ಹೂಲಗೇರಾ ಗ್ರಾಮದ ಕೃಷಿಕ ಶರಣಪ್ಪ ನಾಗರಾಳ ಅವರು ಹನುಮನಾಳಕ್ಕೆ ಬೀಗರ ಮನೆಗೆ ಹೋಗಿದ್ದರು. ಮನೆಯ ಉಳಿದ ಸದಸ್ಯರು ಸದರಿ ಮನೆಗೆ ಬೀಗ ಹಾಕಿ ಮೇಲಂತಸ್ತಿನ ಮನೆಯಲ್ಲಿ ಮಲಗಿದ್ದರು. ಭಾನುವಾರ ತಡರಾತ್ರಿ 11ರ ವೇಳೆಗೆ ಸದ್ದು ಕೇಳತೊಡಗಿದಾಗ ಎಚ್ಚರಗೊಂಡ ಮನೆಯವರು ಇಣುಕಿ ನೋಡಿದಾಗ ಮನೆಯ ಬಾಗಿಲು ತೆಗೆದಿತ್ತು. ಕೂಡಲೇ ಮನೆ ಹೊಕ್ಕ ಕಳ್ಳನನ್ನು ಹಿಡಿಯಲು ಬಾಗಿಲ ಬಳಿ ಕಾದು ನಿಂತಾಗ ಚಾಲಾಕಿ ಕಳ್ಳ ಕದ್ದ ಹಣ ಜೇಬಿನಲ್ಲಿ ತುರುಕಿಕೊಂಡು, ಸಿಕ್ಕಿ ಹಾಕಿಕೊಳ್ಳುವ ಸಂಕಟದಲ್ಲಿ ಹಿಂಭಾಗಿಲು ಮುರಿದು ಕತ್ತಲಿನಲ್ಲಿ ಓಟ ಕಿತ್ತಿದ್ದ. ಎಚ್ಚೆತ್ತ ಸ್ಥಳೀಯರು ಬೆನ್ನತ್ತಿದರು. ಓಡುವ ಕಳ್ಳನನ್ನು ಹಿಡಿಯಲು ಸಾದ್ಯವಾಗದೇ ಇದ್ದಾಗ ಕಲ್ಲು ಬೀಸಿದರು. ಬೀಸಿದ ಕಲ್ಲಿನೇಟಿಗೆ ಕಳ್ಳ ಬಿದ್ದು ಸಿಲುಕಿಕೊಂಡಿದ್ದ. ಆಗ ಸ್ಥಳೀಯರು ಕಳ್ಳನನ್ನು ಕಟ್ಟಿ ಹಾಕಿ ಧರ್ಮದೇಟು ನೀಡಿ ಹಣ್ಣುಗಾಯಿ ನೀರುಗಾಯಿ ಮಾಡಿದ್ದಾರೆ. ಕೂಡಲೇ ಹನುಮಸಾಗರ ಪೊಲೀಸ್ ಠಾಣೆಯ ಪಿಎಸೈ ಅಶೋಕ ಬೇವೂರು ಅವರಿಗೆ ಮಾಹಿತಿ ನೀಡಿದ್ದರಿಂದ ಕಳ್ಳನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.