Advertisement

ಬೀರಮಲೆ ಅಭಿವೃದ್ಧಿಗೆ ಮುನ್ನುಡಿ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ

10:12 PM Oct 14, 2019 | mahesh |

ಪುತ್ತೂರು: ಪರಿಸರ ಉಳಿವಿನ ಕಾಳಜಿ ತೋರಿದ ಸಾಲು ಮರದ ತಿಮ್ಮಕ್ಕನ ಹೆಸರಿನಲ್ಲಿ ಸರಕಾರದ ಆದೇಶದಂತೆ ಅರಣ್ಯ ಇಲಾಖೆಯ ಮೂಲಕ ಪುತ್ತೂರಿನಲ್ಲೂ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ನಿರ್ಮಾಣಗೊಂಡಿದೆ. ಪ್ರಕೃತಿ ರಮಣೀಯ ಪರಿಸರವಾದರೂ ಅಭಿವೃದ್ಧಿಯಲ್ಲಿ ಅವಗಣನೆಗೆ ಒಳಗಾಗಿರುವ ಬೀರಮಲೆ ಗುಡ್ಡಕ್ಕೆ ಈ ವೃಕ್ಷೋದ್ಯಾನವನ ಒಂದಷ್ಟು ಮೆರುಗು ನೀಡಲಿದೆ.

Advertisement

ರಾಜ್ಯ ಸರಕಾರ ಸಾಲುಮರದ ತಿಮ್ಮಕ್ಕ ಅವರ ಹೆಸರಿನಲ್ಲಿ ವಿವಿಧ ಕಡೆಗಳಲ್ಲಿ ವೃಕ್ಷೋದ್ಯಾನವನ ನಿರ್ಮಿಸಲು ತೀರ್ಮಾನ ಕೈಗೊಂಡು ಅಂದಿನ ಅರಣ್ಯ ಸಚಿವ ರಮಾನಾಥ ರೈ ಅವರ ಮುತುವರ್ಜಿಯಿಂದ ಪುತ್ತೂರಿಗೂ ಮಂಜೂರಾಗಿತ್ತು. ಬೀರಮಲೆ ಬೆಟ್ಟದಲ್ಲಿ 16 ಎಕ್ರೆ ಜಾಗವನ್ನು ಗುರುತಿಸಲಾಗಿತ್ತು.

60.50 ಲಕ್ಷ ರೂ.
2016ರಲ್ಲಿ ವೃಕ್ಷೋದ್ಯಾನವನಕ್ಕೆ ಮಂಜೂರಾತಿ ಲಭಿಸಿ, 2017-18ರಲ್ಲಿ 41.50 ಲಕ್ಷ ರೂ. ಹಾಗೂ 2018 -19ನೇ ಸಾಲಿನಲ್ಲಿ 19 ಲಕ್ಷ ರೂ. ಸೇರಿ ಒಟ್ಟು 60.50 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ. ಮುಖ್ಯವಾಗಿ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಉದ್ದೇಶದ ಅಭಿವೃದ್ಧಿಗಳನ್ನು ಮಾಡಲಾಗಿದೆ.

ಏನೆಲ್ಲ ಇದೆ
ಹೆಚ್ಚಿನ ಪ್ರಮಾಣದಲ್ಲಿ ಕಾಂಕ್‌ವುಡ್‌ ಬಳಕೆಯ ಮೂಲಕ ನಿರ್ಮಾಣ ಕೆಲಸಗಳನ್ನು ಮಾಡಲಾಗಿದೆ. ಆ ಮೂಲಕ ಪ್ರಾಕೃತಿಕ ಟಚ್‌ ನೀಡಲಾಗಿದೆ. ಪ್ರಕೃತಿಯ ರಮಣೀಯತೆಯ ಆಸ್ವಾದನೆಗಾಗಿ ಅಲ್ಲಲ್ಲಿ ಸುಖಾಸೀನಗಳನ್ನು ಅಳವಡಿಸಲಾಗಿದೆ. ಇದರ ಜತೆಗೆ ಗಿಡಮರಗಳ ಸುಂದರ ಪರಿಸರದ ಮಧ್ಯೆ ನಡೆದಾಡುವವರಿಗಾಗಿ “ವಾಕಿಂಗ್‌ ಪಾಥ್‌’ ನಿರ್ಮಿಸಲಾಗಿದೆ. ಮಕ್ಕಳ ಮನೋರಂಜನೆಗಾಗಿ ವಿವಿಧ ರೀತಿಯ ಅತ್ಯಾಧುನಿಕ ಆಟದ ಸಾಮಗ್ರಿಗಳನ್ನು ಅಳವಡಿಸಿಕೊಳ್ಳಲಾಗಿದೆ. ಜೋಕಾಲಿ, ಜಾರುಬಂಡಿ, ನೆಟ್‌ವಾಕ್‌, ರೋಪ್‌ ವೇ, ಕಾರಂಜಿ, ಪುಟ್ಟದಾದ ತಾವರೆಕೊಳ, ಯೋಗ ಕುಟೀರ, ಪರಿಸರ ಕಾಳಜಿ ಸಂಬಂಧ ಸಮಾಲೋಚಿಸಲು ಸಭಾಗೃಹ, ಮಾಹಿತಿನ ಸಂವಹನ ಕೇಂದ್ರ, ಶೌಚಾಲಯ, ನೀರಿನ ಸೌಲಭ್ಯಗಳನ್ನು ವ್ಯವಸ್ಥೆಗೊಳಿಸಲಾಗಿದೆ. ವೃಕ್ಷೋದ್ಯಾನದ ಪ್ರವೇಶ ದ್ವಾರವನ್ನು ಬಹಳಷ್ಟು ಸುಂದರವಾಗಿ ರೂಪಿಸಲಾಗಿದ್ದು, ಮರದಿಂದಲೇ ಮಾಡಿದ ಗೇಟು, ಬೋರ್ಡ್‌ಗಳು ಗಮನ ಸೆಳೆಯುತ್ತಿದೆ.

