Advertisement

AI: ವೈದ್ಯ ಶಿಕ್ಷಣದಲ್ಲಿ ಎಐ ಬಳಕೆ ಬಗ್ಗೆ ಚಿಂತನೆ

12:23 AM Oct 08, 2023 | Team Udayavani |

ಬೆಂಗಳೂರು: ಕೃತಕ ಬುದ್ಧಿಮತ್ತೆ (ಎಐ)ಆಧಾರಿತ ಚಾಟ್‌ ಜಿಪಿಟಿಯನ್ನು ತಮ್ಮ ವೈದ್ಯಕೀಯ ಶಿಕ್ಷಣದಲ್ಲಿ ಬಳಸುವ ಸಾಧಕ ಬಾಧಕಗಳ ಬಗ್ಗೆ ಪರಾಮರ್ಶಿಸಲು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ (ಆರ್‌ಜಿಯುಎಚ್‌ಎಸ್‌) ಚಿಂತನೆ ನಡೆಸಿದೆ.

Advertisement

ಚಾಟ್‌ ಜಿಪಿಟಿ ಅಧಿಕೃತವಾಗಿ ನಮ್ಮ ಶಿಕ್ಷಣ ವ್ಯವಸ್ಥೆಯೊಳಗೆ ಅವಕಾಶ ಪಡೆಯದಿದ್ದರೂ ವಿದ್ಯಾರ್ಥಿಗಳು ಚಾಟ್‌ ಜಿಪಿಟಿ ಬಳಸುತ್ತಿರುವ ಹಲವು ಪ್ರಕರಣಗಳು ಬಹಿರಂಗವಾಗಿದೆ. ಈಗ ಸುಮಾರು 700ಕ್ಕೂ ಹೆಚ್ಚು ವೈದ್ಯಕೀಯ, ದಂತ ವೈದ್ಯಕೀಯ, ನರ್ಸಿಂಗ್‌, ಫಾರ್ಮಸಿ, ಹೋಮಿಯೋಪಥಿ, ಯುನಾನಿ, ನ್ಯಾಚುರೋಪಥಿ, ಯೋಗ ಶಿಕ್ಷಣ, ಫಿಜಿಯೋಥೆರಪಿ ಮತ್ತು ಅರೆವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡಿರುವ ಆರ್‌ಜಿಯುಎಚ್‌ಎಸ್‌ ಸಹ ತನ್ನ ಶಿಕ್ಷಣ ಕ್ರಮದಲ್ಲಿ ಚಾಟ್‌ ಜಿಪಿಟಿ ಬಳಕೆಯ ಕಾರ್ಯಸಾಧ್ಯತೆಗಳನ್ನು ಪರಿಶೀಲಿಸಲು ಮುಂದಾಗಿದೆ.

ಆರ್‌ಜಿಯುಎಚ್‌ಎಸ್‌ನ ಉಪ ಕುಲಪತಿ ಡಾ| ಎಂ. ಕೆ. ರಮೇಶ್‌, ಅವರು ನಮ್ಮ ಪಠ್ಯಕ್ರಮದಲ್ಲಿ ಎಐ ಬಳಕೆ ಬಗ್ಗೆ ಈ ವರೆಗೆ ಯಾವುದೇ ಚಿಂತನ ಮಂಥನ ನಡೆಸಿಲ್ಲ. ಆದರೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಪರಾಮರ್ಶೆ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.

ಪರೀಕ್ಷಾ ಅಕ್ರಮಕ್ಕೆ ಎಐ ಚುಚ್ಚುಮದ್ದು!
ಆರ್‌ಜಿಯುಎಚ್‌ಎಸ್‌ ತನ್ನೆಲ್ಲ ಪರೀಕ್ಷೆಗಳನ್ನು ಆಡಿಯೋ ಸಹಿತ ವೆಬ್‌ ಸ್ಟ್ರೀಮ್‌ ಮಾಡಲು ನಿರ್ಧರಿಸಿದ್ದು, ತನ್ಮೂಲಕ ಪರೀಕ್ಷಾ ಅಕ್ರಮಗಳಿಗೆ ಲಗಾಮು ಹಾಕಲು ನಿರ್ಧರಿಸಿದೆ.

