Advertisement

‘ದೇವ್ಲೆ ದೇವ್ಲೆ’ …ಗಾಳಿಪಟ 2 ಎಣ್ಣೆ ಸಾಂಗ್‌ ಬಂತು

12:27 PM Jul 16, 2022 | Team Udayavani |

ಗಣೇಶ್‌ ನಾಯಕರಾಗಿರುವ, ಯೋಗರಾಜ್‌ ಭಟ್‌ ನಿರ್ದೇಶನದ “ಗಾಳಿಪಟ-2′ ಚಿತ್ರ ಆಗಸ್ಟ್‌ 12ಕ್ಕೆ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರ ಹಾಡಿನ ಮೂಲಕ ಮೋಡಿ ಮಾಡುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಎರಡು ಹಾಡುಗಳು ಹಿಟ್‌ಲಿಸ್ಟ್‌ ಸೇರಿದೆ. ಈಗ ಚಿತ್ರದ ಮತ್ತೂಂದು ಹಾಡು ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದೆ. ಅದು ಚಿತ್ರದ ಎಣ್ಣೆ ಹಾಡು.

Advertisement

ಇತ್ತೀಚೆಗೆ ಈ ಹಾಡಿನ ಬಿಡುಗಡೆ ಸಮಾರಂಭ ನಡೆಯಿತು. ” ದೇವ್ಲೆ ದೇವ್ಲೆ ‘ ಹಾಡು ಆನಂದ್‌ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಯೋಗರಾಜ್‌ ಭಟ್‌ ಬರೆದಿರುವ ಈ ಹಾಡನ್ನು ವಿಜಯ್‌ ಪ್ರಕಾಶ್‌ ಹಾಡಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ನೀಡಿದ್ದಾರೆ.

ಈ ಹಾಡಿನ ಬಗ್ಗೆ ಮಾತನಾಡುವ ಯೋಗರಾಜ್‌ ಭಟ್‌, “ಈ ಹಾಡನ್ನು ಬರೆದು ಅರ್ಜುನ್‌ ಜನ್ಯ ಅವರಿಗೆ ಕಳುಹಿಸಿದೆ. ಮೊದಲು ಈ ಹಾಡನ್ನು ದೇವ್ಲೆ ದೇವ್ಲೆ ಎಂದು ಬರೆದದ್ದು. ಆನಂತರ ಇದು ಮಾಮೂಲಿ ತರಹ ಇದೆ. ಸ್ವಲ್ಪ ಏನಾದರೂ ಬದಲಾವಣೆ ಮಾಡಿ ಅಂದರು ಅರ್ಜುನ್‌ ಜನ್ಯ. ಆಗ ರ ಕಾರ ತೆಗೆದು ಲ ಕಾರ ಹಾಕಿ ಅಂದೆ. ಆಗ ಎಲ್ಲರಿಗೂ ಹಿಡಿಸಿತು. ವಿಜಯ್‌ ಪ್ರಕಾಶ್‌ ಸುಶ್ರಾವ್ಯವಾಗಿ ಹಾಡಿದ್ದಾರೆ. ನನ್ನ , ವಿಜಯ್‌ ಪ್ರಕಾಶ್‌ ಹಾಗೂ ಅರ್ಜುನ್‌ ಜನ್ಯರ ಕಾಂಬಿನೇಶನ್‌ ನಲ್ಲಿ ಸಾಕಷ್ಟು ಎಣ್ಣೆ ಹಾಡುಗಳು ಗೆದ್ದಿವೆ. ಇದು ಕೂಡ ಗೆಲುತ್ತದೆ ಎಂಬ ಭರವಸೆಯಿದೆ. ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದ್ದ ಸಮಯದಲ್ಲಿ ಚಿತ್ರೀಕರಣವಾದ ಹಾಡು ಇದು. ಎಲ್ಲಾ ಕಡೆ ಲಾಕ್‌ ಡೌನ್‌. ಅಂತಹ ಸಮಯದಲ್ಲಿ ದೂರದ ಕಜಾಕಿಸ್ತಾನದಲ್ಲಿ ಚಿತ್ರೀಕರಣ ಮಾಡುವುದು ಅಂದರೆ ಕಷ್ಟ ಸಾಧ್ಯ. ಆದರೆ ಅದನ್ನು ಸಾಧ್ಯ ಮಾಡಿದವರು ನಮ್ಮ ನಿರ್ಮಾಪಕ ರಮೇಶ್‌ ರೆಡ್ಡಿ ಅವರು. ಈ ಹಾಡಿಗೆ ಸ್ನೋ ಬೇಕಾಗಿದ್ದರಿಂದ ಅಲ್ಲಿಗೆ ಹೋದೆವು. ಆದರೆ ಅಲ್ಲಿ ವಿಪರೀತ ಚಳಿ. ಇಷ್ಟೆಲ್ಲಾ ಕಷ್ಟಗಳ ನಡುವೆ ಎಲ್ಲರಿಗೂ ಇಷ್ಟವಾಗುವ ಹಾಡನ್ನು ಚಿತ್ರಿಸಿಕೊಂಡು ಬಂದಿದ್ದೀವಿ’ ಎಂದು ವಿವರಣೆ ನೀಡುತ್ತಾರೆ ನಿರ್ದೇಶಕ ಯೋಗರಾಜ್‌ ಭಟ್.

