ವಾಡಿ: ನಿಧಿ ಶೋಧನೆಗಾಗಿ ಕಳ್ಳರು ಪುರಾತನ ದೇವಾಲಯದ ಶಿವಲಿಂಗವನ್ನು ಕಿತ್ತು ಬೀಸಾಡಿದ ಘಟನೆ ಚಿತ್ತಾಪುರ ತಾಲೂಕಿನ ನಾಲವಾರ ಹೋಬಳಿ ವಲಯದ ಸುಗೂರ (ಎನ್) ಗ್ರಾಮದಲ್ಲಿ ಜೂ.3ರ ಶನಿವಾರ ತಡರಾತ್ರಿ ನಡೆದಿದೆ.
ಗ್ರಾಮದ ಹೊರ ವಲಯದ ನಿರ್ಜನ ಪ್ರದೇಶದಲ್ಲಿರುವ ಸುಮಾರು 200 ವರ್ಷಗಳಷ್ಟು ಹಳೆಯದಾದ ಎನ್ನಲಾದ ಐತಿಹಾಸಿಕ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಳ್ಳರು ನಿಧಿಗಾಗಿ ಹುಡುಕಾಟ ನಡೆಸಿದ್ದಾರೆ.
ನಿಧಿಗಾಗಿ ಕಳ್ಳರು ಶಿವಲಿಂಗ ಕಿತ್ತು ಬೇರೆಡೆಗೆ ಇಡುವ ಮೂಲಕ ಗರ್ಭಗುಡಿಯ ನೆಲ ಅಗೆದಿದ್ದಾರೆ. ಇದಕ್ಕೂ ಮುಂಚೆ ನಿಧಿಗಳ್ಳರು ಸ್ಥಳದಲ್ಲಿ ಪೂಜೆ ಸಲ್ಲಿಸಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿ ಬಾಳೆಹಣ್ಣು, ನಿಂಬೆಹಣ್ಣು, ಕುಂಕುಮ, ಕರ್ಪೂರ, ಊದುಬತ್ತಿ, ದೀಪದ ಹಣತೆ ಪತ್ತೆಯಾಗಿವೆ.
Related Articles
ಸುಗೂರು (ಎನ್) ಗ್ರಾಮದ ಈ ಮಲ್ಲಿಕಾರ್ಜುನ ದೇವಸ್ಥಾನ ಪದೆ ಪದೇ ನಿಧಿಗಳ್ಳರ ದಾಳಿಗೆ ಒಳಗಾಗುತ್ತಿದ್ದು, ಈ ಮೊದಲು ಮೂರು ಸಲ ಇದೇ ದೇವಸ್ಥಾನದಲ್ಲಿ ನಿಧಿ ಶೋಧ ನಡೆಸಿದ ಘಟನೆಗಳು ನಡೆದಿವೆ. ಆದರೆ ಪ್ರಕರಣ ಮಾತ್ರ ದಾಖಲಿಸಿರಲಿಲ್ಲ.
ಈ ಪರಿಣಾಮ ಕಳ್ಳರು ಪತ್ತೆಯಾಗಲಿಲ್ಲ. ಈ ಬಾರಿ ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲಿಸಲು ಮುಂದಾಗಿದ್ದೇವೆ ಎಂದು ಗ್ರಾಮದ ಮುಖಂಡರೊಬ್ಬರು ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿ, ಗ್ರಾಮದಲ್ಲಿ ಒಟ್ಟು ನಾಲ್ಕು ಐತಿಹಾಸಿಕ ಶಿವಲಿಂಗಗಳಿವೆ. ಮೂರು ದೇಗುಲ ಸುರಕ್ಷಿತವಾಗಿವೆ. ಆದರೆ ಊರ ಹೊರಗಿನ ದೇವಸ್ಥಾನಕ್ಕೆ ಪ್ರತಿಸಲವೂ ಕಳ್ಳರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಗ್ರಾಮಸ್ಥರೇ ಯಾರಾದರೂ ಈ ಕೃತ್ಯ ಎಸಗುತ್ತಿರಬಹುದಾ ಎಂಬ ಅನುಮಾನ ಕಾಡುತ್ತಿದೆ. ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಮುಖಂಡರಾದ ಭೀಮರೆಡ್ಡಿಗೌಡ ಕುರಾಳ, ಸಿದ್ದುಗೌಡ ಕುರಾಳ ಆಗ್ರಹಿಸಿದ್ದಾರೆ.
ವಾಡಿ ಠಾಣೆಯ ಪಿಎಸ್ ಐ ಸುದರ್ಶನ ರೆಡ್ಡಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.