ಮಂಗಳೂರು: ಕಳೆದ ವರ್ಷದ ನವೆಂಬರ್ ನಲ್ಲಿ ನಗರದ ಕೆಎಸ್ ರಾವ್ ರಸ್ತೆಯ ಬಳಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಖತರ್ನಾಕ್ ಕಳ್ಳನನ್ನು ಸೆರೆ ಹಿಡಿದಿದ್ದಾರೆ.
ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 22ಕ್ಕೂ ಹೆಚ್ಚು ಪ್ರಕರಣಗಳು ಮತ್ತು ವಿವಿಧ ನ್ಯಾಯಾಲಯಗಳಲ್ಲಿ 22 ವಾರೆಂಟ್ ಹೊಂದಿದ್ದ ಕುಖ್ಯಾತ ಕಳ್ಳನನ್ನು ಮಂಗಳೂರು ಉತ್ತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಬೆಳ್ತಂಗಡಿಯ ಪಡಂಗಡಿ ಗ್ರಾಮದ ಹಮೀದ್ ಕುಂಞಮೋನು ಜಾಫರ್ (48 ವ) ಎಂದು ಗುರುತಿಸಲಾಗಿದೆ.
ನವೆಂಬರ್ 16ರ ತಡರಾತ್ರಿ ಕೆಎಸ್ ರಾವ್ ರಸ್ತೆಯ ನಲಪಾಡ್ ಅಪ್ಸರಾ ಛೇಂಬರ್ಸ್ ಕಟ್ಟಡದ ನೆಲಮಹಡಿಯಲ್ಲಿನ ಹೂವು ವ್ಯಾಪಾರದ ಹೋಲ್ ಸೇಲ್ ಅಂಗಡಿಯಲ್ಲಿ ಸುಮಾರು 9 ಲಕ್ಷ ರೂ ಕಳವಾಗಿತ್ತು. ಇದರ ಜೊತೆ ಸಿಸಿ ಕ್ಯಾಮರಾದ ಡಿವಿಆರ್ ಕೂಡಾ ಕಳವು ಮಾಡಲಾಗಿತ್ತು.
ಇದನ್ನೂ ಓದಿ:ನೇಪಾಳ: 72 ಜನರಿದ್ದ ವಿಮಾನ ಪತನ; ರನ್ ವೇಯಲ್ಲೇ ಹೊತ್ತಿ ಉರಿದ ವಿಮಾನ
Related Articles
ಈ ಬಗ್ಗೆ ತನಿಖೆ ನಡೆಸಿದ ಮಂಗಳೂರು ಉತ್ತರ ಠಾಣೆ ಪೊಲೀಸರು ಜ.14ರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಜ್ಯೋತಿ ಸರ್ಕಲ್ ಬಳಿ ಆರೋಪಿ ಹಮೀದ್ ನನ್ನು ರಾಡ್ ನೊಂದಿಗೆ ಬಂಧಿಸಿದ್ದಾರೆ.
ಹೂತಿಟ್ಟಿದ್ದ ಆರೋಪಿ: ಹೂವಿನ ಅಂಗಡಿಯಲ್ಲಿ 9 ಲಕ್ಷ ರೂ ಹಣವನ್ನು ಕಳವು ಮಾಡಿದ್ದ ಆರೋಪಿ ಹಮೀದ್, ಆ ಹಣವನ್ನು ನಗರದಲ್ಲಿ ಒಂದೆಡೆ ಹೂತಿಟ್ಟಿದ್ದ. ಬಳಿಕ ಪರಾರಿಯಾಗಿದ್ದ. ಆದರೆ ಆತ ಹಣವನ್ನು ಹೂತಿಟ್ಟಿದ್ದ ಜಾಗದಲ್ಲಿ ಬಳಿಕ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಈ ವೇಳೆ ಜೆಸಿಬಿಯಿಂದ ನೆಲ ಅಗೆಯುವಾಗ ಜೆಸಿಬಿ ಚಾಲಕನಿಗೆ ದುಡ್ಡಿನ ಗಂಟು ಸಿಕ್ಕಿತ್ತು.
ಇದೀಗ ಹಮೀದ್ ಬಂಧನದ ಬಳಿಕ ಆತ ಹಣವನ್ನು ಹೂತಿಟ್ಟ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಬಳಿಕ ಪೊಲೀಸರು ತಪಾಸಣೆ ನಡೆಸಿದ್ದು 5.80 ಲಕ್ಷ ರೂ ವಶಕ್ಕೆ ಪಡೆದಿದ್ದಾರೆ.