ವೃಕ್ಷ ವೈಭವ ಕಾಣಬೇಕಷ್ಟೆ
ವೃಕ್ಷೋದ್ಯಾನವನದಲ್ಲಿ 3,000 ವಿವಿಧ ಜಾತಿಯ ಗಿಡಗಳನ್ನು ನೆಡಲಾಗಿದೆ. ಆಲ, ಅರಳಿ, ಮಾವು, ನೇರಳೆ ಸಹಿತ ಕಾಡುಜಾತಿಯ ಗಿಡಗಳನ್ನು ನೆಡಲಾಗಿದೆ. ಈ ಮರಗಳು ಇನ್ನಷ್ಟೇ ಬೆಳೆಯಬೇಕಿವೆ. ಸದ್ಯಕ್ಕೆ ಅಕೇಶಿಯಾ ಮರಗಳೇ ವೃಕ್ಷೋದ್ಯಾನದಲ್ಲಿ ಕಾಣಿಸುವುದು ಒಂದಷ್ಟು ಹಿನ್ನಡೆಯಾಗಿದೆ. ಹಿಂದೆ ಬೆಳೆದ ಅಕೇಶಿಯಾ ಮರಗಳನ್ನು ಸದ್ಯಕ್ಕೆ ಹಾಗೆಯೇ ಬಿಡಲಾಗಿದೆ. ಮುಂದೆ ಕ್ರಮೇಣ ಅವುಗಳನ್ನು ತೆಗೆಯಲಾಗುತ್ತದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಇಲಾಖೆಗೆ ಹಸ್ತಾಂತರ ಆಗಿಲ್ಲ
ಬೀರಮಲೆ ಬೆಟ್ಟದಲ್ಲಿ “ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ’ ಡಿಪಿಆರ್‌ ಸಿದ್ಧಗೊಳಿಸಿದಂತೆ ಸುಂದರವಾಗಿ ನಿರ್ಮಾಣಗೊಂಡಿದೆ. ವಿಶೇಷವಾಗಿ ಮಕ್ಕಳಿಗೆ ಆಟದ ವ್ಯವಸ್ಥೆಗಳನ್ನು ಜೋಡಿಸಲಾಗಿದೆ. ಈ ಜಾಗ ಇನ್ನೂ ಇಲಾಖೆಗೆ ಹಸ್ತಾಂತರ ಆಗಿಲ್ಲ. ಪ್ರವೇಶಕ್ಕೆ ಸಂಬಂಧಪಟ್ಟಂತೆ ಸಣ್ಣ ಶುಲ್ಕ ನಿಗದಿ ಮಾಡುವ ಯೋಜನೆ ಇದೆಯಾದರೂ ಇನ್ನೂ ಅಂತಿಮಗೊಂಡಿಲ್ಲ.
 - ಮೋಹನ್‌ ಕುಮಾರ್‌ ಬಿ.ಜಿ., ವಲಯ ಅರಣ್ಯಾಧಿಕಾರಿ, ಪುತ್ತೂರು

ಟ್ರೀ ಪಾರ್ಕ್‌: ನಾಳೆ ಉದ್ಘಾಟನೆ
ಬೀರಮಲೆ ಟ್ರೀ ಪಾರ್ಕ್‌ ಅ. 16ರಂದು ಶಾಸಕ ಸಂಜೀವ ಮಠಂದೂರು ಅವರಿಂದ ಉದ್ಘಾಟನೆಗೊಳ್ಳಲಿದೆ. ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದ.ಕ.ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅಜಯ್‌ ಮಿಶ್ರಾ, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬೃಜೇಶ್‌ ಕುಮಾರ್‌, ಮಂಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್‌ ಎಸ್‌. ನೆಟಾಲ್ಕರ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ| ಕರಿಕಲನ್‌ ವಿ. ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next