ತೆಕ್ಕಟ್ಟೆ (ಬೇಳೂರು): ಮುಂದುವರಿದ ವೇಗದ ಬದುಕಿನಲ್ಲಿ ನಮ್ಮ ಭಾರತೀಯ ಧರ್ಮ ಮತ್ತು ಸಂಸ್ಕೃತಿಗಳನ್ನು ಮರೆಯುತ್ತಿದ್ದು ಪಾಶ್ಚಾತ್ಯ ಸಂಸ್ಕೃತಿಯೆಡೆಗೆ ಯುವ ಸಮುದಾಯಗಳು ಆಕರ್ಷಿತರಾಗುತ್ತಿದ್ದಾರೆ ಈ ನಿಟ್ಟಿನಲ್ಲಿ ಇಂತಹ ಧಾರ್ಮಿಕ ನೆಲೆಗಟ್ಟಿನಲ್ಲಿ ಆಚರಿಸುವ ಗ್ರಾಮೀಣ ಸೊಗಡಿನ ವಿಶಿಷ್ಟ ಸಂಪ್ರದಾಯಗಳ ಬಗ್ಗೆ ನಮ್ಮ ಮುಂದಿನ ಪೀಳಿಗೆಗೆ ಕೂಡಾ ಅರಿವು ಮೂಡಿಸುವ ಕಾರ್ಯವಾಗಬೇಕಾಗಿದೆ ಎಂದು ಹಲವರಿ ಮಠದ ಪೀಠಾಧಿಪತಿ ಯೋಗಿ ಫೀರ್ ಶ್ರೀ ಜಗನಾಥ್‌ಜೀ ನುಡಿದರು.
ಅವರು ಆ.13 ರವಿವಾರಂದು ಬೇಳೂರು ಸ್ಫೂರ್ತಿಧಾಮದಲ್ಲಿ ಅಖೀಲ ಕರ್ನಾಟಕ ನಾಥಪಂಥ ಜೋಗಿ ಸಮಾಜ ಸಮಿತಿ (ರಿ) ಹಾಗೂ ರೋಟರಿ ಕ್ಲಬ್ ತೆಕ್ಕಟ್ಟೆ ಇವರ ಜಂಟಿ ಆಶ್ರಯದಲ್ಲಿ ನಡೆದ ಆಷಾಢದಲ್ಲಿ ಒಂದು ದಿನ ಎನ್ನುವ ಕಾರ್ಯಕ್ರಮವನ್ನು ಉದ್ಧೇಶಿಸಿ ಆಶೀರ್ವಚಿಸಿದರು.
ಪುರಾತನ ಕಾಲದಿಂದಲೂ ಆತ್ಮಶುದ್ಧಿಗಾಗಿ ಭಾರತೀಯರು ಯೋಗ ಮತ್ತು ಧ್ಯಾನ, ಆಚಾರ ವಿಚಾರಗಳ ಜತೆಗೆ ಕಾಲಮಾನಕ್ಕೆ ಹೊಂದಿಕೊಂಡು ಸಂಸ್ಕಾರಯುತವಾದ ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದರು. ಬದಲಾದ ಕಾಲದಲ್ಲಿ ಯುವ ಸಮುದಾಯಗಳು ಮೊಬೈಲ್ ವಾಟ್ಸ್ ಆ್ಯಪ್ ಫೇಸ್‌ಬುಕ್‌ಗಳ ದಾಸರಾಗಿ ಮನಸ್ಸು ಸಂಕುಚಿತಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಪುರಾತನ ಧರ್ಮ ಸಂಸ್ಕೃತಿಗಳ ಉಳಿವಿನ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ ಎಂದು ನುಡಿದರು.
