ಹೈದರಾಬಾದ್: ಬ್ಯಾಂಕ್ ಕಳ್ಳತನ ಮಾಡಲು ಬಂದ ಕಳ್ಳನೊಬ್ಬ ಬ್ಯಾಂಕ್ ನ ಭದ್ರತಾ ವ್ಯವಸ್ಥೆಯನ್ನು ಹೊಗಳಿ ಹಿಂತಿರುಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಆ.31 ರ ಗುರುವಾರ ರಾತ್ರಿ ತೆಲಂಗಾಣ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಈ ಘಟನೆ ನಡೆದಿದ್ದು, ಕಳ್ಳನೊಬ್ಬ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾನೆ.
ಬ್ಯಾಂಕ್ ಲೂಟಿ ಮಾಡಲು ವ್ಯಕ್ತಿಯೊಬ್ಬ ತೆಲಂಗಾಣ ಗ್ರಾಮೀಣ ಬ್ಯಾಂಕ್ ಗೆ ರಾತ್ರಿಯ ವೇಳೆ ಬಂದಿದ್ದಾನೆ. ಕಳ್ಳತನಗೈದು ಪರಾರಿ ಆಗುವ ಯೋಜನೆಯೊಂದಿಗೆ ಬಂದಿದ್ದ ಕಳ್ಳ, ಹಾಗೆ ಮಾಡದೆ ಪತ್ರವೊಂದನ್ನು ಬರೆದು ಪರಾರಿ ಆಗಿದ್ದಾನೆ.
ಫಿಂಗರ್ ಪ್ರಿಂಟ್ ಬಳಸಿ ಕಳ್ಳ ಬ್ಯಾಂಕ್ ನಲ್ಲಿನ ನಗದನ್ನು ಲೂಟಿ ಮಾಡಲು ಯತ್ನಿಸಿದ್ದಾನೆ. ಆದರೆ ಅದು ಸಾಧ್ಯವಾಗದ ಕಾರಣ ಕಳ್ಳ ಬೇಸತ್ತು, ಪತ್ರವೊಂದನ್ನು ಬರೆದು ತೆರಳಿದ್ದಾನೆ.
“ಇಲ್ಲಿ ನನ್ನ ಫಿಂಗರ್‌ಪ್ರಿಂಟ್‌ಗಳು ಇರುವುದಿಲ್ಲ. ಉತ್ತಮ ಭದ್ರತಾ ವ್ಯವಸ್ಥೆಯನ್ನು ಬ್ಯಾಂಕ್ ಹೊಂದಿದೆ. ನನಗೆ ಒಂದು ರೂಪಾಯಿಯನ್ನು ಪಡೆಯಲು ಸಾಧ್ಯವಾಗಲಿಲ್ಲ. ಆದ್ದರಿಂದ ನನ್ನನ್ನು ಹಿಡಿಯಬೇಡಿ” ಎಂದು ಪತ್ರವೊಂದನ್ನು ಬ್ಯಾಂಕ್ ನಲ್ಲೇ ಇಟ್ಟು ಕಳ್ಳ ಪರಾರಿ ಆಗಿದ್ದಾನೆ.
ಕಳ್ಳನ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳ್ಳ ಮುಖಕ್ಕೆ ಮುಸುಕು ಹಾಕಿಕೊಂಡಿದ್ದಾನೆ. ಕಳ್ಳ ಸ್ಥಳೀಯರೇ ಹೊರತು ಬ್ಯಾಂಕರ್ ಅಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ಯಾಂಕ್ ನಿಂದ ಯಾವುದೇ ಮೌಲ್ಯದ ವಸ್ತುಗಳು ಕಳ್ಳತನವಾಗಿಲ್ಲ ಎಂದು ಬ್ಯಾಂಕ್ ನೌಕರರು ಖಚಿತಪಡಿಸಿದ್ದಾರೆ.