ನಾಯಕ ನಟ ಗಣೇಶ್‌ ಕೂಡಾ ಈ ಹಾಡಿನ ಬಗ್ಗೆ ಖುಷಿಯ ಮಾತುಗಳನ್ನಾಡುತ್ತಾರೆ. “ಯೋಗರಾಜ್‌ ಭಟ್‌ ಈ ಹಾಡನ್ನು ನನಗೆ ಕಳುಹಿಸಿದಾಗ, ಇದೇನ್‌ ಸರ್‌ ಹೀಗಿದೆ? ಈ ಹಾಡು ಕೇಳಿದವರು ನಿಮ್ಮ ಬಗ್ಗೆ ಏನಾದರೂ ಅಂದುಕೊಳ್ಳುತ್ತಾರೆ ಅಂದೆ. ಆ ನಂತರ ಇಲ್ಲ ಗಣಪ ಇನ್ನೊಂದು ಸಲ ಕೇಳು ಅಂದರು. ಕೇಳುತ್ತಾ, ಕೇಳುತ್ತಾ ನಾನೇ ಸದಾ ಗುನುಗುವಂತಾಯಿತು. ಅಂದು ಇದ್ದ ಆತಂಕ ಈಗ ಇಲ್ಲ. ಜನ ದೇವ್ಲೆ ದೇವ್ಲೆ ಹಾಡನ್ನು ಒಪ್ಪಿಕೊಂಡಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ನಿರ್ದೇಶನ, ವಿಜಯ್‌ ಪ್ರಕಾಶ್‌ ಗಾಯನ, ಪಾತಾಜೆ ಅವರ ಛಾಯಾಗ್ರಹಣ, ಧನು ಮಾಸ್ಟರ್‌ ನೃತ್ಯ ನಿರ್ದೇಶನ ಹಾಗೂ ಎಲ್ಲರ ಅಭಿನಯ ಈ ಹಾಡನ್ನು ಶ್ರೀಮಂತಗೊಳಿಸಿದೆ’ ಹಾಡಿನ ಬಗ್ಗೆ ಖುಷಿ ವ್ಯಕ್ತಪಡಿಸಿದರು.

” ಲ ಕಾರದಲ್ಲಿ ಈ ಹಾಡನ್ನು ಹಾಡುವುದು ಕಷ್ಟ ಅಂದುಕೊಂಡೆ. ಅಭ್ಯಾಸ ಮಾಡಿ, ಅರ್ಧ ಗಂಟೆಯಲ್ಲಿ ದೇವ್ಲೆ ದೇವ್ಲೆ ಹಾಡು ಹಾಡಿದೆ. ಈ ಹಿಂದೆ ಕೂಡ ನನ್ನ ಹಾಗೂ ಭಟ್ಟರ ಕಾಂಬಿನೇಶನಲ್ಲಿ ಸಾಕಷ್ಟು ಗೀತೆಗಳು ಜನಪ್ರಿಯವಾಗಿದೆ’ ಎನ್ನುವುದು ಗಾಯಕ ವಿಜಯ್‌ ಪ್ರಕಾಶ್‌ ಮಾತು. ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯಾ ಕೂಡಾ ಹಾಡಿನ ಬಗ್ಗೆ ಮಾತನಾಡಿದರು.

Advertisement

” ಈ ಹಾಡಿನ ಚಿತ್ರೀಕರಣ ನೋಡಲು ಕಜಾಕಿಸ್ತಾನಕ್ಕೆ ಹೋಗಿದ್ದೆ. ಅದೇ ಮೊದಲ ಬಾರಿಗೆ ನಾನು ಅಂತರರಾಷ್ಟ್ರೀಯ ವಿಮಾನ ಹತ್ತಿದ್ದು, ಅಂತಹ ಚಳಿಯಲ್ಲಿ ಕೆಲಸ ಮಾಡಿದ್ದ ಚಿತ್ರ ತಂಡಕ್ಕೆ ಧನ್ಯವಾದ’ ಎಂದರು ನಿರ್ಮಾಪಕ ರಮೇಶ್‌ ರೆಡ್ಡಿ.

ನಾಯಕರಾದ ದಿಗಂತ್‌, ಪವನ್‌ ಕುಮಾರ್‌, ನಾಯಕಿ ಶರ್ಮಿಳಾ ಮಾಂಡ್ರೆ, ನಟಿ ಸುಧಾ ಬೆಳವಾಡಿ ಸೇರಿದಂತೆ ಚಿತ್ರತಂಡ ಚಿತ್ರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು

Advertisement

Udayavani is now on Telegram. Click here to join our channel and stay updated with the latest news.

Next