Advertisement

ಜೈಲಿನಲ್ಲೇ ಯುವಕರಿಗೆ ಕಳ್ಳತನ ತರಬೇತಿ! ಟ್ರೈನರ್‌ ಅಚ್ಯುತ್‌ಕುಮಾರ್‌ ಸೇರಿ ಮೂವರ ಬಂಧನ

04:12 PM Oct 19, 2022 | Team Udayavani |

ಬೆಂಗಳೂರು: ಪತ್ನಿ ಜತೆ ಮನೆ ಕಳ್ಳತನ ಮಾಡಿ ಪೊಲೀಸರಿಂದ ಎರಡು ಕಾಲುಗಳಿಗೆ ಗುಂಡೇಟು ತಿಂದಿದ್ದ ಖತರ್ನಾಕ್‌ ಕಳ್ಳನೊಬ್ಬ ಜೈಲಿನಲ್ಲೇ ಇಬ್ಬರು ಯುವಕರಿಗೆ ಕಳ್ಳತನದ ತರಬೇತಿ ನೀಡಿ ಅಂಗಡಿ ಮತ್ತು ಮನೆಗಳಲ್ಲಿ ಕಳ್ಳನ ಮಾಡಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಮನೆಯಲ್ಲಿ ಚಿನ್ನದ ಸರ ಮತ್ತು ಬಟ್ಟೆ ಅಂಗಡಿಯ ಬೀಗ ಒಡೆದು ಲಕ್ಷಾಂತರ ರೂ. ಮೌಲ್ಯದ ಬಟ್ಟೆಗಳನ್ನು ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಜೆ.ಜೆ.ನಗರ ಪೊಲೀಸರು ಬಂಧಿಸಿದ್ದಾರೆ. ತುಮಕೂರಿನ ರಕ್ಷಿತ್‌(21), ಸಿದ್ದರಾಜು(20) ಮತ್ತು ಕೋಣನಕುಂಟೆ ನಿವಾಸಿ ಅಚ್ಯುತಕುಮಾರ್‌ ಅಲಿಯಾಸ್‌ ವಿಶ್ವನಾಥ ಕೋಳಿವಾಡ (35) ಬಂಧಿತರು.

ಆರೋಪಿಗಳಿಂದ 1.80 ಲಕ್ಷ ರೂ. ಮೌಲ್ಯದ 30 ಗ್ರಾಂ ಚಿನ್ನದ ಮಾಂಗಲ್ಯ ಸರ, 2 ವಾಚ್‌ ಗಳು, ಬಟ್ಟೆಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಮೇ 20ರಂದು ರಂಗನಾಥ ಕಾಲೋನಿಯಲ್ಲಿ ಅಬ್ದಲ್‌ ರೆಹಮಾನ್‌ ಎಂಬುವರ ಬಟ್ಟೆ ಅಂಗಡಿಯ ಬೀಗ ಒಡೆದು 70 ಪ್ಯಾಂಟ್‌, 150 ಶರ್ಟ್‌ ಹಾಗೂ 26 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಜೆ.ಜೆ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೈಲಿನಲ್ಲೇ ತರಬೇತಿ: ಅಚ್ಯುತ್‌ ಕುಮಾರ್‌ ಅಲಿಯಾಸ ವಿಶ್ವನಾಥ್‌ ಕೋಳಿವಾಡ ಈ ಮೊದಲು ತನ್ನ ಪತ್ನಿ ಜತೆ ಸೇರಿಕೊಂಡು ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ. ಆತನ ಉಪಟಳ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಹೀಗಾಗಿ ಕೆಲ ತಿಂಗಳ ಹಿಂದೆ ಆರೋಪಿಯ ಎರಡು ಕಾಲುಗಳಿಗೆ ಜ್ಞಾನಭಾರತಿ ಪೊಲೀಸರು ಗುಂಡೇಟು ಹೊಡೆದು ಜೈಲಿಗೆ ಕಳುಹಿಸಿದ್ದರು. ನಂತರ ಮತ್ತೆ ಅದೇ ಮಾದರಿಯ ಕೃತ್ಯದಲ್ಲಿ ಬಾಗಿ ಬಾಗಲಗುಂಟೆ ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ಸೇರಿದ್ದ. ಇದೇ ವೇಳೆ ಹಲಸೂರುಗೇಟ್‌ ಠಾಣೆ ಪೊಲೀಸರಿಂದ ಕಳ್ಳತನ ಪ್ರಕರಣದಲ್ಲಿ ರಕ್ಷಿತ್‌ ಮತ್ತು ಸಿದ್ದರಾಜು ಜೈಲು ಸೇರಿದ್ದರು.

