Advertisement

ತಾವು ಮುರಿದು ನಮ್ಮನ್ನು ಬದುಕಿಸಿದ ಅಡಿಕೆ ಮರಗಳು

10:16 AM Aug 27, 2019 | Team Udayavani |

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೆಲವು ಗ್ರಾಮಗಳು ಈ ಬಾರಿಯ ನೆರೆಯಲ್ಲಿ ಕೊಚ್ಚಿ ಹೋಗಿವೆ. ಆ ಗ್ರಾಮಗಳನ್ನು ಪುನರ್‌ರೂಪಿಸುವುದು, ಸಂತ್ರಸ್ತರಿಗೆ ಬದುಕನ್ನು ಕಟ್ಟಿಕೊಡುವುದು ಎಲ್ಲರ ಹೊಣೆಗಾರಿಕೆ. ಸರಕಾರ, ಜನಪ್ರತಿನಿಧಿಗಳು, ಸಂಘ -ಸಂಸ್ಥೆಗಳು ನೊಂದವರ ಬದುಕ ಕಟ್ಟಲು ಹೊರಟಿವೆ. ಬನ್ನಿ , ಜತೆಗೂಡೋಣ.

Advertisement

ಬೆಳ್ತಂಗಡಿ: ಮಳೆಗಾಲ ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಸಮಯ. ಆದರೆ ಆ ದಿನ ಮಾತ್ರ ಅಪ್ಪಳಿಸಿದ ಪ್ರವಾಹ ಒಪ್ಪೊತ್ತು ಊಟಕ್ಕೂ ಪರದಾಡುವಂತೆ ಮಾಡಿದೆ, ಕೃಷಿ ಬದುಕನ್ನು ಕಸಿದಿದೆ.

“ನಾನು ಅಂದು ಮನೆಯಲ್ಲಿರಲಿಲ್ಲ. ನೆರೆ ಮನೆಯವರನ್ನು ಆಸ್ಪತ್ರೆಗೆ ಕರೆದುಕೊಂಡು ಮಂಗಳೂರಿಗೆ ತೆರಳಿದ್ದೆ. ಮನೆಯಲ್ಲಿ ಅಮ್ಮ ಅಪ್ಪ ಇಬ್ಬರೇ ಇದ್ದರು. ಹತ್ತಿರದ ಇನ್ನೊಂದು ಮನೆಯಲ್ಲಿರುವ ಅಣ್ಣ ಮತ್ತವರ ಮನೆ ಮಂದಿ ಅಂದು ದೇವರಂತೆ ನಮ್ಮ ಮನೆಗೆ ಊಟಕ್ಕೆ ಬಂದಿದ್ದರು. ಇನ್ನೇನು ಅನ್ನ ಕಲಸಿ ಬಾಯಿಗಿಡಬೇಕು ಎನ್ನುವಷ್ಟರಲ್ಲಿ ಭೀಕರ ಸ್ಫೋಟದಂತಹ ಸದ್ದು ಕೇಳಿಸಿತು, ಕಣ್ಣು ಮಿಟುಕಿಸುವಷ್ಟರಲ್ಲಿ ನೀರು ಮನೆಯೊಳಗೆ ನುಗ್ಗಿತ್ತು. ಹೊರ ಧಾವಿಸಿ ನೋಡಿದರೆ ಮನೆಯೆದುರಿನ ತೋಡು ಹೊಳೆಯಾಗಿತ್ತು. ಭಾರೀ ಮರಗಳು ಪರಸ್ಪರ ಲಟಲಟನೆ ಹೊಡೆದುಕೊಳ್ಳುತ್ತ ಬೆಂಕಿಕಡ್ಡಿಗಳಂತೆ ತೇಲಿಬರುತ್ತಿದ್ದವು. ಅಣ್ಣಂದಿರು ಅಪ್ಪ, ಅಮ್ಮನನ್ನು ಹೊತ್ತುಕೊಂಡೇ ಓಡಿ ಸಂಬಂಧಿಕರ ಮನೆ ಸೇರಿದರು’ ಎಂದು ಮಿತ್ತಬಾಗಿಲು ಕಲ್ಲೊಲೆಯ ಸತೀಶ್‌ ಗೌಡ ಆ ದಿನದ ಘಟನೆಯ ಭೀಕರತೆಯನ್ನು ನೆನೆದರು.


