Advertisement

ತಿಂಗಳಾಡಿ: ವಾಹನ ಸವಾರರಿಗೆ ಸವಾಲಾದ ರಸ್ತೆ ಉಬ್ಬು

12:14 PM Oct 27, 2018 | |

ಕೆಯ್ಯೂರು: ಅವೈಜ್ಞಾನಿಕ ರೀತಿಯ ರಸ್ತೆ ಕಾಮಗಾರಿಯ ಪರಿಣಾಮ ಕುಂಬ್ರ ಬೆಳ್ಳಾರೆ ಮುಖ್ಯರಸ್ತೆಯ ತಿಂಗಳಾಡಿಯ ಮಸೀದಿ ಸಮೀಪದ ರಸ್ತೆಯಲ್ಲಿ ಉಬ್ಬು ನಿರ್ಮಾಣಗೊಂಡಿದ್ದು, ಇದು ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

Advertisement

ರಸ್ತೆ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲೇ ಕಂಟ್ರಾಕ್ಟ್ದಾರರಿಗೆ ಹಾಗೂ ಎಂಜಿನಿಯರ್‌ ಅವರಿಗೆ ಈ ಬಗ್ಗೆ ಗ್ರಾಮಸ್ಥರು ತಿಳಿಸಿದ್ದರೂ, ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ಸಮಸ್ಯೆ ಉಂಟಾಗಿದೆ. ಕುಂಬ್ರ ಬೆಳ್ಳಾರೆ ರಸ್ತೆಯಲ್ಲಿ ತ್ಯಾಗರಾಜನಗರದಿಂದ ತಿಂಗಳಾಡಿ ಮಸೀದಿ ತನಕ ಎರಡು ಕಡೆಗಳಲ್ಲಿ ರಸ್ತೆ ಎತ್ತರವನ್ನು ತಗ್ಗಿಸಿ ಸಮಯತಟ್ಟು ಮಾಡುವ ಕಾಮಗಾರಿ ನಡೆದಿದೆ. ನೇರವಾಗಿರುವ ರಸ್ತೆಯಲ್ಲಿ ಮಧ್ಯದಲ್ಲಿ ಎತ್ತರವಾಗಿದ್ದರೆ ಅದನ್ನು ಅಗೆದು ತೆಗೆದು ಸಮತಟ್ಟು ಮಾಡುವ ಕೆಲಸ ನಡೆದಿದೆ. ರಸ್ತೆಯ ಎತ್ತರದ್ದ ಜಾಗವನ್ನು ಮಾತ್ರ ಅಗೆದು ತೆಗೆದು ಡಾಮರು ಕಾಮಗಾರಿಗೊಳಿಸಲಾಗಿದೆ. ಈ ವೇಳೆ ರಸ್ತೆಯನ್ನು ಜೋಡಿಸುವ ಜಾಗದಲ್ಲಿ ಉಬ್ಬು ನಿರ್ಮಾಣಗೊಂಡಿದೆ.

ಎಂಜಿನಿಯರ್‌ ನೋಡಿದ್ದೇನು?
ರಸ್ತೆ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಕೆದಂಬಾಡಿ ಗ್ರಾ.ಪಂ. ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಹಾಗೂ ಕೆಲವು ಸದಸ್ಯರು ಸ್ಥಳಕ್ಕೆ ಬಂದು ಕಾಮಗಾರಿ ಸರಿಯಾಗಿಲ್ಲ, ಜೋಡಣೆ ಸಮರ್ಪಕವಾಗಿಲ್ಲ ಎಂದು ಖುದ್ದಾಗಿ ಕಂಟ್ರಾಕ್ಟ್ದಾರರಿಗೆ ವಿಷಯ ತಿಳಿಸಿದ್ದರು. ಇದಲ್ಲದೆ ಕಾಮಗಾರಿ ಮುಗಿದ ಬಳಿಕ ಗ್ರಾಮ ಸಭೆಯಲ್ಲೂ ಈ ವಿಷಯ ಪ್ರಸ್ತಾವವಾಗಿದ್ದು, ಎಂಜಿನಿಯರ್‌ ಪ್ರಮೋದ್‌ ಅವರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ ಎನ್ನಲಾಗಿದೆ. ಹೀಗಿದ್ದರೂ ಈ ಉಬ್ಬನ್ನು ಸರಿಪಡಿಸುವ ಕೆಲಸ ಮಾಡದ ಕುರಿತು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದ್ವಿಚಕ್ರ ವಾಹನಗಳ ಹರಸಾಹಸ
ರಸ್ತೆ ನೇರವಾಗಿ ಇರುವ ಕಾರಣ ದ್ವಿಚಕ್ರ ವಾಹನ ಸವಾರರು ವೇಗವಾಗಿ ಬರುತ್ತಾರೆ. ಉಬ್ಬಿನ ಮೇಲೆ ಚಲಿಸಿದಾಗ ವಾಹನವನ್ನು ಎಳೆದು ಬಿಸಾಡಿದಂತೆ ಆಗುತ್ತಿದೆ. ಕೆಲವೊಮ್ಮೆ ವಾಹನ ರಾಂಗ್‌ ಸೈಡ್‌ಗೆ ಚಲಿಸುತ್ತದೆ. ಇದರಿಂದ ಅಪಾಯ ಎದುರಾಗಲಿದೆ. ದ್ವಿಚಕ್ರ ವಾಹನ ಅಪಘಾತ ಸಂಭವಿಸಿ ಪ್ರಾಣ ಹಾನಿ ಕೂಡ ಆಗಿದೆ. 