ಈ ವೇಳೆ ಜೈಲಿನಲ್ಲಿ ಯುವಕರನ್ನು ಪರಿಚಯಿಸಿಕೊಂಡ ಅಚ್ಯುತ್‌ ಕುಮಾರ್‌, ಯುವಕರಿಗೆ ಜೈಲಿನಲ್ಲೇ ಕಳ್ಳತನದ ಬಗ್ಗೆ ತರಬೇತಿ ನೀಡುತ್ತಿದ್ದ. ಅಲ್ಲದೆ, ಆತನೇ ಜಾಮೀನು ಕೊಡಿಸಿ ಯುವಕರನ್ನು ಬಿಡುಗಡೆ ಮಾಡಿಸಿ ಕಳ್ಳತನ ಮಾಡಿಸುತ್ತಿದ್ದ. ಸಿಸಿ ಕ್ಯಾಮೆರಾ ಇಲ್ಲದ ಸ್ಥಳ, ಹೆಚ್ಚು ಜನ ಓಡಾಡದ ಸ್ಥಳಗಳಲ್ಲಿರುವ ಮನೆಗಳು ಮತ್ತು ಅಂಗಡಿಗಳ ಬೀಗ ಒಡೆದು ಕಳ್ಳತನ ಮಾಡಿಸುತ್ತಿದ್ದ. ರಕ್ಷಿತ್‌ ಮತ್ತು ಸಿದ್ದಾರಾಜು ಬಂಧಿಸಿದ ಬಳಿಕ ಅಚ್ಯುತ್‌ ಕುಮಾರ್‌ ವಿಚಾರ ಬಾಯಿಬಿಟ್ಟಿದ್ದರು. ಬಳಿಕ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.

Advertisement

ಕಿಟಕಿ ಬಳಿ ಇಟ್ಟಿದ್ದ ಮಾಂಗಲ್ಯ ಸರ ಕಳವು
ಆರೋಪಿಗಳು ಜೂನ್‌ 21ರಂದು ಚಂದ್ರಾಲೇಔಟ್‌ ಠಾಣೆ ವ್ಯಾಪ್ತಿಯಲ್ಲಿ ಮನೆಗೆ ನುಗ್ಗಿ ಮಾಂಗಲ್ಯ ಸರ ಕಳವು ಮಾಡಿ ಪರಾರಿಯಾಗಿದ್ದರು. ಮಹಿಳೆಯೊಬ್ಬರು ಸ್ನಾನ ಮಾಡಲು ಮಾಂಗಲ್ಯ ತೆಗೆದು ಕಿಟಕಿ ಪಕ್ಕದ ಟೆಬಲ್‌ ಮೇಲೆ ಇಟ್ಟು ಹೋಗಿದ್ದರು. ಈ ವೇಳೆ ಮನೆಯ ಬಾಗಿಲು ಹಾಕಿರಲಿಲ್ಲ. ಹೀಗಾಗಿ ಆರೋಪಿಗಳು ಮನೆಗೆ ನುಗ್ಗಿ ಚಿನ್ನದ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು. ಚಂದ್ರಾಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next