ಕೊಯಮತ್ತೂರು: ತೃತೀಯ ಲಿಂಗಿಗಳ ಸೇವೆಗಳಿಗೆ ಮಾನ್ಯತೆ ದೊರಕಿಸಿಕೊಟ್ಟು ಅವರನ್ನು ಎಲ್ಲರಂತೆ ಸಮಾನವಾಗಿ ಕಾಣುವ ಭಾವನೆ ಹೆಚ್ಚಿಸುವ ಸದುದ್ದೇಶದಿಂದ ಇಲ್ಲಿನ ಕುಮಾರಗುರು ತಾಂತ್ರಿಕ ಮಹಾ ವಿದ್ಯಾಲಯದ (ಕೆಸಿಟಿ) ವಿದ್ಯಾರ್ಥಿಗಳು, ಮೂವರು ತೃತೀಯ ಲಿಂಗಿ ಬಾಣಸಿಗರಿರುವ ಮೊಬೈಲ್ ಕ್ಯಾಂಟೀನನ್ನು ಪರಿಚಯಿಸಿದ್ದಾರೆ.
ಯುವ ಜನಾಂಗವು ತೃತೀಯ ಲಿಂಗಿಗ ಳನ್ನು ಇತ್ತೀಚೆಗೆ ಸಮಾನವಾಗಿ ಕಾಣುತ್ತಿರುವ ಹಿನ್ನೆಲೆಯಲ್ಲಿ ಇಂಥ ಮನಸ್ಥಿತಿಗಳನ್ನು ಮತ್ತಷ್ಟು ಉತ್ತೇಜಿಸಲು ಈ ಕೆಲಸಕ್ಕೆ ವಿದ್ಯಾರ್ಥಿಗಳು ಕೈ ಹಾಕಿದ್ದಾರೆ. ಸದ್ಯಕ್ಕೆ ಈ ಮೊಬೈಲ್ ಕ್ಯಾಂಟೀನ್ 15 ದಿನಗಳಿಗೊಮ್ಮೆ ರಸ್ತೆಗೆ ಇಳಿಯಲಿದ್ದು, ಕೊಯಮತ್ತೂರಿನ ಪ್ರತಿ ಕಾಲೇಜಿಗೆ ತೆರಳಿ ವಿದ್ಯಾರ್ಥಿಗಳಿಗೆ ಬೇಕಾದ ತಿಂಡಿ, ತಿನಿಸುಗಳನ್ನು ಮಾರಾಟ ಮಾಡಲಿದೆ.
ತಸ್ನೀಮ್, ಸುಚಿತ್ರಾ ಹಾಗೂ ಯಾಮಿನಿ ಎಂಬ ಮೂವರು ಬಾಣಸಿಗರು ಇದರ ಕೇಂದ್ರಬಿಂದುವಾಗಿದ್ದಾರೆ. ತಸ್ನೀಮ್‌ಗೆ 15 ವರ್ಷಗಳ ಅಡುಗೆ ಅನುಭವವಿದೆ. ಇನ್ನು, ಸುಚಿತ್ರಾ, ಭಾರತೀಯ ಅಡುಗೆಯ ಸ್ಪೆಷಲಿಸ್ಟ್ ಎಂದು ಗುರುತಿಸಿಕೊಂಡಿದ್ದಾರೆ. ಯಾಮಿನಿ ಅವರು ಸ್ಯಾಂಡ್‌ವಿಚ್, ಫ್ರಾಂಕಿ, ಬರ್ಗರ್, ಪಕೋಡ, ಬಿರಿಯಾನಿ, ಜ್ಯೂಸ್ ತಯಾರಿಸು ವುದರಲ್ಲಿ ಪರಿಣಿತೆ. ಪ್ರತಿ ಬಾರಿ ಕ್ಯಾಂಟೀನ್ ರಸ್ತೆಗಳಿದಾಗ, ಕೆಸಿಟಿ ವಿದ್ಯಾರ್ಥಿಗಳ ತಂಡ ವೊಂದು ಕ್ಯಾಂಟೀನ್ ವಾಹನ ಜತೆ ಹೋಗಿ ಈ ಮೂವರ ಕಾರ್ಯಕ್ಕೆ ನೆರವಾಗಲಿದೆ.
ಸಮಾಜದ ಅಸಮಾನತೆ ನಿರ್ಮೂಲನೆಗೆ ವಿದ್ಯಾರ್ಥಿಗಳೇ ಇಂಥದ್ದೊಂದು ಪ್ರಯತ್ನಕ್ಕೆ ಕೈ ಹಾಕಿರುವುದು ಶ್ಲಾಘನೀಯ. ಸಮಾಜದ ಇತರರಿಂದ ಇಂಥ ಮತ್ತಷ್ಟು ಪ್ರಯತ್ನಗಳು ಜಾರಿಯಾಗಬೇಕಿದೆ.
– ಶಂಕರ್ ವಣವನಾಯರ್, ಕೆಸಿಟಿ ಜಂಟಿ ಪ್ರತಿನಿಧಿ