Advertisement

ಏಕ ಇಲಾಖೆ, ಏಕ ಪ್ರಶಸ್ತಿಗೆ ಚಿಂತನೆ? ಶಿಕ್ಷಣ, ಸಿನೆಮಾ, ಸಂಗೀತ, ಸಾಹಿತ್ಯ ಪ್ರಶಸ್ತಿ ಕಡಿತ

11:55 PM Nov 22, 2022 | Team Udayavani |

ಹೊಸದಿಲ್ಲಿ: “ಏಕ ಇಲಾಖೆ, ಏಕ ಪ್ರಶಸ್ತಿ’ ವ್ಯವಸ್ಥೆ ಜಾರಿಗೆ ತರಲು ಮುಂದಾಗಿರುವ ಕೇಂದ್ರ ಸರಕಾರವು ಈಗ ಇರುವ ಪ್ರಶಸ್ತಿಗಳ ಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ಕಡಿತಗೊಳಿಸಲು ಮುಂದಾಗಿದೆ.

Advertisement

ಶಿಕ್ಷಣ ಇಲಾಖೆ, ಸಿನೆಮಾ, ಸಂಗೀತ, ನಾಟಕ, ಸಾಹಿತ್ಯ ಅಕಾಡೆಮಿಯಿಂದ ನೀಡುವ ಪ್ರಶಸ್ತಿಗಳನ್ನು ಕಡಿತಗೊಳಿಸಿ, ತಲಾ ಒಂದು ಅಥವಾ ವಿಭಾಗವಾರು ಒಂದೊಂದು ಪ್ರಶಸ್ತಿ ನೀಡಲು ಅದು ಚಿಂತನೆ ನಡೆಸಿದೆ.

ಸೆ. 22ರಂದು ಗೃಹ ಇಲಾಖೆ ಕಾರ್ಯದರ್ಶಿ ಅಜಯ್‌ ಭಲ್ಲಾ ನೇತೃತ್ವದಲ್ಲಿ ಅಂತರ್‌ ಸಚಿವಾಲಯದ ಸಭೆ ನಡೆದಿದ್ದು, ಇದರಲ್ಲಿ ಪ್ರಧಾನಿ ಮೋದಿ ಆಶಯದಂತೆ ಪ್ರಶಸ್ತಿ ನೀಡುವ ವ್ಯವಸ್ಥೆಯೇ ಬದಲಾಗಬೇಕು ಎಂಬ ಬಗ್ಗೆ ಚರ್ಚಿಸಲಾಗಿದೆ. ಹಾಗೆಯೇ ಈ ಎಲ್ಲ ಸಚಿವಾಲಯಗಳ ಜತೆ ಚರ್ಚಿಸಿ, ಪ್ರಶಸ್ತಿಗಳನ್ನು ವಿಲೀನಗೊಳಿಸುವ ಅಥವಾ ಕಡಿತಗೊಳಿಸುವ ಬಗ್ಗೆ ನಿರ್ಧರಿಸಲಾಗಿದೆ.

ಸಾಹಿತ್ಯ, ಸಂಗೀತ-ನಾಟಕಕ್ಕೆ ತಲಾ ಒಂದು
ಸಂಗೀತ ಮತ್ತು ನಾಟಕ ಅಕಾಡೆಮಿಯಲ್ಲಿ ವರ್ಷಕ್ಕೆ 40 ಪ್ರಶಸ್ತಿ ಹಾಗೂ ಸಾಹಿತ್ಯ ಅಕಾ ಡೆಮಿಯಲ್ಲಿ 24 ಪ್ರಶಸ್ತಿ ನೀಡಲಾಗುತ್ತಿದೆ. ಈ ಎಲ್ಲ ಪ್ರಶಸ್ತಿಗಳನ್ನು ಸ್ಥಗಿತಗೊಳಿಸಿ ಸಂಗೀತ – ನಾಟಕ ಅಕಾಡೆಮಿಯಲ್ಲಿ ಹಾಗೂ ಸಾಹಿತ್ಯ ಅಕಾ ಡೆಮಿಯಲ್ಲಿ ವಿವಿಧ ವಿಭಾಗಗಳಲ್ಲಿ ಅತ್ಯುನ್ನತ ಪ್ರಶಸ್ತಿ ನೀಡಬಹುದು ಎಂದಿದೆ.