ತಂದೆಗೆ ಹೃದಯ ಸಂಬಂಧಿ ಕಾಯಿಲೆಯಿದೆ, ಹೀಗಾಗಿ ಪ್ರವಾಹ ಅಪ್ಪಳಿಸುವುದಕ್ಕೆ ನಾಲ್ಕು ದಿನ ಹಿಂದೆಯಷ್ಟೇ ನಮ್ಮ ಮನೆಗೆ ಬಂದಿದ್ದರು. ಅಂದು ಅಣ್ಣಂದಿರಲ್ಲದೇ ಹೋಗಿದ್ದರೆ ಅಥವಾ ರಾತ್ರಿ ಸಮಯದಲ್ಲಿ ಪ್ರವಾಹ ಅಪ್ಪಳಿಸಿದ್ದರೆ ನಾನೀಗ ನಿಮಗೆ ಮಾತಿಗೆ ಸಿಗುತ್ತಿರಲೇ ಇಲ್ಲ… ಎಂದು ದುಃಖೀಸಿದರು ಸತೀಶ್‌.

ಅಷ್ಟರಲ್ಲಿ ಮಾಪಲ್ದಡಿ ಸೀತಮ್ಮ ತಡಬಡಾಯಿಸುತ್ತಾ ಬಂದರು. “ನಾನು, ಮಗನ ಸಂಸಾರ ಮನೆಯಲ್ಲಿದ್ದೆವು. ನನಗೆ ನಡೆಯಲು ಸಾಧ್ಯವಿಲ್ಲ. ಮೊನ್ನೆ ಬಂದ ನೀರು ಯಾವ ಕಾಡಿನ ಒಳಗಿತ್ತೋ! ಅಬ್ಟಾ, ನನಗಂತೂ ಸೊಂಟದ ವರೆಗೆ ನೀರು ಬಂದಾಗ ನಾನು ಎಲ್ಲಿದ್ದೇನೆ ಎಂಬುದೇ ಗೊತ್ತಾಗಲಿಲ್ಲ. ನಮ್ಮ ಮನೆಗೆ ಬರಬೇಕಾದರೆ ಗುಡ್ಡ ಏರಿ ಬರಬೇಕು. ಆದರೆ ಮೊನ್ನೆ ನೀರು ನಮ್ಮನ್ನೇ ಗುಡ್ಡೆ ಹತ್ತುವಂತೆ ಮಾಡಿತು. ಕಣ್ಣೆದುರೇ ಮನೆಯ ಮುಂದಿನ ಭಾಗ ಬಿದ್ದು ಹೋಯಿತು. ಸೊಸೆ ನನ್ನನ್ನು ಎಳೆದುಕೊಂಡೇ ಓಡಿದಳು, ಒಂದು ವರ್ಷದ ಮಗು ಕೈಯಲ್ಲಿತ್ತು. ಮಗ ಮನೆಯಲ್ಲಿ ಬೇರೆ ಇರಲಿಲ್ಲ, ನಾವು ಜೀವದಾಸೆ ಬಿಟ್ಟಿದ್ದೆವು. ಇದೆಲ್ಲ ತಾಸುಗಟ್ಟಲೆಯ ಮಾತಲ್ಲ; 5 ನಿಮಿಷದೊಳಗಿನ ಕತೆ. ನಮ್ಮ ಮನೆಯಲ್ಲಿದ್ದ 20 ಪವನ್‌ ಚಿನ್ನ ಸಹಿತ ಸೊತ್ತುಗಳೆಲ್ಲ ನೀರಿನಲ್ಲಿ ಕೊಚ್ಚಿ ಹೋಗಿವೆ. ಬಾಡಿಗೆ ಮನೆಯೇ ನಮಗೀಗ ಗತಿ’ ಎಂದರು ಸೀತಮ್ಮ. ಅವರ ಕಣ್ಣುಗಳಲ್ಲಿ ಅವಿತಿದ್ದ ನೋವು ತುಳುಕಲು ಕಾಯುತ್ತಿತ್ತು.


