಕ್ಕೆ ಸಿಲುಕಿದ್ದ ಪಟ್ಟಣ ಪಂಚಾಯತ್ ವ್ಯವಸ್ಥೆ ಹದಗೆಟ್ಟಿದ್ದು, ಪಟ್ಟಣ ವ್ಯಾಪ್ತಿಯಲ್ಲಿ ಹಲವು ಮೂಲ ಸಮಸ್ಯೆಗಳು ಪರಿಹಾರವಾಗದೆ ನಿಂತ ನೀರಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದೆಡೆ ಹಿಂದಿನ ಕಾಮಗಾರಿಯ ಹಣ ಬಿಡುಗಡೆಯಾಗದೆ ಗುತ್ತಿಗೆದಾರರು ನಲುಗುವಂತಾಗಿದೆ. ಈಗಾಗಲೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ನ ಮುಖಂಡರು ಹಾಗೂ ಕಾರ್ಯಕರ್ತರು ಯಾವುದೇ ಕ್ಷಣದಲ್ಲಿ ಪಪಂ ಚುನಾವಣೆ ಘೋಷಣೆಯಾಗಬಹುದು ಎಂಬ ಹಿನ್ನಲೆಯಲ್ಲಿ ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಚುರುಕಿನ ಕೆಲಸದೊಂದಿಗೆ ಪ್ರಚಾರ ತೊಡಗಿದ್ದಾರೆ.
ಒಟ್ಟಾರೆ ಮೀಸಲಾತಿ ಮೇಲಾಟಕ್ಕೆ ಸಿಕ್ಕಿ ಪಟ್ಟಣ ವ್ಯಾಪ್ತಿಯಲ್ಲಿ ಯಾವುದೇ ಸೂಕ್ತ ಕೆಲಸ, ಕಾಮಗಾರಿಗಳು ಆಗುತ್ತಿಲ್ಲ. ಹಾಗೂ ಪಟ್ಟಣ ವ್ಯಾಪ್ತಿಯ ನಾಗರಿಕರು ಪಟ್ಟಣ ವ್ಯಾಪ್ತಿಯಲ್ಲಿನ ನೈರ್ಮಲ್ಯ ಹಾಗೂ ಮೂಲ ಸೌಕರ್ಯದ ವಿಚಾರದಲ್ಲಿ ಪಟ್ಟಣ ಪಂಚಾಯತ್ ಗೆ ಬಂದು ತಮ್ಮ ಸಮಸ್ಯೆಯನ್ನು ಹೇಳುವ ಸ್ಥಿತಿ ಉದ್ಬವವಾಗಿದೆ .