ಈ ಬಗ್ಗೆ ಮಾಹಿತಿ ನೀಡಿದ ಡಾ| ರಮೇಶ್‌, ಈ ವರ್ಷದ ಡಿಸೆಂಬರ್‌ನಿಂದ ನಡೆಯುವ ಪರೀಕ್ಷೆಗಳಿಗೆ ಆಡಿಯೋ ಸಹಿತ ವೆಬ್‌ ಸ್ಟ್ರೀಮಿಂಗ್‌ ನಡೆಯಲಿದೆ. ಪರೀಕ್ಷಾ ಕೇಂದ್ರಗಳಲ್ಲಿನ ಆಡಿಯೋವನ್ನು ವೀಡಿಯೋ ಸಹಿತ ನಮ್ಮ ಪ್ರಧಾನ ಕಚೇರಿಯಲ್ಲಿ ಕುಳಿತು ನೈಜ ಸಮಯದಲ್ಲಿ ಪರಿಶೀಲಿಸಲಾಗುತ್ತದೆ. ಪರೀಕ್ಷಾ ಕೊಠಡಿಯಲ್ಲಿ ಮೌಖೀಕವಾಗಿ ಹೇಳಿ ಬರೆಸುವ ಪ್ರಕರಣಗಳಿಗೆ ಕಡಿವಾಣ ಹಾಕಲು ನಾವು ಈ ಕ್ರಮ ಕೈಗೊಳ್ಳುತ್ತಿದ್ದೇವೆ. ಹಾಗೆಯೇ ಪರೀಕ್ಷಾ ಕೊಠಡಿಯಿಂದ ಹೊರಗಿನ ವ್ಯಕ್ತಿಗಳ ಜತೆ ಸಂವಹನ ನಡೆಸಿದರೆ ಅದನ್ನು ಪತ್ತೆ ಹಚ್ಚಲು ಎಐ ನೆರವಾಗಲಿದೆ ಎಂದು ಹೇಳಿದ್ದಾರೆ.

Advertisement

ಬಹುಶಃ ಈ ವ್ಯವಸ್ಥೆ ಜಾರಿಗೊಳಿಸುತ್ತಿರುವ ಮೊದಲ ವೈದ್ಯಕೀಯ ವಿವಿ ನಮ್ಮದು. ನಮ್ಮಲ್ಲಿ ಸಂಯೋಜನೆಗೊಂಡ ಎಲ್ಲ ಕಾಲೇಜುಗಳಲ್ಲಿ ಈ ಕ್ರಮ ಜಾರಿಯಾಗಲಿದೆ. ಅದೇ ರೀತಿ ಪರೀಕ್ಷಾ ಕೊಠಡಿ ಪ್ರವೇಶಕ್ಕೆ ಮುಂಚಿತವಾಗಿ ವಿದ್ಯಾರ್ಥಿಗಳ ಫೋಟೋ ತೆಗೆಯಲಾಗುವುದು. ಈ ಪೋಟೋ ವಿವಿಯ ಬಳಿಯಿರುವ ಪೋಟೋದ ಜತೆ ಹೋಲಿಕೆಯಾಗುತ್ತದೆಯೇ ಎಂದು ಎಐ ಬಳಸಿ ಪರಿಶೀಲಿಸಲಾಗುತ್ತದೆ. ಈ ಮೂಲಕ ನಕಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ ತತ್‌ಕ್ಷಣ ಪತ್ತೆ ಹಚ್ಚಬಹುದು ಎಂದು ಡಾ| ರಮೇಶ್‌ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next