ನೆರೆ ಆವರಿಸಿದ ಪ್ರದೇಶ ಮರು ನಿರ್ಮಾಣ
ಮಿತ್ತಬಾಗಿಲು ಗ್ರಾಮದ ಕುಕ್ಕಾವು ಪ್ರದೇಶ ಈಗ ನಿಧಾನವಾಗಿ ಮರುನಿರ್ಮಾಣದೆಡೆಗೆ ಸಾಗುತ್ತಿದೆ. ಸೇತುವೆ ಸಂಪರ್ಕ ರಸ್ತೆ ಕಡಿದು 20 ಕಿ.ಮೀ. ಸುತ್ತಿ ಬರಬೇಕಿತ್ತು. ಸದ್ಯ ಕಾಮಗಾರಿ ವೇಗದಿಂದ ಸಾಗುತ್ತಿದೆ. ಎಂಜಿನಿಯರ್‌ ಪರಿಶೀಲಿಸಿದ ಬಳಿಕ ಬಸ್‌ ಓಡಾಟಕ್ಕೆ ಅವಕಾಶ ಲಭಿಸಲಿದೆ. ಕೆಸರು ನುಗ್ಗಿದ ಮನೆಗಳೆಲ್ಲ ಸ್ವತ್ಛವಾಗುತ್ತಿವೆ. ಶಾಲಾ ಮಕ್ಕಳು, ಸ್ವಯಂಸೇವಾ ಸಂಘ ಸಂಸ್ಥೆಗಳು ನೆರವಿನ ಹಸ್ತ ಚಾಚಿವೆ. ವಿಸ್ತರಿಸಿದ ಹೊಳೆಯನ್ನು ಎರಡು ಬದಿ ಕಲ್ಲು ರಾಶಿ ಹಾಕಿ ಕುಗ್ಗಿಸುವ ಪ್ರಯತ್ನ ಮಾಡಲಾಗಿದೆ. ಆಹಾರ ಸಾಮಗ್ರಿಯ ಕಿಟ್‌ ವಿತರಿಸಲಾಗಿದ್ದು, ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕಾಮಗಾರಿ ಹಮ್ಮಿಕೊಂಡಿದೆ. ಗ್ರಾ.ಪಂ.ನಿಂದ ನಷ್ಟದ ಕುರಿತು ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ಕುಕ್ಕಾವು ಗ್ರಾಮದಂಚಿನ ಯಶೋಧರ, ಸತೀಶ್‌ ಗೌಡ, ವಿಠಲ ಗೌಡ, ಬೂಚಗೌಡ, ಪದ್ಮನಾಭ ಮಂಟಮೆ, ಅನಿಲ, ಶಶಿಧರ, ಶಿವಣ್ಣ ಗೌಡ, ವಿಶ್ವನಾಥ, ದಿನೇಶ್‌ ಸೇರಿದಂತೆ 20ಕ್ಕೂ ಹೆಚ್ಚಿನ ಮನೆಗಳಿಗೆ ನೀರು ನುಗ್ಗಿದ್ದು, ಸದ್ಯ ಅವರು ಬಾಡಿಗೆ ಮನೆಯಲ್ಲಿ ವಾಸಿಸಲು ನಿರ್ಧರಿಸಿದ್ದಾರೆ.

ಅಡಿಕೆ ಮರಗಳಲ್ಲದಿದ್ದರೆ ಮನೆಯೇ ಇರುತ್ತಿರಲಿಲ್ಲ
“ಸಾಗರವಾಗಿ ಹರಿದು ಬಂದ ನೀರಿನೊಂದಿಗೆ ತೇಲಿಬಂದದ್ದು ಮರಗಳ ರಾಶಿ. ನಮ್ಮ ತೋಟದ ಅಡಿಕೆ ಮರಗಳು ತಾವು ಮುರಿದುಹೋದರೂ ಆ ಮರಗಳ ರಾಶಿಯನ್ನು ತಡೆದವು. ಇಲ್ಲದಿದ್ದರೆ ನಮ್ಮ ಮನೆಯ ಅವಶೇಷವೂ ಸಿಗುತ್ತಿರಲಿಲ್ಲ’
ಎಂದು ವಿಠಲ ಗೌಡ ಕಲ್ಲೊಲೆ ಕಣ್ಣಲ್ಲೇ ಭೀಕರತೆಯನ್ನು ತೆರೆದಿಟ್ಟರು. “ನನಗೆ ತಿಳಿದಿರುವಂತೆ ನಮ್ಮ ತಂದೆಯ ಕಾಲದಿಂದಲೇ ಇಲ್ಲಿ ವಾಸವಾಗಿದ್ದೇವೆ. ಎಷ್ಟೇ ಮಳೆ ಬಂದರೂ ಎರಡು ಬಾರಿ ನೀರು ಉಕ್ಕೇರುತ್ತದೆ, ಬಳಿಕ ಶಾಂತವಾಗುತ್ತದೆ. ಈ ಬಾರಿಯೂ ಅದೇ ರೀತಿ ಅಂದುಕೊಂಡಿದ್ದೆವು. ಆದರೆ ಹಾಗಾಗಲಿಲ್ಲ. ನೀರು ತೋಟದೊಳಗೆ ನುಗ್ಗಿದ ಮರುಕ್ಷಣವೇ ಮನೆಯನ್ನೂ ಬಿಡಲಿಲ್ಲ. ನಮ್ಮದು ಮಣ್ಣಿನ ಇಟ್ಟಿಗೆ ಮನೆ, ಕೊಟ್ಟಿಗೆಯಲ್ಲಿದ್ದ ಗೊಬ್ಬರ ನೀರಲ್ಲಿ ಕೊಚ್ಚಿಹೋಗಿ ಮರಳಿನ ರಾಶಿ ತುಂಬಿದೆ. ಮನೆಯಲ್ಲಿ ವಾಸವಿರಲು ಸಾಧ್ಯವಿಲ್ಲ. ನಾನು ಅಂಗಡಿಯಲ್ಲೇ ರಾತ್ರಿ ಕಳೆಯುತ್ತಿದ್ದೇನೆ. ಇರುವ ಒಂದೆಕರೆ ಜಾಗದಲ್ಲಿ ಎಲ್ಲಿ ನೋಡಿದರಲ್ಲಿ ಮರಳೇ ತುಂಬಿದೆ. ಏನು ಮಾಡುವುದು ತೋಚುತ್ತಿಲ್ಲ ಎಂದು ವಿವರಿಸಿದರು.