ಕೃಷಿ: ಮೂರು ಪ್ರಶಸ್ತಿ
ಮುಖ್ಯವಾಗಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಮೂರು ಪ್ರಶಸ್ತಿ ನೀಡಲು ಸಲಹೆ ನೀಡಲಾಗಿದೆ. ಸಂಶೋಧನೆ ಮತ್ತು ತಂತ್ರಜ್ಞಾನ, ಒಂದು ರಾಷ್ಟ್ರೀಯ ಪ್ರಶಸ್ತಿ ಹಾಗೂ ಕೃಷಿಕ ರತ್ನ ಎಂಬ ಹೆಸರಲ್ಲಿ ಪ್ರಶಸ್ತಿ ನೀಡಬಹುದು ಎಂದು ಹೇಳಲಾಗಿದೆ.

Advertisement

ಶಿಕ್ಷಣ: ಒಂದೇ ಪ್ರಶಸ್ತಿ
ಪ್ರತೀ ವರ್ಷ ಶಿಕ್ಷಣ ಇಲಾಖೆ ಕಡೆ ಯಿಂದ ಉತ್ತಮ ಶಿಕ್ಷಕ ಎಂದು 45-47 ಮಂದಿಗೆ ಶಿಕ್ಷಕರ ದಿನವಾದ ಸೆ. 5ರಂದು ಪ್ರಶಸ್ತಿ ನೀಡಲಾಗುತ್ತಿತ್ತು. ಇನ್ನು ಮುಂದೆ ಈ ಪ್ರಶಸ್ತಿಗಳನ್ನು ಕಡಿತಗೊಳಿಸಿ ದೇಶಕ್ಕೊಂದೇ ಅತ್ಯುನ್ನತ ಪ್ರಶಸ್ತಿ ಅಥವಾ 2ರಿಂದ 3 ವಿಭಾಗ ಮಾಡಿ ಅತ್ಯುನ್ನತ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಹಾಗೆಯೇ ವಿವಿಧ ಇಲಾಖೆಗಳಿಂದ ಶಿಕ್ಷಕರಿಗೆ ನೀಡುವ ಪ್ರಶಸ್ತಿಗಳನ್ನೂ ವಿಲೀನ ಮಾಡಲಾಗುತ್ತದೆ.

ದಾದಾ ಸಾಹೇಬ್‌ ಪ್ರಶಸ್ತಿ ಮುಂದುವರಿಕೆ
ಮಾಹಿತಿ ಮತ್ತು ಪ್ರಸಾರ ಖಾತೆಯಿಂದ ನೀಡಲಾಗುವ ರಾಷ್ಟ್ರೀಯ ಸಿನೆಮಾ ಪ್ರಶಸ್ತಿಗಳು, ಅಂತಾರಾಷ್ಟ್ರೀಯ ಮಕ್ಕಳ ಸಿನೆಮಾ ಪ್ರಶಸ್ತಿಗಳು, ಭಾರತ ಚಲನಚಿತ್ರೋತ್ಸವ ಪ್ರಶಸ್ತಿಗಳ ಅಡಿಯಲ್ಲಿ ಬರುವಂಥವುಗಳನ್ನೂ ಕಡಿತಗೊಳಿಸಲು ಸೂಚಿಸಲಾಗಿದೆ. ಅಂದರೆ ದೂರದರ್ಶನ ರಾಷ್ಟ್ರೀಯ ಪ್ರಶಸ್ತಿ, ರಾಷ್ಟ್ರೀಯ ಸಮುದಾಯ ರೇಡಿಯೋ ಪ್ರಶಸ್ತಿ, ಎಫ್ಟಿಐಐ ವಿದ್ಯಾರ್ಥಿಗಳ ಪ್ರಶಸ್ತಿ ಮತ್ತು ಆಕಾಶವಾಣಿ ಪ್ರಶಸ್ತಿಯನ್ನು ಸ್ಥಗಿತಗೊಳಿಸಲು ಸೂಚನೆ ನೀಡಲಾಗಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಜತೆಗೆ ಅಂತಾರಾಷ್ಟ್ರೀಯ ಸಿನೆಮಾ ಪ್ರಶಸ್ತಿ, ಮುಂಬಯಿ ಅಂತಾರಾಷ್ಟ್ರೀಯ ಸಿನೆಮಾ ಪ್ರಶಸ್ತಿಯ ನಗದು ಬಹುಮಾನ ನಿಲ್ಲಿಸಲು ಸೂಚಿಸಲಾಗಿದೆ. ಆದರೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಮುಂದುವರಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next