ಮಂಡ್ಯ: ವೃದ್ಧೆಯಿಂದ ಹಣ ಕಸಿದು ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ವೃದ್ಧೆಯೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಬುಧವಾರ ನಗರದಲ್ಲಿ ನಡೆದಿದೆ. ಮಹಾರಾಷ್ಟ್ರ ರಾಜ್ಯದ ನಾಗ್ಪುರದ ಅನಿಲ್‌ರಾಜ್ ಬಂಧಿತ ವ್ಯಕ್ತಿ. ವೃದ್ಧೆ ಕಮಲಮ್ಮ ಅವರು ಸ್ತ್ರೀ ಶಕ್ತಿ ಸ್ವಹಾಯ ಸಂಘ, ಧರ್ಮಸ್ಥಳ ಸಂಘದ ಹಣವನ್ನು ನಗರದ ಯೂನಿಯನ್ ಬ್ಯಾಂಕ್‌ನಲ್ಲಿ 31 ಸಾವಿರ ರೂ.ಡ್ರಾ ಮಾಡಿಕೊಂಡು ಅಲ್ಲೇ ಕುಳಿತು ನೋಟುಗಳನ್ನು ಎಣಿಸುತ್ತಿದ್ದರು.
ಪಕ್ಕದಲ್ಲೇ ಕುಳಿತ್ತಿದ್ದ ಅನಿಲ್‌ರಾಜ್, ಹಣ ಎಣಿಸುತ್ತಿದ್ದ ಕಮಲಮ್ಮ ಅವರನ್ನು ಕುರಿತು ಅಜ್ಜಿ ನೋಟುಗಳು ಚೆನ್ನಾಗಿಲ್ಲ ಎಂದಿದ್ದಾನೆ. ತಕ್ಷಣ ಅಜ್ಜಿಯು ಯಾವ ನೋಟು ಚೆನ್ನಾಗಿಲ್ಲ ನೋಡಪ್ಪಾ ಎನ್ನುತ್ತಾ ನೋಟುಗಳನ್ನು ಹಿಡಿದಿದ್ದಾಳೆ. ಆರೋಪಿಯು ಎಲ್ಲ ಹಣವನ್ನೂ ಕಸಿದುಕೊಂಡು ಓಡಿಹೋಗಲು ಪ್ರಯತ್ನಿಸಿದ್ದಾನೆ. ತಕ್ಷಣವೇ ಕಳ್ಳಕಳ್ಳನೆಂದು ಕೂಗುತ್ತಾ ಆತನ ಹಿಂದೆಯೇ ಓಡಿದ ಮಹಿಳೆಯು ಆರೋಪಿಯನ್ನು ತಾನೇ ಹಿಡಿದಿದ್ದಾಳೆ.
ಇದನ್ನೂ ಓದಿ:ಸಿದ್ಧರಾಮಯ್ಯನವರೇ ಸೆಗಣಿ ಎತ್ತುವುದರಿಂದ ಏನೂ ಆಗುವುದಿಲ್ಲ, ಗೋವಿನ ಆರಾಧನೆ ಮಾಡಬೇಕು: ನಳಿನ್
ಅಷ್ಟರಲ್ಲಿ ಅಕ್ಕಪಕ್ಕದಲ್ಲಿದ್ದ ಜನರು ಆರೋಪಿಯನ್ನು ಸುತ್ತುವರಿದು ಧರ್ಮದೇಟು ನೀಡಿದ್ದಾರೆ. ಕೆಲವರು ರಸ್ತೆ ಬದಿಯಲ್ಲೇ ಕಳ್ಳನನ್ನು ಕೂರಿಸಿ ಕಲ್ಲುಗಳಿಂದ ಹೊಡೆದಿದ್ದಾರೆ. ಇದರಿಂದ ಆತನ ದೇಹದಿಂದ ರಕ್ತವೂ ಬಂದಿದೆ. ಕೆಲವೊಮ್ಮೆ ಈತ ತಾನು ಗಾಂಧಿ ನಗರ ನಿವಾಸಿಯೆಂದು, ಮತ್ತೂಮ್ಮೆ ಗುತ್ತಲುನಿವಾಸಿಯೆಂದು ಹೇಳುತ್ತಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು
ಆರೋಪಿಯನ್ನು ತಮ್ಮ ವಶಕ್ಕೆ ಪಡೆದುಕೊಂಡು, ವಿಚಾರಣೆಗೊಳಪಡಿಸಿದಾಗ ಆತನ ಬಳಿಯಿದ್ದ ಗುರುತಿನ ಪತ್ರದಿಂದ ನಾಗ್ಪುರ ನಿವಾಸಿ ಅನಿಲ್‌ರಾಜ್ ಎಂಬುದು ಗೊತ್ತಾಗಿದೆ.
ನಗರದ ಶಂಕರ ನಗರದ ನಿವಾಸಿ ಕಮಲಮ್ಮ ನೀಡಿದ ದೂರಿನ ಮೇಲೆ ಮಂಡ್ಯ ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.