Advertisement

“ಸರ್ವಋತು ರಸ್ತೆ’ಗಳ ಅಭಿವೃದ್ಧಿಗೆ ಚಿಂತನೆ 

06:15 AM Jun 22, 2018 | |

ಬೆಂಗಳೂರು: ಅವಿಭಜಿತ ದ.ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳನ್ನು “ಸರ್ವಋತು ರಸ್ತೆ’ಗಳನ್ನಾಗಿ ಅಭಿವೃದ್ಧಿಪಡಿಸಲು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಮಾದರಿಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಗಂಭೀರವಾಗಿ ಪರಿಶೀಲಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ತಿಳಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಂಗಳೂರು ಮತ್ತು ಉಡುಪಿ ಜಿಲ್ಲೆಗೆ ಶಿರಾಡಿ,ಚಾರ್ಮಡಿ, ಸಂಪಾಜೆ ಮತ್ತು ಬಿಸಲೆ ಘಾಟಿಯಿಂದ ಪ್ರವೇಶಿಸಬೇಕು. ಮಳೆಗಾಲದಲ್ಲಿ ಈ ನಾಲ್ಕೂ ರಸ್ತೆಗಳಲ್ಲಿ ಭೂಕುಸಿತ ಸಮಸ್ಯೆ ಹೆಚ್ಚಾಗುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅವಶ್ಯಕತೆಯಿದೆ. 

ಶಿರಾಡಿಘಾಟ್‌ನಲ್ಲಿ ಸುರಂಗ ಕೊರೆದು ರಸ್ತೆ ನಿರ್ಮಿಸುವ 250 ಕೋಟಿ ರೂ.ಅಂದಾಜಿನ ಪ್ರಸ್ತಾವನೆಯೂ ಬಹಳ ವರ್ಷಗಳಿಂದ ಇದೆ. ಸರ್ವಋತು ರಸ್ತೆಗಳ ನಿರ್ಮಾಣಕ್ಕೆ ಸಮಗ್ರವಾದ ಯೋಜನೆ ತಯಾರಿಸುವ ಅವಶ್ಯಕತೆಯಿದೆ. ಇದಕ್ಕೆ ದೊಡ್ಡ ಮೊತ್ತದ ಹಣ ಬೇಕಾಗುತ್ತದೆ. ವಿಶ್ವಬ್ಯಾಂಕ್‌, ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ ಸೇರಿದಂತೆ ಜಾಗತಿಕ ಹಣಕಾಸು ಸಂಸ್ಥೆಗಳ ನೆರವು ಪಡೆದುಕೊಳ್ಳಬೇಕಾಗುತ್ತದೆ. ಸುರಂಗ ರಸ್ತೆ ನಿರ್ಮಾಣ ಮಾಡಿದ ಯಶಸ್ವಿ ಪ್ರಯೋಗಗಳು ಚೀನಾ ದೇಶದಲ್ಲಿ ನಡೆದಿವೆ. ಅವಶ್ಯಕತೆ ಬಿದ್ದರೆ, ಮುಖ್ಯಮಂತ್ರಿ ಅನುಮತಿ ಪಡೆದು ಚೀನಾಕ್ಕೆ ತೆರಳಿ ಅಧ್ಯಯನ ನಡೆಸಲಾಗುವುದು ಎಂದರು.

ಕೊಡಗು ಜಿಲ್ಲೆ ಮಾರ್ಗವಾಗಿ ಕೇರಳ ಮತ್ತು ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ಇದರಿಂದಾಗಿ 150 ಕಿ.ಮೀ. ಸುತ್ತಿ ಪ್ರಯಾಣಿಸಬೇಕಾಗಿದೆ. 15 ದಿನಗಳಲ್ಲಿ ಈ ರಸ್ತೆ ದುರಸ್ತಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಡಿಕೇರಿಯಿಂದ ಸಂಪಾಜೆವರೆಗಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ.

ಸಂಪಾಜೆಯಿಂದ ಮಾಣಿವರೆಗೆ, ಬಿಳಕೆರೆ-ಹಾಸನ-ಬೇಲೂರು ರಸ್ತೆ, ತುಮ ಕೂರು-ಶಿವಮೊಗ್ಗ ರಸ್ತೆಯನ್ನು ಮಾಸಾಂತ್ಯಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗುವುದು.

Advertisement

ಸಿಗಂದೂರು ಸೇತುವೆ ನಿರ್ಮಾಣಕ್ಕೆ 560 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next