ಉಬ್ಬು ಉಂಟಾಗಲು ಕಾರಣ ಏನು?
ರಸ್ತೆ ಸಮತಟ್ಟು ಮಾಡುವ ಕೆಲಸ ವೈಜ್ಞಾನಿಕವಾಗಿ ನಡೆದಿದ್ದರೂ ಜೋಡಿಸುವ ಕೆಲಸ ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರಸ್ತೆ ಜೋಡಿಸುವಾಗ ಉಬ್ಬು ನಿರ್ಮಾಣವಾಗಿದ್ದು, ರಸ್ತೆ ಸಂಪೂರ್ಣ ಇಳಿಜಾರಿನಂತೆ ಆಗಿದೆ. ಮುಕ್ಕಾಲು ರಸ್ತೆಯನ್ನು ಉಬ್ಬು ಆವರಿಸಿಕೊಂಡಿದೆ. ಹೊಸ ಡಾಮರು ಕಾಮಗಾರಿ ಹಾಗೂ ಹಳೆ ರಸ್ತೆ ಜೋಡಿಸುವ ಕೆಲಸ ಸಮರ್ಪಕವಾಗದಿರುವುದೇ ಉಬ್ಬು ಉಂಟಾಗಲು ಕಾರಣ ಎನ್ನಲಾಗಿದೆ.

Advertisement

ಮೊದಲೇ ತಿಳಿಸಲಾಗಿತ್ತು
ರಸ್ತೆ ಕಾಮಗಾರಿ ಸಂದರ್ಭದಲ್ಲೇ ನಾನು ತಿಳಿಸಿದ್ದೇನೆ. ಗ್ರಾಮ ಸಭೆಯಲ್ಲೂ ನಿರ್ಣಯ ಮಾಡಿದ್ದೇವೆ. ಇದೊಂದು ಅವೈಜ್ಞಾನಿಕ ಕಾಮಗಾರಿ ಆಗಿದೆ. ಮುಕ್ಕಾಲು ರಸ್ತೆಯಲ್ಲಿ ಉಬ್ಬು ಹಾಗೂ ರಸ್ತೆ ಇಳಿಜಾರು ಆಗಿರುವುದರಿಂದ ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತಿದೆ. ಈಗಾಗಲೇ ಇಲ್ಲಿ ಪ್ರಾಣ ಹಾನಿ ಕೂಡ ನಡೆದಿದೆ. ಇನ್ನಾದರೂ ಸಂಬಂಧಪಟ್ಟವರು ಗಮನಹರಿಸಬೇಕಾಗಿದೆ.
– ಪ್ರವೀಣ್‌ ಶೆಟ್ಟಿ ತಿಂಗಳಾಡಿ,
ಕೆದಂಬಾಡಿ ಗ್ರಾ.ಪಂ. ಅಧ್ಯಕ್ಷರು

ರಸ್ತೆ ಜೋಡಣೆ ಸರಿಯಾಗಿಲ್ಲ
ಕುಂಬ್ರ ಬೆಳ್ಳಾರೆ ಮುಖ್ಯ ರಸ್ತೆಯ ತಿಂಗಳಾಡಿ ಮಸೀದಿ ಬಳಿ ರಸ್ತೆ ಕಾಮಗಾರಿ ಸಂದರ್ಭ ರಸ್ತೆಯಲ್ಲಿ ಉಂಟಾದ ಉಬ್ಬಿನಿಂದ ವಾಹನ ಸವಾರರಿಗೆ ತುಂಬಾ ಸಮಸ್ಯೆಯಾಗುತ್ತದೆ. ಅವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಡೆದಿದೆ. ರಸ್ತೆ ಜೋಡಿಸುವ ಕೆಲಸ ಸರಿಯಾಗಿಲ್ಲ. ಎಂಜಿನಿಯರ್‌ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
 - ಸುಶಾ ಸುರೇಶ್‌ ಕುಮಾರ್‌
   ತಿಂಗಳಾಡಿ, ವಾಹನ ಸವಾರ 

Advertisement

Udayavani is now on Telegram. Click here to join our channel and stay updated with the latest news.

Next