ಬಾಗಲಕೋಟೆ: ಜಿಲ್ಲೆಯ ಪ್ರವಾಸೋದ್ಯಮ ತಾಣಗಳು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ್ದರೂ ಕುಂಟಿತಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಜಿ. ಶಾಂತಾರಾಮ ಹೇಳಿದರು. ಗುರುವಾರ ಜಿಪಂ. ಸಭಾಭವನದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನ್ಯೂಯಾರ್ಕ್‌ನ 800 ವರ್ಷಗಳ ಹಿಂದಿನ ಪ್ರವಾಸಿತಾಣ ಎಲ್ಲೆಡೆ ಹೆಸರು ಮಾಡಿದೆ. ಆದರೆ 1800 ವರ್ಷಗಳ ಹಿಂದಿನ ಇತಿಹಾಸ ಹೊಂದಿದ ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳಿದ್ದರೂ ಪ್ರವಾಸಿಗರ ಕೊರತೆ ಎದ್ದು ಕಾಣುತ್ತಿದೆ. ಪಕ್ಕದ ಹಂಪಿಯನ್ನು ಗಮನಿಸಿದಾಗ ಅಲ್ಲಿ ಬರುವಷ್ಟು ಪ್ರವಾಸಿಗರು ಬರದಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದರು.
ಜಿಲ್ಲೆಯ ಐತಿಹಾಸಿಕ ತಾಣಗಳಾದ ಪಟ್ಟದಕಲ್ಲು, ಬಾದಾಮಿ, ಬನಶಂಕರಿ, ಐಹೊಳೆ, ಮಹಾಕೂಟ ಮುಂತಾದವುಗಳನ್ನು ಪ್ರವಾಸಿಗರಿಗೆ ಪ್ರವಾಸಿ ಯಾತ್ರಾ ಸಂಚಾರ ನಿರ್ಮಿಸಿ ಪ್ರತಿಯೊಂದು ಐತಿಹಾಸಿಕ ತಾಣಗಳಲ್ಲಿ ಪ್ರವಾಸಿಗರಿಗೆ ಅನುಕೂಲಕರ ವಾತಾವರಣ ನಿರ್ಮಿಸುವುದು ಅವಶ್ಯವಾಗಿದೆ ಎಂದು ತಿಳಿಸಿದರು.
ಈ ಕುರಿತು ಪ್ರವಾಸೋದ್ಯಮ ಅಭಿವೃದ್ಧಿ ಚಿಂತಕರ ಜೊತೆಗೂಡಿ ಸಮರ್ಪಕವಾದ ರಸ್ತೆ, ರೈಲು, ವಿಮಾನ ಸಂಪರ್ಕ, ವಸತಿ, ಪರಿಸರ ಹಾಗೂ ರಕ್ಷಣೆ ಇವೆಲ್ಲವುಗಳು ಪ್ರತಿಯೊಂದು ಐತಿಹಾಸಿಕ ಕೇಂದ್ರಗಳಲ್ಲಿ ದೊರೆಯುವಂತೆ ಕ್ರಮ ಕೈಗೊಳ್ಳುವ ಚಿಂತನೆ ಇದೆ ಎಂದರು. ಪ್ರತಿಯೊಂದು ಐತಿಹಾಸಿಕ ಸ್ಥಾನಗಳಲ್ಲಿ ಸ್ಥಳೀಯರಿಗೆ ಅದರ ಬಗ್ಗೆ ಸಮರ್ಪಕವಾದ ತಿಳಿವಳಿಕೆ ಇಲ್ಲದ್ದರಿಂದ ಪ್ರವಾಸೋದ್ಯಮಕ್ಕೆ ಅಂತವರನ್ನು ಸೇರಿಸಿಕೊಳ್ಳುವುದರ ಜೊತೆಗೆ ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸಿಕೊಟ್ಟು, ಇದರಿಂದ ಆ ಕ್ಷೇತ್ರದ ಮಹಿಮೆ ಅವರಿಗೂ ತಿಳಿಯಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಪ್ರವಾಸಿ ಸ್ನೇಹಿ ಹಾಗೂ ಸ್ಥಳೀಯ ಸ್ನೇಹಿ ಆದಲ್ಲಿ ಮಾತ್ರ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸಮಾಲೋಚಕರ ತಂಡ ಕೂಡಿ ಕ್ರಿಯಾಯೋಜನೆ ರೂಪಿಸಲಾಗಿದೆ. ಐಹೊಳೆ ಸ್ಥಳಾಂತರಕ್ಕೆ ಅಕ್ಟೋಬರ 1ರಂದು ಗ್ರಾಮಸಭೆ ನಡೆಸಲಾಗುತ್ತಿದೆ ಎಂದರು.
