ಬೆಳ್ತಂಗಡಿ: ಲಕ್ಷಾಂತರ ರೂ. ಮೌಲ್ಯದ ಅಡಿಕೆ ಕದ್ದವರನ್ನು ಬೆಳ್ತಂಗಡಿ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣಾ ಎಸ್‌ಐ ರವಿ.ಬಿ ಎಸ್. ಅವರ ನೇತೃತ್ವದಲ್ಲಿ ಅಡಿಕೆ ಕಳವು ಮಾಡಿದ ಆರೋಪಿಗಳಾದ ಕಾಸರಗೋಡು ತಾಲೂಕು ರಾಜಪುರಂ ಪಾನತ್ತೂರಿ ಪಂಚಾಯತ್ ಪನತ್ತಡಿ ಗ್ರಾಮ ಕುಂಡುಪಳ್ಳಿ ಮನೆ ಕೆ. ಗಂಗಾಧರ ಕೆ.ವಿ. (37), ಎರ್ನಾಕುಲಂ ಜಿಲ್ಲೆ ಆಲುವಾ ತಾಲೂಕು ಏಯಾಟು ಮುಗಂ ಕರಕುಟ್ಟಿ ಗ್ರಾಮ, ಮುನ್ನೂರು ಪಿಳ್ಳಿ ಕಡೆಯ ಪರಂಬಿಲ್ ಮನೆ ಕುಟ್ಟಾಪಿ ಯಾನೆ ಕೆ. ಎಸ್. ಶೈನ್ (30), ಎರ್ನಾಕುಲಂ ಜಿಲ್ಲೆ ಆಲುವಾ ತಾಲೂಕು, ಪಾಲಶೇರಿ ಏಯಾಟು ಮುಗಂ ಅಂಚೆ, ಕೂರೆಕ್ಕೆಲ್ ಮನೆ ರಘು ಕೆ.ಬಿ. (27) ಅವರನ್ನು ಬಂಧಿಸಲಾಗಿದ್ದು ಒಬ್ಬ ಆರೋಪಿ ಶೈನ್ ಎಂಬಾತ ತಲೆಮರೆಸಿ ಕೊಂಡಿದ್ದಾನೆ.
ಆರೋಪಿಗಳಿಂದ ಕಳವು ಮಾಡಿದ್ದ 9.60 ಕ್ವಿಂಟಾಲ್ ಸುಲಿದ ಅಡಿಕೆ, ಕೃತ್ಯಕ್ಕೆ ಬಳಸಿದ ಇನ್ನೋವಾ ಕಾರು, ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ರೂ. 10 ಲಕ್ಷ ಆಗಬಹುದು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಮೇ 13ರಿಂದ ಮೇ15ರ ಮಧ್ಯಾವಧಿ ಯಲ್ಲಿ ನಡ ಗ್ರಾಮದ ಮಂಜೊಟ್ಟಿಯ ತೋಮಸ್ ಅವರ ಮನೆಯಿಂದ ಸುಮಾರು 1.50 ಲಕ್ಷ ರೂ. ಮೌಲ್ಯದ ಸುಲಿದ ಅಡಿಕೆಯನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಆರೋಪಿಗಳ ಪತ್ತೆ ಕಾರ್ಯದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ಪಿಎಸ್‌ಐ ರವಿ ಬಿಎಸ್, ಎಎಸ್‌ಐ ಕರುಣಾಕರ, ಎಎಸ್‌ಐ ದೇವಪ್ಪ, ಸಿಬಂದಿಗಳಾದ ರಾಜೇಶ್, ಲಾರೆನ್ಸ್ ಪಿ.ಆರ್, ವೆಂಕಟೇಶ್, ಇ.ಜಿ ತೋಮಸ್, ಪ್ರವೀಣ್, ಹರೀಶ್, ಡ್ಯಾನಿ, ಶಿವರಾಮ ರೈ, ಸತೀಶ್, ರಾಜ ಬೆಣ್ಣಿ, ಸಂತೋಷ್, ಆನಂದ, ಮಧು, ಧರ್ಮಪಾಲ್ ಭಾಗವಹಿಸಿದ್ದರು.