Advertisement

ನಮಗೆ ಅಲ್ಪಸ್ವಲ್ಪ ಜಾಗ, ಮನೆಯಿತ್ತು. ನಾನು- ಮಕ್ಕಳು ಹತ್ತಾರು ವರ್ಷಗಳಿಂದ ಅಲ್ಲಿ ಬದುಕಿ ಬಾಳಿದವರು. ನಮ್ಮ ಮನೆಯಲ್ಲಿದ್ದ 20 ಪವನ್‌ ಚಿನ್ನ, ಕಪಾಟು ಸಹಿತ ಎಲ್ಲವೂ ನೆರೆಯಲ್ಲಿ ಕೊಚ್ಚಿ ಹೋಗಿವೆ. ಸ್ಥಳೀಯ ಪದ್ಮನಾಭ ಅವರು ತನಗೆ ಸಿಕ್ಕಿದ 2 ಸರಗಳನ್ನು ಹಿಂದಿರುಗಿಸಿ ದ್ದಾರೆ. ಉಟ್ಟ ಬಟ್ಟೆ ಹೊರತು ಬೇರೇನೂ ಉಳಿಯಲಿಲ್ಲ.
-ಸೀತಮ್ಮ, ಮಾಪಲ್ದಡಿ

ಒಂದೆಕರೆ ಸ್ಥಳದಲ್ಲಿ ಹೇಗೋ ಜೀವನ ಸಾಗಿಸುತ್ತಿದ್ದವರು ನಾವು. ಈಗ ಇರುವ ಕೃಷಿಭೂಮಿಯಲ್ಲೂ ಮರಳು ರಾಶಿ ಕುಳಿತಿದೆ. ಅಡಿಕೆ ಸಸಿ ಉಳಿದರೂ ನಮಗೆ ಆ ಮನೆಯಲ್ಲಿ ಉಳಿಯುವ ಧೈರ್ಯವಿಲ್ಲ. ಸಣ್ಣ ಮಕ್ಕಳು ಜತೆಗಿರುವುದರಿಂದ ಮನೆ ಬಿಟ್ಟಿದ್ದೇವೆ.
-ವಿಠಲ ಗೌಡ‌, ಕಲ್ಲೊಲೆ

ನಮ್ಮದು ಮಣ್ಣಿನ ಗೋಡೆಯ ಮನೆ. ಅಲ್ಲಿ ವಾಸಿಸಲು ಭಯವಾಗುತ್ತಿದೆ. ಈಗ ಅಣ್ಣನ ಮನೆಯಲ್ಲಿ ವಾಸವಾಗಿ ದ್ದೇವೆ. ಮಳೆಗಾಲಕ್ಕೆ ಶೇಖರಿಸಿದ್ದ 200 ತೆಂಗಿನ ಕಾಯಿ, ಅಡಿಕೆ ಗಿಡಗಳೆಲ್ಲವೂ ಹೋಗಿವೆ. 40 ಸಾವಿರ ರೂ. ಮೌಲ್ಯದ ಯಂತ್ರೋಪಕರಣ ಗಳು ನಾಶವಾಗಿವೆ.
– ಸತೀಶ್‌, ಕಲ್ಲೊಲೆ

-  ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next