ಮಹಾಬುದಾಬಾದ್: “ತರಗತಿಯ ಶಿಕ್ಷಕರು ನನಗೆ ಬೈಯ್ದಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಿ’ ಹೀಗೆಂದು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದು ಮೂರನೇ ತರಗತಿ ವಿದ್ಯಾರ್ಥಿ. ಇದು ಅಚ್ಚರಿಯಾದರೂ ಸತ್ಯ”. ಇಂಥ ಒಂದು ಘಟನೆ ನಡೆದದ್ದು ತೆಲಂಗಾಣದ ಮಹಾಬುದಾಬಾದ್ ಜಿಲ್ಲೆಯ ಬಯ್ನಾವರಂನಲ್ಲಿ.
ಖಾಸಗಿ ಶಾಲೆಯ ಮೂರನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯೊಬ್ಬ ಧ್ಯಾನ ತರಗತಿಯಲ್ಲಿ ಇತರ ವಿದ್ಯಾರ್ಥಿಗಳಿಗೆ ಕೀಟಲೆ ನೀಡುತ್ತಿದ್ದ ಎಂಬ ಕಾರಣಕ್ಕಾಗಿ ಆತನಿಗೆ ಬೈಯ್ದಿದ್ದರು. ಇದರಿಂದ ರೊಚ್ಚಿಗೆದ್ದ ಆತ ಭೋಜನ ವಿರಾಮದ ವೇಳೆ ಮರು ಮಾತನಾಡದೆ ನೇರಾವಾಗಿ ಪೊಲೀಸ್ ಠಾಣೆಗೆ ತೆರಳಿದ್ದಾನೆ.
ಶಾಲೆಯಿಂದ 200 ಮೀಟರ್ ದೂರದಲ್ಲಿರುವ ಠಾಣೆಯಲ್ಲಿ ಎಸ್.ಐ. ಎಂ.ರಮಾದೇವಿ ಬಳಿ ಶಿಕ್ಷಕನ ವಿರುದ್ಧ ಕೇಸು ದಾಖಲಿಸಲು ಮನವಿ ಮಾಡಿದ್ದಾನೆ ವಿದ್ಯಾರ್ಥಿ. ಕೂಡಲೇ ಶಿಕ್ಷಕರನ್ನು ಬರುವಂತೆ ಸೂಚಿಸಿದ ಎಸ್.ಐ ಪ್ರಕರಣದ ಮಾಹಿತಿ ಪಡೆದುಕೊಂಡರು. ಶಿಕ್ಷಕ ಮತ್ತು ವಿದ್ಯಾರ್ಥಿಗೆ ಪೊಲೀಸ್ ಅಧಿಕಾರಿ ಬುದ್ಧಿ ಮಾತುಗಳನ್ನು ಹೇಳಿ, ಕಳುಹಿಸಿಕೊಟ್ಟಿದ್ದಾರೆ.
ಪುದುಚೆರಿಯ ಪ್ರಸಿದ್ಧ ಹಡಗುಕಟ್ಟೆ ಭಾಗಶಃ ಕುಸಿತ
ಪುದುಚೆರಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಪರಿಣಾಮ ಪುದುಚೆರಿಯ ಪ್ರಖ್ಯಾತ ರಾಕ್ ಬೀಚ್‌ನಲ್ಲಿನ ಹಡಗುಕಟ್ಟೆ, ಭಾಗಶಃ ಕುಸಿದುಬಿದ್ದಿದೆ. ತೀವ್ರವಾಗಿ ಅಲೆಗಳು ಬಡಿದಿದ್ದನ್ನು ತಾಳಿಕೊಳ್ಳಲಾಗದ್ದರಿಂದ ಹಡಗುಕಟ್ಟೆಗೆ ಈ ಪರಿಸ್ಥಿತಿ ಬಂದಿದೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ, ಗಂಟೆಗೆ 7 ಕಿ.ಮೀ. ವೇಗದಲ್ಲಿ ಸತತ 6 ಗಂಟೆಗಳ ಕಾಲ ಮಾರುತಗಳು ಬೀಸಿವೆ. ಇದರ ಪರಿಣಾಮವೇ ಪುದುಚೆರಿಯಲ್ಲಿನ ಹಡಗುಕಟ್ಟೆ ಕುಸಿತ. ಮುಂದೆ ಇದು ತಮಿಳುನಾಡಿನತ್ತ ಧಾವಿಸಲಿದೆ. ಸದ್ಯದಲ್ಲೇ ಇದರ ವೇಗ ತಗ್ಗುವ ನಿರೀಕ್ಷೆಯಿದೆ.