Advertisement

ಮತದಾನ ಮಾಡದವರಿಗೆ ಸೌಲಭ್ಯ ನಿರಾಕರಣೆ ಚಿಂತನ

03:08 PM Mar 12, 2018 | Team Udayavani |

ಬೀದರ: ಮತದಾನ ಒಂದು ಸಾಂವಿಧಾನಿಕ ಹಕ್ಕಾಗಿದ್ದು ಪ್ರತಿ ಭಾರತೀಯನ ಕರ್ತವ್ಯವೂ ಹೌದು. ಆದರೆ ಜನ ನಿರಾಸಕ್ತಿಯಿಂದ ಮತದಾನ ಮಾಡದಿದ್ದರೆ ಅಂಥವರಿಗೆ ಸರ್ಕಾರದ ಎಲ್ಲ ಸೌಲಭ್ಯಗಳನ್ನು ನಿರಾಕರಿಸುವ ಕುರಿತು
ಚಿಂತನೆ ನಡೆದಿದೆ ಎಂದು ಜಿಪಂ ಸಿಇಒ ಡಾ| ಆರ್‌. ಸೆಲ್ವಮಣಿ ಹೇಳಿದರು.

Advertisement

ನಗರದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಪ್ರಜಾಪ್ರಭುತ್ವ ಮೌಲ್ಯಗಳ ಜಾಗೃತಿಗಾಗಿ ಚುನಾವಣೆ ನಿಮಿತ್ತ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಬಹುಭಾಷಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು, ಹಿಂದಿಗಿಂತ ಈಗ ಮತದಾನದ ಪ್ರಮಾಣ ಹೆಚ್ಚಾದರೂ ಪೂರ್ಣಪ್ರಮಾಣದ
ಗುರಿ ತಲುಪಲಾಗುತ್ತಿಲ್ಲ. ಮತದಾರರ ದಿನಾಚರಣೆ ಸೇರಿದಂತೆ ಅನೇಕ ರೀತಿಯ ಪ್ರಚಾರ ಕಾರ್ಯಕ್ರಮ ಆಯೋಜಿಸಿದ್ದು ಬರುವ ದಿನಗಳಲ್ಲಿ ಈ ಪ್ರಕ್ರಿಯೆಗೆ ಹೊಸ ತಿರುವು ಬರಲಿ. ಅದಕ್ಕೆ ಸಾಹಿತಿ, ಕಲಾವಿದರ ನೆರವಿರಲಿ
ಎಂದರು.

ಸ್ವತ್ಛ ಭಾರತ ಮಿಷನ್‌ನ ನೋಡಲ್‌ ಅಧಿಕಾರಿ ಡಾ|ಗೌತಮ ಅರಳಿ ಮಾತನಾಡಿ, ಪ್ರಜ್ಞಾವಂತ ಸುಶೀಕ್ಷಿತ ಮತದಾರರ ನಿಷ್ಕಾಳಜಿಯಿಂದಲೆ ಮತದಾನದ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಸಲ ಮಹಿಳೆಯರು, ಮೊದಲ ಮತದಾರರಾದ ಯುವಕರು, ಅಂಗವಿಕಲರಿಗೆ ಹೆಚ್ಚು ಮಾಹಿತಿ ನೀಡಲಾಗುತ್ತಿದ್ದು, ಇವರೆಲ್ಲರಿಂದ ಶೇ. 100 ಮತದಾನ ಮಾಡಿಸುವ ಗುರಿ ಹೊಂದಲಾಗಿದೆ. ಮತ ಮಾರಿಕೊಳ್ಳುವ ಕೆಟ್ಟ ಪ್ರವೃತ್ತಿಯ ಸಂಗತಿಗಳೂ ಗಮನಕ್ಕೆ ಬಂದಿದ್ದು ದುರಂತದ ಸಂಗತಿಯೆಂದು ವಿಷಾದ ವ್ಯಕ್ತಪಡಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ನಾಯಕರನ್ನು ಆಯ್ಕೆ ಮಾಡಿಕೊಳ್ಳಲು
ಇರುವ ಮಹತ್ವದ ಅಸ್ತ್ರವೆಂದರೆ ಮತದಾನ. ಅದು ಉತ್ತಮ ಸಮಾಜ ನಿರ್ಮಾಣಕ್ಕೆ ಪೂರಕವಾಗಿ ನೆರವಾಗಬೇಕು ಎಂದರು.