ಅಖೀಲ ಕರ್ನಾಟಕ ನಾಥಪಂಥ ಜೋಗಿ ಸಮಾಜ ಹಿರಿಯರಾದ ರವೀಂದ್ರ ಜೋಗಿ ಜೋಡು ಕೋಣಗಳಿಗೆ ದೀಪಾರತಿ ಬೆಳಗಿಸುವ ಮೂಲಕ ಗ್ರಾಮೀಣ ಸೊಗಡಿನ ಆಷಾಢದಲ್ಲಿ ಒಂದು ದಿನ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಜೋಗಿ ಸಮಾಜದ ಸಾಧಕ ಮಹಿಳೆಯರಾದ ಲಕ್ಷ್ಮೀ ಎನ್.ಜೋಗಿ ಕಾರ್ಕಳ, ಯಶೋದಮ್ಮ ಜೋಗಿ ಸಾಗರ, ಪಾರ್ವತಮ್ಮ ಜೋಗಿ ಸಾಗರ, ಭವಾನಿ ಜೋಗಿ ಮಂಗಳೂರು, ಸುಶೀಲಾ ಜೋಗಿ ಮಂಗಳೂರು, ಗೌರಮ್ಮ ಜೋಗಿ ಕುಮಟಾ, ವಿಮಲಾ ಜೋಗಿ ಉಡುಪಿ, ನಾಗರತ್ನಾ ಬಳೆಗಾರ ಮೇಗರಹಳ್ಳಿ ಇವರನ್ನು ಗುರುತಿಸಿ ಸಮ್ಮಾನಿಸಲಾಯಿತು. ಹಾಗೂ ಗೋಪಾಲ ಪೂಜಾರಿ ಇವರ ಮಗುವಿನ ಚಿಕಿತ್ಸೆಗಾಗಿ ಸಹಾಯಧನ ವಿತರಿಸಲಾಯಿತು.ಅಖೀಲ ಕರ್ನಾಟಕ ನಾಥಪಂಥ ಜೋಗಿ ಸಮಾಜ ಸಮಿತಿ (ರಿ) ಇದರ ಅಧ್ಯಕ್ಷ ಡಾ| ಕೇಶವ ಕೋಟೇಶ್ವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ತೆಕ್ಕಟ್ಟೆ ಇದರ ಅಧ್ಯಕ್ಷ ಸುರೇಶ್ ಬೇಳೂರು , ಕರ್ನಾಟಕ ನೀರಾವರಿ ನಿಗಮ ಧಾರವಾಡ ಇಲ್ಲಿನ ಮುಖ್ಯ ಆಡಳಿತಾಧಿಕಾರಿ ಹಾಗೂ ಮುಖ್ಯ ಲೆಕ್ಕಾಧಿಕಾರಿ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ , ಜಿ.ಪಂ.ಸದಸ್ಯ ರಾಘವೇಂದ್ರ ಬಾರಿಕೆರೆ ಕೋಟ , ರೋಟರಿ ಕ್ಲಬ್ ತೆಕ್ಕಟ್ಟೆ ಇದರ ಕಾರ್ಯದರ್ಶಿ ಜಗದೀಶ್ ಎಚ್, ಜೋಗಿ ಸಮಾಜದ ಗೌರವಾಧ್ಯಕ್ಷ ಶಿವರಾಮ ಜೋಗಿ, ವಸಂತ ಎರ್ಮಾಳ್, ಡಾ| ಕೇಶವನಾಥ ಮಂಗಳೂರು, , ವಿಜಯ ಲಕ್ಷ್ಮೀ, ಎ.ಎಂ.ಬಳೆಗಾರ , ಪ್ರಭಾಕರ ಜೋಗಿ , ರೋಟರಿ ಕ್ಲಬ್ ತೆಕ್ಕಟ್ಟೆ ಇದರ ಸರ್ವ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗ್ರಾಮೀಣ ಆಟಗಳಾದ ಲಗೋರಿ, ಗೋಲಿ, ಕುಂಟೆ ಬಿಲ್ಲೆ , ಬೆನ್° ಚೆಂಡ್ , ಮರಕೋತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭತ್ತ ಕುಟ್ಟೋ ಹಾಡು, ಶೋಭಾನೆ ಹಾಡು, ಜೋಗುಳ ಹಾಡು, ಭಾವಗೀತೆ , ಜನಪದ ಗೀತೆಗಳು ಪ್ರದರ್ಶನಗೊಂಡವು.ಶೋಭಾ ರಮೇಶ್ ಜೋಗಿ ನಿರೂಪಿಸಿ , ವಂದಿಸಿದರು.