ನಗರದ ಎಸ್.ಆರ್. ನರಸಾಪುರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಜಿ.ಬಿ.ಕುಲಕರ್ಣಿ ಮಾತನಾಡಿ, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಜನರ ಇಚ್ಚಾಶಕ್ತಿ ಕೊರತೆಯಿದೆ. 6 ಶತಮಾನದ ಹಿಂದಿನ ಇತಿಹಾಸವನ್ನು ಅವಲೋಕಿಸಿದಾಗ ಐತಿಹಾಸಿಕ ಐಹೊಳೆ ಗ್ರಾಮದಲ್ಲಿ 500 ವರ್ತಕ ಸಂಘಗಳಿದ್ದು, ಪ್ರತಿದಿನ ನಾನಾ ಕಡೆಯಿಂದ ನೂರಾರು ವ್ಯಾಪಾರಸ್ಥರು ಬರುತ್ತಿದ್ದರು. ಅಲ್ಲದೇ ನಾಗರ, ದ್ರಾವಿಡರ ಹಾಗೂ ವೇಸರ ಶೈಲಿಯ 125 ಪ್ರಮುಖ ದೇವಾಲಯಗಳಿಂದ ಕೂಡಿದೆ. ಅವುಗಳನ್ನು ಸಂಪೂರ್ಣವಾಗಿ ಗುರುತಿಸಲು ಸಾಧ್ಯವಾಗುತ್ತಿಲ್ಲ. ಐಹೊಳೆಯನ್ನು ಸ್ಥಳಾಂತರಿಸುವ ಮೂಲಕ ಮರುಜೀವ ನೀಡುವ ಅವಶ್ಯಕತೆಯಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಪಂ ಅಧ್ಯಕ್ಷ ಚನ್ನನಗೌಡರ ಪರನಗೌಡರ ಮಾತನಾಡಿ ಪ್ರವಾಸೋದ್ಯಮ ಅಭಿವೃದ್ದಿ ಕೇವಲ ದಿನಾಚರಣೆಯಾಗದೇ ಇದರ ಕುರಿತು ಮೇಲಿಂದ ಮೇಲೆ ವಿಚಾರ ಸಂಕಿರಣಗಳು, ಪ್ರವಾಸಿ ತಾಣಗಳಿರುವ ಸ್ಥಳೀಯರ ಸಹಕಾರ ಹಾಗೂ ಭಾಗವಹಿಸುವಿಕೆ ಅವಶ್ಯವಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುವಂತಹ ಪರಿಸರ ನಿರ್ಮಿಸುವ ಕಾರ್ಯ ಅಗತ್ಯವಾಗಿ ಮಾಡಬೇಕಾಗಿದೆ. ಇಂದಿನ ಅಭಿವೃದ್ಧಿಗೊಂಡ ಯಾಂತ್ರಿಕ ಕೈಗಾರಿಕೆಗಳಿಂದಲೂ ನಿರ್ಮಿಸಿದಂತಹ ಕಲ್ಲಿನಲ್ಲಿ ಕೆತ್ತನೆಯ ಕಾರ್ಯ ಸಾವಿರಾರು ವರ್ಷಗಳ ಹಿಂದೆಯೇ ಆಗಿದ್ದನ್ನು ಗಮನಿಸಿದಾಗ ಅಂದಿನ ನೈಪುಣ್ಯತೆ ಇಂದಿನ ವಿಜ್ಞಾನಿಗಳಿಗೆ ಸವಾಲಾಗಿದೆ. ಅಂತಹ ಅಭಿವೃದ್ಧಿ ಐತಿಹಾಸಿಕ ತಾಣಗಳ ಅಭಿವೃದ್ಧಿ ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಚರ್ಚಾ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಜಿಪಂ ಯೋಜನಾ ನಿರ್ದೇಶಕ ವಿ.ಎಸ್. ಹಿರೇಮಠ ವೇದಿಕೆಯಲ್ಲಿದ್ದರು. ಪ್ರವಾಸೋದ್ಯಮ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಎಂ.ಎನ್.ಮೇಲಿನಮನಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗಮೇಶ ಸಣ್ಣತಂಗಿ ನಿರೂಪಿಸಿದರು.