ಶಾಂತಿಕಿರಣ ಚಾರಿಟೇಬಲ್‌ ಟ್ರಸ್ಟ್‌ನ ಅಧ್ಯಕ್ಷ ಚಂದ್ರಕಾಂತ ಪಾಟೀಲ, ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ
ಸುಕಾಲೆ ಮುಖ್ಯ ಅತಿಥಿಗಳಾಗಿದ್ದರು. ತಾಲೂಕು ಅಧ್ಯಕ್ಷ ಎಂ.ಎಸ್‌. ಮನೋಹರ ಪ್ರಾಸ್ತಾವಿಕವಾಗಿ ಮಾತನಾಡಿದರು.

Advertisement

ನಂತರ ನಡೆದ ಕವಿ ಗೋಷ್ಠಿಯಲ್ಲಿ ಓಂಕಾರ ಪಾಟೀಲ, ಡಾ| ವಜ್ರಾ ಪಾಟೀಲ, ವಿದ್ಯಾವತಿ ಬಲ್ಲೂರ, ಸಂಗಪ್ಪಾ ತೌಡೆ, ಸಾಧನಾ ರಂಜೋಳಕರ್‌, ಶ್ರೀದೇವಿ ಪಾಟೀಲ, ನಿತೇಶ್‌ ಶೇರಿಕಾರ, ಬಾಲಾಜಿ ಕುಂಬಾರ, ಶರಣಬಸವ ಲಂಗೋಟಿ, ಸುನೀತಾ ದಾಡಗಿ, ಶಾಮರಾವ್‌ ನೆಲವಾಡೆ, ನಾಗಶೆಟ್ಟಿ ಪಾಟೀಲ, ಪುಣ್ಯಾವತಿ ವಿಸಾಜಿ, ಕಸ್ತೂರಿ ಪಟಪಳ್ಳಿ ಮೊದಲಾದವರು ಕವನ ವಾಚನ ಮಾಡಿದರು. ನಿರ್ಣಾಯಕರಾಗಿ ಸಾಹಿತಿಗಳಾದ ಎಂ.ಜಿ. ದೇಶಪಾಂಡೆ, ಚಂದ್ರಪ್ಪಾ ಹೆಬ್ಟಾಳ್ಕರ್‌, ಯೂಸೂಫ್‌ ರಹೀಮ್‌ ಬಿದ್ರಿ ಭಾಗವಹಿಸಿದ್ದರು.

ಶ್ರೀದೇವಿ ಪಾಟೀಲ, ವಿದ್ಯಾವತಿ ಬಲ್ಲೂರ ಮತ್ತು ಸಾಧನಾ ರಂಜೋಳಕರ್‌ ಕ್ರಮವಾಗಿ ಪ್ರಥಮ (2000 ರೂ.) ದ್ವಿತೀಯ (1000ರೂ.) ಹಾಗೂ ತೃತೀಯ (500ರೂ.) ಬಹುಮಾನ ಪಡೆದರು. ಸಾಹಿತಿ ಸಂಜೀವಕುಮಾರ ಅತಿವಾಳೆ, ಓಂಪ್ರಕಾಶ ದಡ್ಡೆ, ರಮೇಶ ಬಿರಾದಾರ, ಶಿವಶಂಕರ ಟೋಕರೆ ಮೊದಲಾದವರು ಇದ್ದರು. ಕಸ್ತೂರಿ ಪಟಪಳ್ಳಿ ನಿರೂಪಿಸಿದರು. ಡಾ| ಬಸವರಾಜ ಬಲ್ಲೂರ ಸ್ವಾಗತಿಸಿದರು. ಲಂಗೋಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next