Advertisement

ಅಂ.ರಾಷ್ಟ್ರೀಯ ಗುಣಮಟ್ಟದ ವಿವಿ ಸ್ಥಾಪನೆಗೆ ಚಿಂತನೆ

06:00 AM Sep 06, 2018 | Team Udayavani |

ಬೆಂಗಳೂರು : ಅಂತಾರಾಷ್ಟ್ರೀಯ ಗುಣಮಟ್ಟದ ವಿಶ್ವವಿದ್ಯಾಲಯವೊಂದನ್ನು ರಾಜ್ಯದಲ್ಲಿ ನಿರ್ಮಿಸುವ ಸಂಬಂಧ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ನೀಲನಕ್ಷೆ ಸಿದ್ಧಪಡಿಸಲು ಸಲಹೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಸೆಂಟ್ರಲ್‌ ಕಾಲೇಜು ಆವರಣದಲ್ಲಿ ಬುಧವಾರ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕಲಾ ವಿಭಾಗ ಉದ್ಘಾಟಿಸಿ ಮಾತನಾಡಿದ ಅವರು, ಇಸ್ರೇಲ್‌ನಲ್ಲಿ 17 ಎಕರೆ ಪ್ರದೇಶದಲ್ಲಿರುವ ವಿಶ್ವವಿದ್ಯಾಲಯವೊಂದರಲ್ಲಿ ಸಂಶೋಧನೆ ಸಹಿತವಾಗಿ ಎಲ್ಲ ವ್ಯವಸ್ಥೆಯೂ ಅಚ್ಚುಕಟ್ಟಾಗಿದೆ ಮತ್ತು ಶಿಕ್ಷಣ ಗುಣಮಟ್ಟವೂ ಉತ್ಕೃಷ್ಟವಾಗಿದೆ. ರಾಜ್ಯದಲ್ಲೂ ಒಂದು ಅಂತಾರಾಷ್ಟ್ರೀಯ ಗುಣಮಟ್ಟದ ವಿಶ್ವವಿದ್ಯಾಲಯದ ಸ್ಥಾಪಿಸಬೇಕೆಂಬ ಯೋಚನೆ ಇದೆ. ಇದಕ್ಕಾಗಿ ಕೆಲವು ವಿಶ್ವವಿದ್ಯಾಲಯದ ಕುಲಪತಿಗಳಿಂದ ನೀಲನಕ್ಷೆ ಸಿದ್ಧಪಡಿಸಲು ಸಲಹೆ ನೀಡಿದ್ದೇನೆ ಎಂದು ತಿಳಿಸಿದರು.

ಬೆಂಗಳೂರು ಕೇಂದ್ರ ವಿವಿಗೆ ಬೇಕಾದ ಎಲ್ಲ ರೀತಿಯ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ. 43 ಎಕರೆ ಪ್ರದೇಶದಲ್ಲಿ ನಗರ ಕೇಂದ್ರೀತ ವಿಶ್ವವಿದ್ಯಾಲಯ ಮಾಡಬೇಕೆಂಬ ಕುಲಪತಿಗಳ ಆಶಯ ಈಡೇರಿಸಲು ಸರ್ಕಾರ ಅಗತ್ಯ ನೆರವು ಒದಗಿಸಲಿದೆ ಎಂದು ಹೇಳಿದರು.

ಬೆಂಗಳೂರು ಕೇಂದ್ರ ವಿವಿಯನ್ನು ಜಾಗತಿಕ ಮಟ್ಟಕ್ಕೆ ಏರಿಸಲು 600 ಕೋಟಿ ರೂ.ಗಳ ಅನುದಾನ ಕೋರಿದ್ದಾರೆ. ರಾಜ್ಯ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಆದರೆ ಕೆಲಸ ನಿರ್ವಹಣೆ ಮಾಡುವವರ ಕಲ್ಪನೆ ಮತ್ತು ಅನುಷ್ಠಾನದಲ್ಲಿ ಬದ್ಧತೆ ಇರಬೇಕಾಗುತ್ತದೆ. 12 ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ 181 ಪ್ರಥಮ ದರ್ಜೆ ಕಾಲೇಜು ಸ್ಥಾಪಿಸಿದ್ದೇವು. ಸರ್ಕಾರಿ ಕಾಲೇಜುಗಳಲ್ಲಿ ವಿಜ್ಞಾನ ಮತ್ತು ಕಂಪ್ಯೂಟರ್‌ ಸೈನ್ಸ್‌ ವಿಭಾಗಕ್ಕೆ ಆದ್ಯತೆ ನೀಡಿ, ಉಪನ್ಯಾಸಕರ ನೇಮಕವೂ ಮಾಡಿದ್ದೇವು ಎಂದು ವಿವರಿಸಿದರು.

ಶಿಕ್ಷಣಕ್ಕೆ ಆದ್ಯತೆ:
ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ರಾಜ್ಯದ ಬಡ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಗಳು ಶೇ.90-95ರಷ್ಟು ಅಂಕ ಪಡೆದು ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಆರ್ಥಿಕ ಬಲ ತುಂಬಲು ಕಾರ್ಯಕ್ರಮವೊಂದನ್ನು ಸರ್ಕಾರದಿಂದಲೇ ರೂಪಿಸುವ ಬಗ್ಗೆಯೂ ಯೋಚನೆ ಮಾಡುತ್ತಿದ್ದೇವೆ ಎಂದರು.

Advertisement

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಶಾಸಕ ಆರ್‌.ರೋಷನ್‌ ಬೇಗ್‌, ಬೆಂಗಳೂರು ಕೇಂದ್ರ ವಿವಿ ಕುಲಪತಿ ಪ್ರೊ.ಎಸ್‌.ಜಾಫೆಟ್‌, ಬೆಂಗಳೂರು ವಿವಿ ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎನ್‌.ನಾಗಾಂಬಿಕಾ ದೇವಿ ಮೊದಲಾದವರು ಇದ್ದರು.

ಇತ್ತೀಚಿನ ವರ್ಷಗಳಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳ ನೇಮಕಾತಿಯಲ್ಲಿ ರಾಜಕಾರಣ ಹೆಚ್ಚಾಗುತ್ತಿದೆ. ಈ ಪರಿಸ್ಥಿತಿ ಎಲ್ಲರಿಗೂ ತಿಳಿದಿದೆ. ಕುಲಪತಿ ನೇಮಕದಲ್ಲಿ ಗುಣಮಟ್ಟ ಇರಬೇಕು. ಸಿಂಡಿಕೇಟ್‌ ಹಾಗೂ ಸೆನೆಟ್‌ ನೇಮಕಾತಿಯಲ್ಲಿ ಸರ್ಕಾರದ ಹಸ್ತಕ್ಷೇಪ ಇರಬಾರದು ಹಾಗೂ ರಾಜಕಾರಣವೂ ನಡೆಯಬಾರದು. ಈಗ ಇರುವ ಪದ್ಧತಿ ಬದಲಿಸಬೇಕು. ಶಿಕ್ಷಣ ತಜ್ಞರ ಸಮಿತಿ ಮಾಡಿ ಆ ಮೂಲಕ ಕುಲಪತಿಗಳ ನೇಮಕಾತಿ ನಡೆಯುವಂತಾಗಬೇಕು. ಸಮ್ಮಿಶ್ರ ಸರ್ಕಾರದ ಇತಿ ಮಿತಿಯೊಳಗೆ ಎಷ್ಟು ಸಾಧ್ಯವೋ ಅಷ್ಟು ಬದಲಾವಣೆ ತರುತ್ತೇವೆ.
– ಎಚ್‌.ಡಿ. ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next